ರಸ್ತೆ ಅಪಘಾತದಲ್ಲಿ ಬಾಲಕ ಬಲಿ

accident
accident
Published on

ವಿಜಯವಾಣಿ ಸುದ್ದಿಜಾಲ ಮಧುರೆ

ದೊಡ್ಡಬಳ್ಳಾಪುರ-ನೆಲಮಂಗಲ ಮುಖ್ಯ ರಸ್ತೆಯ ಕೋಡಿಪಾಳ್ಯ ಬಳಿ ಸೈಕಲ್‌ನಲ್ಲಿ ತೆರಳುತ್ತಿದ್ದ 13 ವರ್ಷದ ಬಾಲಕನಿಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕೂಲಿ ಕಾರ್ಮಿಕ ದಂಪತಿ ಪುತ್ರ ಧನು (13) ಮೃತ ದುರ್ದೈವಿ. ಅಪಘಾತಕ್ಕೆ ಕಾರಣವಾದ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದೌಡಾಯಿಸಿ ಡಿವೈಎಸ್‌ಪಿ ಪಾಂಡುರಂಗ ಸ್ಥಳ ಪರಿಶೀಲನೆ ನಡೆಸಿದರು.
ರಸ್ತೆ ತಡೆದು ಪ್ರತಿಭಟನೆ:
ಅಪಘಾತ ಪ್ರಕರಣದ ಬೆನ್ನಲ್ಲೆ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಟೋಲ್ ತಪ್ಪಿಸಲು ಬೃಹತ್ ಲಾರಿಗಳು ಹಾಗೂ ಕೈಗಾರಿಕೆಗಳ ವಾಹನಗಳು ಈ ರಸ್ತೆಯಲ್ಲಿ ಸಾಗುತ್ತಿವೆ. ವೇಗಮಿತಿ ಇಲ್ಲ ಅತಿವೇಗವಾಗಿ ಸಂಚರಿಸುವ ಲಾರಿಗಳಿಂದ ಈ ಭಾಗದಲ್ಲಿ ಅಪಘಾತಗಳು ಸಾಮಾನ್ಯವಾಗಿವೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಯಾವ ಅಧಿಕಾರಿಯೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಸಕರು ಸ್ಥಳಕ್ಕೆ ಆಗಮಿಸಬೇಕು ಈ ರಸ್ತೆಯಲ್ಲಿ ಬೃಹತ್ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕುವ ಬಗ್ಗೆ ಭರವಸೆ ನೀಡಬೇಕು ಎಂದು ಪ್ರತಿಭಟನಕಾರರು ಪಟ್ಟು ಹಿಡಿದರು. ಈ ವೇಳೆ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಡಿವೈಎಸ್‌ಪಿ ಪಾಂಡುರಂಗ ಪ್ರತಿಭಟನಕಾರರ ಮನವೊಲಿಸುವ ಪ್ರಯತ್ನ ನಡೆಸಿದರು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.
ತಾಯಿಗೆ ಒಬ್ಬನೆ ಮಗ:
ಇತ್ತೀಚಿಗಷ್ಟೇ ಪತಿ ತೀರಿಕೊಂಡಿದ್ದ ತಾಯಿಗೆ ಧನು ಒಬ್ಬನೆ ಮಗ. ತಾಯಿ ಸ್ಥಳೀಯ ಮನೆಗಳಲ್ಲಿ ಮನೆ ಕೆಲಸ ಮಾಡಿಕೊಂಡು ಮಗುವಿನೊಂದಿಗೆ ಜೀವನ ನಡೆಸುತ್ತಿದ್ದರು. ಇದ್ದೊಬ್ಬ ಮಗನನ್ನು ಕಳೆದುಕೊಂಡ ತಾಯಿ ದುಃಖ ಮುಗಿಲುಮುಟ್ಟಿತ್ತು. ಮಗುವಿನ ಶವದ ಎದುರು ಕಣ್ಣೀರು ಸುರಿಸುತ್ತಿದ್ದ ದೃಶ್ಯ ಸ್ಥಳೀಯ ಕಣ್ಣಾಲಿಗಳನ್ನು ತೇವಗೊಳಿಸಿತು.
ಆರ್‌ಟಿಒ, ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಕಮಿಟಿ ರಚಿಸಿ ಈ ಭಾಗದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಪ್ಲಾನ್ ಮಾಡಲಾಗುವುದು. ಈ ರಸ್ತೆಯಲ್ಲಿ ಸ್ಪೀಡ್‌ಗನ್‌ಗಳನ್ನು ಅಳವಡಿಸಿ ವೇಗಮಿತಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗುವುದು, ಪೊಲೀಸ್ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನ ತಪಾಸಣೆ ಜತೆಗೆ ವೇಗ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು.
ಪಾಂಡುರಂಗ, ಡಿವೈಎಸ್‌ಪಿ ದೊಡ್ಡಬಳ್ಳಾಪುರ
ಟೋಲ್ ತಪ್ಪಿಸಲು ಈ ಮಾರ್ಗದಲ್ಲಿ ಲಾರಿಗಳು ಸೇರಿ ಈ ಭಾಗದ ಸುತ್ತಮುತ್ತಲಿನ ಕೈಗಾರಿಕೆಗಳ ಬಸ್‌ಗಳು ಹಾಗೂ ಇನ್ನಿತರ ವಾಹನಗಳು ಹೆಚ್ಚು ಸಂಚರಿಸುತ್ತವೆ. ಜತೆಗೆ ವಾಹನಗಳು ವೇಗವಾಗಿ ಚಲಿಸುವುದರಿಂದ ಈ ರಸ್ತೆಯಲ್ಲಿ ಅಪಘಾತಗಳು ಸಾಮಾನ್ಯವಾಗಿದೆ. ಕೆಲವು ದಿನಗಳ ಹಿಂದಷ್ಟೆ ಅಪಘಾತದಲ್ಲಿ ಇದೇ ರಸ್ತೆಯಲ್ಲಿ ವ್ಯಕ್ತಿ ಬಲಿಯಾಗಿದ್ದರು ಈಗ ಮಗು. ಇನ್ನೆಷ್ಟು ಬಲಿ ಬೇಕು.
ಅನಿಲ್‌ಕುಮಾರ್ ಸ್ಥಳೀಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net