ವಿಮಾನ ನಿಲ್ದಾಣದಲ್ಲಿ ಕನೆಕ್ಷನ್ಸ್ ಬೈ ಬಿಎಲ್‌ಆರ್

airport
airport
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿಯಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪಯಣವನ್ನು ಸುಗಮಗೊಳಿಸಲು ಕನೆಕ್ಷನ್ಸ್ ಬೈ ಬಿಎಲ್‌ಆರ್ ಎಂಬ ಸೌಲಭ್ಯವನ್ನು ಪರಿಚಯಿಸಿದೆ. ವಿವಿಧ ವಿಮಾನಯಾನ ಸಂಸ್ಥೆಗಳ ಸಹಯೋಗದೊಂದಿಗೆ ದೊರೆಯಲಿರುವ ಈ ಸೇವೆಯು ವಿಮಾನ ನಿಲ್ದಾಣದ ವಿವಿಧ ಟರ್ಮಿನಲ್‌ಗಳ ನಡುವೆ ಪ್ರಯಾಣಿಕರ ವರ್ಗಾವಣೆ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ. ಇದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಮೂಲಸೌಕರ್ಯ ಮತ್ತು ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಗೆ ಪೂರಕವಾಗಿದ್ದು, ವಿಮಾನ ನಿಲ್ದಾಣವನ್ನು ಪ್ರಮುಖ ವರ್ಗಾವಣೆ ಕೇಂದ್ರವನ್ನಾಗಿ ರೂಪಿಸಲು ನೆರವಾಗುತ್ತದೆ ಎನ್ನಲಾಗಿದೆ.
ಸಹಾಯಕ್ಕಾಗಿ ಪ್ರತ್ಯೇಕ ವರ್ಗಾವಣೆ ಡೆಸ್ಕ್‌ಗಳು:
ಪ್ರಯಾಣಿಕರ ನೆರವಿಗಾಗಿ ವಿವಿಧ ಟರ್ಮಿನಲ್‌ಗಳಲ್ಲಿ ಪ್ರತ್ಯೇಕ ’ಟ್ರಾನ್ಸ್‌ಫರ್ ಡೆಸ್ಕ್’ಗಳನ್ನು ಸ್ಥಾಪಿಸಲಾಗಿದೆ. ಸುಲಭವಾಗಿ ಗುರುತಿಸಬಹುದಾದ ನೀಲಿ ಮತ್ತು ಹಳದಿ ಬಣ್ಣದ ಮಾರ್ಗಸೂಚಿ ಫಲಕಗಳನ್ನು ಅಳವಡಿಸಲಾಗಿದೆ. ಸುಗಮ ಪ್ರಯಾಣಕ್ಕಾಗಿ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ’ಟ್ರಾನ್ಸ್‌ಫರ್ ಝೋನ್’ಗಳನ್ನು ಮೀಸಲಿಡಲಾಗಿದೆ.ಕನಿಷ್ಠ ನಿರೀಕ್ಷಣಾ ಸಮಯದಲ್ಲಿ ಟರ್ಮಿನಲ್‌ಗಳ ನಡುವೆ ಸಂಚರಿಸಲು ಉಚಿತ ಶಟಲ್ ಬಸ್ ಸೌಲಭ್ಯವನ್ನು ನೀಡಲಾಗುತ್ತಿದೆ. ಪ್ರಯಾಣಿಕರ ಆರಾಮದಾಯಕ ವಿಶ್ರಾಂತಿಗಾಗಿ ವಿವಿಧ ಲೌಂಜ್‌ಗಳ ಆಯ್ಕೆ ಲಭ್ಯವಿದೆ. ವರ್ಗಾವಣೆ ವಲಯಗಳಲ್ಲಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ಶಾಪಿಂಗ್ ಮತ್ತು ವೈವಿಧ್ಯಮಯ ಆಹಾರ ಮಳಿಗೆಗಳಿವೆ. ಅಲ್ಪಾವಧಿಯ ವಿಶ್ರಾಂತಿಗಾಗಿ ಅತ್ಯಾಧುನಿಕ ಸ್ಲೀಪಿಂಗ್‌ಪಾಡ್‌ಗಳ ಸೌಲಭ್ಯವಿದೆ. ದೀರ್ಘಾವಧಿಯ ತಂಗುವಿಕೆಗಾಗಿ ಟಿ1 ಮತ್ತು ಟಿ2 ಟರ್ಮಿನಲ್‌ಗಳಲ್ಲಿ ಸುಸಜ್ಜಿತ ’ಬೂಟೀಕ್’ ಕೊಠಡಿಗಳನ್ನು ಹೊಂದಿರುವ ಟ್ರಾನ್ಸಿಟ್ ಹೋಟೆಲ್ ಸೌಲಭ್ಯ ಒದಗಿಸಲಾಗಿದೆ.
ಪ್ರಯಾಣಿಕರ ಸಂಖ್ಯೆ ದುಪ್ಪಟ್ಟು:
ಅಂತಾರಾಷ್ಟ್ರೀಯ ವರ್ಗಾವಣೆ ಪ್ರಯಾಣಿಕರ ಸಂಖ್ಯೆಯು ವಾರ್ಷಿಕವಾಗಿ ಶೇ.30ಕ್ಕಿಂತ ಹೆಚ್ಚು ವೃದ್ಧಿಸಿದ್ದು, ಇದು ಹೆಚ್ಚುತ್ತಿರುವ ಬೇಡಿಕೆ ಮತ್ತು ದೀರ್ಘಾವಧಿಯ ಬೆಳವಣಿಗೆಯ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಪ್ರಸ್ತುತ ಪ್ರಯಾಣಿಕರ ಸಂಖ್ಯೆಯಲ್ಲಿ ವರ್ಗಾವಣೆ ಪ್ರಯಾಣಿಕರ ಪಾಲು ಸುಮಾರು ಶೇ.15ರಷ್ಟಿದ್ದು, ಮುಂದಿನ ದಿನಗಳಲ್ಲಿ ಇದು ಶೇ. 20ಕ್ಕೆ ಏರುವ ನಿರೀಕ್ಷೆಯಿದೆ. ಸುಗಮ ವರ್ಗಾವಣೆ ಸೌಲಭ್ಯಗಳು ಪ್ರಯಾಣಿಕರಿಗೆ ಮತ್ತು ವಿಮಾನಯಾನ ಸಂಸ್ಥೆಗಳ ಜಾಲದ ಯೋಜನೆಗೆ ಅತ್ಯಂತ ನಿರ್ಣಾಯಕವಾಗಿವೆ ಎಂದು ಕೆಐಎ ತಿಳಿಸಿದೆ.
ಸರ್ವತೋಮುಖ ಬೆಳವಣಿಗೆಗೆ ಪೂರಕ:
ವರ್ಗಾವಣೆ ಪ್ರಯಾಣಿಕರ ಸಂಖ್ಯೆಯಲ್ಲಿನ ನಿರಂತರ ಬೆಳವಣಿಗೆಯು ನಮ್ಮ ಸಂಪರ್ಕ ಜಾಲದ ವ್ಯಾಪ್ತಿ ಮತ್ತು ಮುಂದಿರುವ ಕಾರ್ಯತಂತ್ರದ ಅವಕಾಶಗಳನ್ನು ಪ್ರತಿಬಿಂಬಿಸುತ್ತದೆ. ಕನೆಕ್ಷನ್ಸ್ ಬೈ ಬಿಎಲ್‌ಆರ್ ಮೂಲಕ ನಾವು ಹೆಚ್ಚು ಸುಗಮ ಮತ್ತು ವಿಶ್ವಾಸಾರ್ಹ ವರ್ಗಾವಣೆ ಪಯಣವನ್ನು ಸಾಂಸ್ಥಿಕಗೊಳಿಸುತ್ತಿದ್ದೇವೆ. ಜತೆಗೆ, ನಮ್ಮ ಸಹಭಾಗಿ ವಿಮಾನಯಾನ ಸಂಸ್ಥೆಗಳಿಗೆ ಪೂರಕವಾದ ವಾತಾವರಣವನ್ನು ಬಲಪಡಿಸುತ್ತಿದ್ದೇವೆ. ಈ ಉಪಕ್ರಮವು ನಮ್ಮ ಜಾಲದ ಸಂಪರ್ಕವನ್ನು ವಿಸ್ತರಿಸಲು, ಹೊಸ ಪ್ರಯಾಣಿಕರನ್ನು ಆಕರ್ಷಿಸಲು ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಮುಂದಿನ ಹಂತದ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಮುಖ್ಯ ಕಾರ್ಯಾಚರಣಾ ಅಧಿಕಾರಿ ಗಿರೀಶ್ ನಾಯರ್ ತಿಳಿಸಿದ್ದಾರೆ.
114 ಪ್ರಯಾಣಿಕರ ತಾಣಗಳಿಗೆ ಸಂಪರ್ಕ:
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು 80 ದೇಶೀಯ ಮತ್ತು 34 ಅಂತಾರಾಷ್ಟ್ರೀಯ ನಗರಗಳು ಸೇರಿ 114 ಪ್ರಯಾಣಿಕರ ತಾಣಗಳಿಗೆ ಸಂಪರ್ಕ ಕಲ್ಪಿಸುತ್ತದೆ. ದೆಹಲಿ, ಮುಂಬೈ, ಕೋಲ್ಕತ್ತಾ, ಹೈದರಾಬಾದ್ ಮತ್ತು ಪುಣೆ ಪ್ರಮುಖ ದೇಶೀಯ ಮಾರ್ಗಗಳಾಗಿವೆ. ಸಿಂಗಾಪುರ, ಲಂಡನ್ ಹೀಥ್ರೂ, ದುಬೈ, ಅಬುಧಾಬಿ ಮತ್ತು ಕೌಲಾಲಂಪುರ್ ಅಂತಾರಾಷ್ಟ್ರೀಯ ಸಂಪರ್ಕ ಜಾಲದ ಪ್ರಮುಖ ತಾಣಗಳಾಗಿವೆ ಇತ್ತೀಚಿನ ದೇಶೀಯವಾಗಿ ಹಿಂಡನ್, ಬೀದರ್, ಸಿಲ್ಚಾರ್ ಮತ್ತು ನವಿ ಮುಂಬೈ ಮತ್ತು ಅಂತಾರಾಷ್ಟ್ರೀಯವಾಗಿ ದಮ್ಮಾಮ್, ಕ್ರಾಬಿ, ಹನೋಯಿ ಮತ್ತು ರಿಯಾದ್‌ಗಳಿಗೆ ಹೊಸದಾಗಿ ಸಂಪರ್ಕವನ್ನು ಕಲ್ಪಿಸಲಾಗಿದೆ ಎಂದು ಗಿರೀಶ್‌ನಾಯರ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net