ಪಾಕಿಂಗ್ ಅವಧಿ 15 ನಿಮಿಷಕ್ಕೆ ವಿಸ್ತರಣೆ

 ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿ.26ರಿಂದ ನಿಯಮ ಜಾರಿ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿ.26ರಿಂದ ನಿಯಮ ಜಾರಿ
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ಆಗಮನದ ಪಿಕಪ್ ಪ್ರದೇಶಗಳಾದ ಪಿ3 ಮತ್ತು ಪಿ4 ನಲ್ಲಿ ಉಚಿತ ಪಾರ್ಕಿಂಗ್ ಅವಧಿಯನ್ನು 10 ನಿಮಿಷಗಳಿಂದ 15 ನಿಮಿಷಗಳಿಗೆ ವಿಸ್ತರಿಸಿದ್ದೇವೆ ಎಂದು ಬಿಐಎಎಲ್ ತಿಳಿಸಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವತಿಯಿಂದ ಟರ್ಮಿನಲ್ 1 ನಲ್ಲಿ ಜಾರಿ ಮಾಡಿರುವ ಆಗಮನ ಮತ್ತು ಕರ್ಬ್‌ಸೈಡ್ ಪಿಕ್‌ಅಪ್ ವ್ಯವಸ್ಥೆಯನ್ನು ಸುಲಲಿತಗೊಳಿಸುವ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಬಿಐಎಎಲ್ ಪ್ರಯಾಣಿಕರ ಅನುಭವವನ್ನು ನಿರಂತರವಾಗಿ ಹೆಚ್ಚಿಸುವ ನಮ್ಮ ಬದ್ಧತೆಯ ಭಾಗವಾಗಿ ಈ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಈ ತಿದ್ದುಪಡಿ ನಿಯಮ ಡಿ.26ರಿಂದ ಜಾರಿಗೆ ಬರಲಿದೆ. ವಿಮಾನ ನಿಲ್ದಾಣದಲ್ಲಿ ಆಗಮನ ಮತ್ತು ಕರ್ಬ್‌ಸೈಡ್ ಪಿಕ್‌ಅಪ್ ವ್ಯವಸ್ಥೆಯಲ್ಲಿ ಜಾರಿ ಮಾಡಲಾಗಿದ್ದ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲು ಪ್ರಯಾಣಿಕರು ಮತ್ತು ಸಹಯೋಗಿ ಸಂಸ್ಥೆಗಳಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದು ಈ ಪ್ರಯತ್ನದ ಭಾಗವಾಗಿ ವೇಳೆಯನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದೆ. ಇದರಿಂದ ಪ್ರಯಾಣಿಕರು ಹಾಗೂ ಅವರ ಕುಟುಂಬವರ್ಗ ಇನ್ನಷ್ಟು ಸುಗಮವಾಗಿ ಸಂಚರಿಸಲು ಅನುವು ಮಾಡಿಕೊಟ್ಟಂತಾಗಿದೆ.
ಪ್ರಯಾಣಿಕರ ಆಯ್ಕೆ:
ಪ್ರಯಾಣಿಕರ ಆಗಮನ, ನಿರ್ಗಮನ ಸುಗಮಗೊಳಿಸಲು ಪ್ರಯಾಣಿಕರು ಪಿ3/ಪಿ4 ಪಿಕಅಪ್ ಪ್ರದೇಶಗಳಿಗೆ ಮತ್ತು ಅಲ್ಲಿಂದ ಪ್ರತಿ 7 ನಿಮಿಷಗಳಿಗೊಮ್ಮೆ ಲಭ್ಯವಿರುವ ಶಟಲ್ ಬಸ್‌ಗಳನ್ನು ಅಥವಾ 6 ಕಾರು ಮತ್ತು 10 ಬಸ್‌ಗಳನ್ನು ತಮಗೆ ಅಗತ್ಯಕ್ಕನುಗುಣವಾಗಿ ಆಯ್ಕೆ ಮಾಡಬಹುದು. ಇದು ಪ್ರಯಾಣಿಕರಿಗೆ ಇನ್ನಷ್ಟು ಹೆಚ್ಚಿನ ಅನುಕೂಲ ಮಾಡಿಕೊಡಲಿದೆ ಎಂದು ಬಿಐಎಎಲ್ ತಿಳಿಸಿದೆ.
ಪ್ರತ್ಯೇಕ ಪಥ:
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಚಾರವನ್ನು ಸುಗಮಗೊಳಿಸಲು, ಸಂಚಾರ ದಟ್ಟಣೆ ಕಡಿಮೆ ಮಾಡಲು ಹಾಗೂ ಆಗಮನ ಪ್ರದೇಶಗಳಲ್ಲಿ ಸುರಕ್ಷತೆ, ಶಿಸ್ತು ಸುಧಾರಿಸಲು ಇದೇ ಡಿ.8 ರಿಂದ ಪಿಕಪ್ ನಿಯಮಗಳನ್ನು ಪರಿಚಯಿಸಿದ ಬಿಐಎಎಲ್ ಅನಧಿಕೃತ ಪಾರ್ಕಿಂಗ್ ತಡೆಯಲು ಮತ್ತು ನಿಲುಗಡೆ ಸಮಯ ಕಡಿಮೆ ಮಾಡಲು ಪ್ರತ್ಯೇಕ ಪಥ ಪರಿಚಯಿಸಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net