ವೇರ್‌ಹೌಸ್ ವಾಹನಗಳ ಪಾರ್ಕಿಂಗ್‌ನಿಂದ ಆಪತ್ತು!

accident problem
accident problem
Published on
ಶಿವರಾಜ ಎಂ ಬೆಂಗಳೂರು ಗ್ರಾಮಾಂತರ
ಕೈಗಾರೀಕರಣ, ನಗರೀಕರಣದತ್ತ ವೇಗವಾಗಿ ಹೆಜ್ಜೆ ಹಾಕುತ್ತಿರುವ ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ವೇರ್‌ಹೌಸ್‌ಗಳು ದಿನೇದಿನೆ ವಿಸ್ತರಿಸುತ್ತಿರುವುದು ಜಿಲ್ಲೆಗೆ ಹಿರಿಮೆ ಎನಿಸಿದರೂ ವೇರ್‌ಹೌಸ್‌ಗಳ ವಾಹನಗಳ ಅಡ್ಡಾದಿಡ್ಡಿ ನಿಲುಗಡೆ ಇನ್ನಿತರ ವಾಹನ ಸವಾರರಿಗೆ ಅಪಘಾತಕ್ಕೆ ಆಹ್ವಾನ ನೀಡುತ್ತಿರುವುದರ ಜತೆಗೆ ಸಾರ್ವಜನಿಕರ ಜೀವನಕ್ಕೂ ಸಂಚಾಕಾರ ತಂದೊಡ್ಡುತ್ತಿದೆ.
ಇತ್ತೀಚಿಗೆ ಸೂಲಿಬೆಲೆ ಬಳಿ ಬಸ್ ಹಾಗೂ ದ್ವಿಚಕ್ರವಾಹನದ ನಡುವೆ ಸಂಭವಿಸಿದ ಅಪಘಾತ ಪ್ರಕರಣ ಬಳಿಕ ಇಂಥಹದ್ದೊಂದು ಆಕ್ರೋಶ ಸಾರ್ವಜನಿಕ ವಲಯದಲ್ಲಿ ಹೊಗೆಯಾಡುತ್ತಿದೆ. ಸೂಲಿಬೆಲೆಯಲ್ಲಿ ಮೇಪಲ್ ಟ್ರೀ ವೇರ್‌ಹೌಸ್ ಮುಂಭಾಗದಲ್ಲಿನ ದೇವನಹಳ್ಳಿ, ಸೂಲಿಬೆಲೆ ರಸ್ತೆಯಲ್ಲಿ ಕಂಪನಿಯ ಲಾರಿಗಳು ಪಾದಚಾರಿ ಮಾರ್ಗದಲ್ಲಿ ನಿಲ್ಲಿಸಿದ್ದೆ ಒಂದೇ ಕುಟುಂಬದ 3 ವರ್ಷದ ಮಗೂ ಸೇರಿ ಮೂರು ಜನ ಪ್ರಾಣ ಕಳೆದುಕೊಂಡರು ಎಂಬ ಆಕ್ರೋಶ ಜನರಲ್ಲಿ ಮಡುಗಟ್ಟಿದೆ.
ನಿಯಮಗಳ ಉಲ್ಲಂಘನೆಗಿಲ್ಲ ಅಂಕುಶ:
ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ವೇರ್ ಹೌಸ್ ಕಂಪನಿಗಳು ಸರ್ಕಾರಿ ಖರಾಬು ಜಮೀನುಗಳ ಕಬಳಿಕೆ ಜತೆಗೆ ಕಾರ್ಮಿಕ ಕಾಯ್ದೆ ಹಾಗೂ ಸಾರ್ವಜನಿಕ ಹಿತಾಸಕ್ತಿ ನಿಯಮಗಳನ್ನು ಉಲ್ಲಂಘಿಸುತ್ತಿವೆ ಈ ಕಾರಣದಿಂದಲೇ ಅಮಾಯಕರು ಜೀವ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಸರ್ಕಾರಿ ಭೂಮಿ ಕಬಳಿಕೆ!
ಬೆಂಗಳೂರು ನಗರ ವಿಸ್ತರಣೆ ಗ್ರಾಮಾಂತರ ಜಿಲ್ಲೆಗೆ ವ್ಯಾಪಿಸುತ್ತಿದ್ದು, ಕಳೆದ ಕೆಲವು ವರ್ಷಗಳಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲೂ ವೇರ್ ಹೌಸ್ ಕಂಪನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಎಕರೆಗಟ್ಟಲೇ ಜಮೀನಿನಲ್ಲಿ ನಿರ್ಮಾಣವಾಗುತ್ತಿರುವ ಈ ಕಂಪನಿಗಳು ತಾವು ಖರೀದಿಸಿದ ಭೂಮಿ ಆಸುಪಾಸಿನಲ್ಲಿರುವ ಸರ್ಕಾರಿ ಗೋಮಾಳ, ಗುಂಡುತೋಪು, ಕೆರೆ, ಕೆರೆಯ ಅಂಗಳ ಸೇರಿ ಇನ್ನಿತರ ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿಕೊಳ್ಳುತ್ತಿವೆ. ಸರ್ಕಾರದ ನಿಯಮಗಳನ್ನು ಕಡೆಗಣಿಸಿ ಸಾರ್ವಜನಿಕ ರಸ್ತೆ, ಪಾದಚಾರಿ ಮಾರ್ಗಗಳನ್ನು ಕಂಪನಿ ವಾಹನಗಳ ಪಾರ್ಕಿಂಗ್‌ಗೆ ಬಳಕೆ ಮಾಡಿಕೊಳ್ಳುತ್ತಿವೆ. ಇದರಿಂದ ಈ ಭಾಗಗಳಲ್ಲಿ ವಾಹನದಟ್ಟಣೆ ಜತೆಗೆ ಅಪಘಾತಗಳಿಗೆ ಎಡೆಮಾಡಿಕೊಡುತ್ತಿದೆ ಎಂಬುದು ಸ್ಥಳೀಯರ ದೂರಾಗಿದೆ.
ಅಪಘಾತ ತಾಣ:
ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿರುವ ರಸ್ತೆ ಬದಿಗೆ ಹೊಂದಿಕೊಂಡಂತೆ ನಿರ್ಮಾಣವಾಗಿರುವ ವೇರ್ ಹೌಸ್ ಕಂಪನಿಗಳಿಗೆ ಸರಕು ಹೊತ್ತು ಬರುವ ವಾಹನಗಳು ಗ್ರಾಮೀಣ ರಸ್ತೆ ಬದಿಗಳಲ್ಲಿಯೇ ನಿಲ್ಲಿಸುವುದರಿಂದ ಇನ್ನಿತರ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.ರಸ್ತೆ ಬದಿಯಲ್ಲಿ ಭಾರಿ ಗಾತ್ರದ ಟ್ರಕ್ ಲಾರಿಗಳು ನಿಲ್ಲುವುದರಿಂದ ಎದುರು ಬದರು ಬರುವ ವಾಹನಗಳು,ರಸ್ತೆ ತಿರುವಿನ ವಾಹನಗಳು ಕಾಣದೆ ದ್ವಿಚಕ್ರವಾಹನ ಸವಾರರು ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವೇರ್ ಹೌಸ್ ರಸ್ತೆಗಳು ಡೆಡ್ಲಿ ಸ್ಪಾಟ್ ರಸ್ತೆಗಳಾಗಿ ಪರಿವರ್ತನೆಯಾಗುತ್ತಿದೆ. ವೇರ್ ಹೌಸ್ ಮುಂಭಾಗದ ಸಾರ್ವಜನಿಕ ರಸ್ತೆಗಳ ಅತಿಕ್ರಮಣ ನಡೆದಿದೆ, ರಸ್ತೆಯ ಪಾದಚಾರಿ ಮಾರ್ಗದಲ್ಲಿ ಕಂಪನಿಯ ವಾಹನಗಳ ನಿಲುಗಡೆ ಸಾಮಾನ್ಯವಾಗಿದೆ, ಪಾದಚಾರಿ ಮಾರ್ಗವಿಲ್ಲದೆ ರಸ್ತೆಗೆ ಬರುವ ಜನರು ಅಪಘಾತಕ್ಕೆ ತುತ್ತಾಗುತ್ತಿದ್ದಾರೆ, ವೇರ್ ಹೌಸ್ ಮುಂಭಾಗದ ರಸ್ತೆಗಳಲ್ಲಿ ರಸ್ತೆ ಉಬ್ಬುಗಳಿಲ್ಲ.ಅಗತ್ಯ ಸೂಚನ ಫಲಕಗಳಿಲ್ಲ. ಕಾರ್ಮಿಕರು ಸಂಚರಿಸುವ ಮಾರ್ಗದಲ್ಲಿ ಬೆಳಕಿನ ದೀಪಗಳಿಲ್ಲ. ಇವುಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ನೀಡುತ್ತಿಲ್ಲ.
ಸಾರ್ವಜನಿಕರಿಗಾಗಿ ಇರುವ ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ವೇರ್‌ಹೌಸ್ ಅಥವಾ ಇನ್ಯಾವುದೇ ಕಂಪನಿ ವಾಹನಗಳನ್ನು ನಿಲುಗಡೆ ಮಾಡಿ ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುವಂತಿದ್ದರೆ ಕಂಪನಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಈಗಾಗಲೇ ಈ ಸಂಬಂಧ ಕಂಪನಿಗಳ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿ ಸರಿಪಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಮಲ್ಲೇಶ್, ಡಿವೈಎಸ್ಪಿ ಹೊಸಕೋಟೆ
ಜಿಲ್ಲೆಯಲ್ಲಿ ಸರ್ಕಾರದ ಮೂಲಕ ಮಂಜೂರಾಗಿರುವ ಕೈಗಾರಿಕಾ ಪ್ರದೇಶಗಳಲ್ಲಿನ ವೇರ್ ಹೌಸ್ ಗಳನ್ನು ಹೊರತುಪಡಿಸಿ ಖಾಸಗಿ ಜಮೀನುಗಳಲ್ಲೂ ವೇರ್ ಹೌಸ್‌ಗಳು ಹೆಚ್ಚಾಗುತ್ತಿವೆ. ಗ್ರಾಪಂಗಳಿಗೆ ಭರಪೂರ ತೆರಿಗೆ ಬರುವ ಕಾರಣ ಗ್ರಾಪಂ ಅಧಿಕಾರಿಗಳು ವೇರ್ ಹೌಸ್ ನಿರ್ಮಾಣದ ವೇಳೆ ಯಾವ ನಿಯಮಗಳ ಉಲ್ಲಂಘನೆಯಾದರೂ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ.
ಸುರೇಶ್, ಸೂಲಿಬೆಲೆ ನಿವಾಸಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net