ಮೊದಲಿನಂತೆ ಪಾರ್ಕಿಂಗ್ ಅವಕಾಶ ಕಲ್ಪಿಸಿ

ಸಂಸದ ಡಾ.ಕೆ.ಸುಧಾಕರ್ ಸೂಚನೆ
ಸಂಸದ ಡಾ.ಕೆ.ಸುಧಾಕರ್ ಸೂಚನೆ
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ಟ್ಯಾಕ್ಸಿ ಚಾಲಕರಿಗೆ ಮೊದಲಿನಂತೆಯೇ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಬೇಕು, ಅದಕ್ಕೆ ಪೂರಕವಾಗಿ ನಿಯಮ ರೂಪಿಸಬೇಕೆಂದು ಸಂಸದ ಡಾ.ಕೆ.ಸುಧಾಕರ್ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಏರ್‌ಪೋರ್ಟ್‌ನಲ್ಲಿ ಉದ್ಘವಿಸಿರುವ ಖಾಸಗಿ ಟ್ಯಾಕ್ಸಿ ನಿಲುಗಡೆ ಸಮಸ್ಯೆ ಹಿನ್ನೆಲೆಯಲ್ಲಿ ಟ್ಯಾಕ್ಸಿ ಚಾಲಕರು ಹಾಗೂ ಪ್ರಾಧಿಕಾರದ ನಡುವೆ ಏರ್‌ಪೋರ್ಟ್‌ನಲ್ಲಿ ಹಮ್ಮಿಕೊಂಡಿದ್ದ ಸಂಧಾನ ಸಭೆಯಲ್ಲಿ ಮಾತನಾಡಿದರು. ಈ ಹಿಂದೆ ನೀಡಿದ್ದ ಸ್ಥಳವನ್ನೇ ಈ ಚಾಲಕರಿಗೆ ನೀಡಬೇಕು. ಖಾಸಗಿ ಕಂಪನಿಗಳು 1,200-1,500 ರೂ. ದರ ನಿಗದಿ ಮಾಡಿದರೆ, ಈ ಚಾಲಕರು ಇನ್ನೂ ಕಡಿಮೆ ದರಕ್ಕೆ ಸೇವೆ ನೀಡುತ್ತಾರೆ. ಆದ್ದರಿಂದ ಇಲ್ಲಿ ಎಲ್ಲರಿಗೂ ಅವಕಾಶ ನೀಡಬೇಕಿದೆ. ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ದಟ್ಟಣೆ ಹೆಚ್ಚುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಕನಿಷ್ಠ ಪ್ರಮಾಣದಲ್ಲಿ ಬಳಕೆದಾರರ ಶುಲ್ಕ ಪಡೆದು ಸ್ಥಳ ಬಳಸಿಕೊಳ್ಳಲು ಅವಕಾಶ ಮಾಡಿಕೊಡಬೇಕಿದೆ. ಅಗ್ರಿಗೇಟರ್‌ಗಳು ಎಲ್ಲ ಕಡೆ ಇದ್ದು, ಯಾರ ಸೇವೆ ಬೇಕೆಂದು ಗ್ರಾಹಕರು ತೀರ್ಮಾನ ಮಾಡುತ್ತಾರೆ ಎಂದು ಅಧಿಕಾರಿಗಳಿಗೆ ಹೇಳಿದರು.
ವಾರದಲ್ಲಿ ಸುಖಾಂತ್ಯ:
ಖಾಸಗಿ ಟ್ಯಾಕ್ಸಿ ಚಾಲಕರ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಲಾಗಿದ್ದು, ವಾರದಲ್ಲಿ ಎಲ್ಲವೂ ಸುಖಾಂತ್ಯವಾಗಲಿದೆ. ಖಾಸಗಿ ಟ್ಯಾಕ್ಸಿ ಚಾಲಕರಲ್ಲಿ ಎಲ್ಲರೂ ಕನ್ನಡಿಗರು ಹಾಗೂ ಸ್ಥಳೀಯ ನಿವಾಸಿಗಳು ಆಗಿದ್ದಾರೆ. ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚಾಲಕರೇ ಇಲ್ಲಿದ್ದಾರೆ. ಇವರಲ್ಲಿ ಬಹಳಷ್ಟು ಜನರು ವಿಮಾನ ನಿಲ್ದಾಣಕ್ಕಾಗಿ ಜಮೀನು ನೀಡಿದ್ದಾರೆ. ಆದ್ದರಿಂದ ಪ್ರಾಧಿಕಾರವು ಚಾಲಕರ ಜತೆ ಸಮನ್ವಯದಿಂದ ವರ್ತಿಸಬೇಕು. ಚಾಲಕರಿಗೆ ತೊಂದರೆಯಾಗದಂತೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದ ಸಂಸದರು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೂಡ ಸಭೆ ಮಾಡಲಿದ್ದಾರೆ. ನಾನು ಅವರೊಂದಿಗೆ ಖುದ್ದಾಗಿ ಮಾತನಾಡುತ್ತೇನೆ. ಅಗತ್ಯವಿದ್ದರೆ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರಿಗೆ ಮಾಹಿತಿ ನೀಡಿ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.
ದೂರದಲ್ಲಿ ಪಾರ್ಕಿಂಗ್ ನಿಗದಿ ಸರಿಯಲ್ಲ:
ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು ಹಾಗೂ ಸುತ್ತಮುತ್ತಲಿನ ಊರುಗಳ 18 ರಿಂದ 20 ಸಾವಿರ ಯುವಕರು ಟ್ಯಾಕ್ಸಿ ಚಲಾಯಿಸುತ್ತಿದ್ದು, ಇವರನ್ನೇ ನಂಬಿಕೊಂಡು ಸುಮಾರು 1 ಲಕ್ಷ ಕುಟುಂಬ ಸದಸ್ಯರು ಇದ್ದಾರೆ. ಖಾಸಗಿ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರು 15-20 ವರ್ಷಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದಾರೆ. ಇವರಲ್ಲಿ ಅನೇಕರು ಪ್ರಯಾಣಿಕರ ಜತೆ ನೇರ ಸಂಪರ್ಕ ಹೊಂದಿದ್ದು, ಅನೇಕ ವರ್ಷಗಳ ಪರಿಚಯದ ಮೂಲಕ ಸೇವೆ ನೀಡುತ್ತಿದ್ದಾರೆ. ಆದರೆ ಡಿ. 8 ರಿಂದ 500 ಮೀಟರ್ ದೂರದಲ್ಲಿ ಚಾಲಕರಿಗೆ ನಿಲುಗಡೆಗೆ ಸ್ಥಳ ನಿಗದಿ ಮಾಡಿರುವುದರಿಂದ ಸಮಸ್ಯೆ ಉದ್ಭವಿಸಿದೆ ಎಂದು ಸಂಸದರು ಹೇಳಿದರು.
ಚಾಲಕರು ಪ್ರತಿಭಟನೆ ನಡೆಸಿದ್ದರು:
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ಟ್ಯಾಕ್ಸಿ ಚಾಲಕರಿಗೆ ಸುಮಾರು 500 ಮೀಟರ್ ದೂರದಲ್ಲಿ ನಿಲುಗಡೆ ಕಲ್ಪಿಸಲಾಗಿದೆ. ವಿಮಾನದಿಂದ ಇಳಿದು ಬಂದ ಪ್ರಯಾಣಿಕರು ನಡೆದುಕೊಂಡು ಹೋಗಿ ಟ್ಯಾಕ್ಸಿ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿರುವ ಟ್ಯಾಕ್ಸಿ ಚಾಲಕರು ಪ್ರಾಧಿಕಾರದ ಈ ಹೊಸ ಪಾರ್ಕಿಂಗ್ ನಿಯಮದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಟ್ಯಾಕ್ಸಿ ಚಾಲಕರ ಸಂಘದ ಮನವಿಯ ಮೇರೆಗೆ ವಿಮಾನ ನಿಲ್ದಾಣ ಪ್ರಾಧಿಕಾರದ ಕಚೇರಿಯಲ್ಲಿ ಸಂಸದರು ಚಾಲಕರು ಹಾಗೂ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net