ಶಿಶುಮಂದಿರದ ಮಡಿಲಿಗೆ 5 ತಿಂಗಳ ಕೂಸು

A 5-month-old baby in the nursery
A 5-month-old baby in the nursery
Published on
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ತಂದೆ ಯಾರು ಎಂಬುದು ಗೊತ್ತಿಲ್ಲದ, ತಾಯಿ ಇದ್ದರೂ ತಬ್ಬಲಿಯಾದ 5 ತಿಂಗಳ ಹಸುಗೂಸಿಗೆ ಜಿಲ್ಲಾ ಶಿಶುಮಂದಿರ ಆಸರೆ ನೀಡಿದೆ.
ದೊಡ್ಡಬಳ್ಳಾಪುರ ತಾಲೂಕು ಕಚೇರಿಪಾಳ್ಯದಲ್ಲಿ ತಂದೆ-ತಾಯಿ ಆಸರೆಯಿಲ್ಲದೆ ನಡುಗುವ ಕೈಗಳ ತಾತನ ಆಶ್ರಯದಲ್ಲಿ ಉಸಿರು ಬಿಗಿಹಿಡಿದು ಬದುಕಿದ್ದ ಕೂಸಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಆಸರೆಯಾಗಿದೆ. ಮಕ್ಕಳ ಸಹಾಯವಾಣಿಗೆ ಬಂದ ಕರೆ ಆಧರಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸರ ಸಹಕಾರದೊಂದಿಗೆ ಅಕ್ಕಪಡೆಯೊಂದಿಗೆ ಕಾರ್ಯಾಚರಣೆನಡೆಸಿ ಕೂಸನ್ನು ರಕ್ಷಣೆ ಮಾಡಿದೆ.
ಏನಿದು ಪ್ರಕರಣ?
ಬುಧವಾರ ಬೆಳಗ್ಗೆ ಮಕ್ಕಳ ಸಹಾಯವಾಣಿಗೆ ಅನಾಮಧೇಯ ಕರೆಯೊಂದು ಬಂದಿದೆ. ನನ್ನ 5 ತಿಂಗಳ ಮೊಮ್ಮಗನನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತಾಯಿ ಮಗುವನ್ನು ಬಿಟ್ಟು ಹೋಗಿದ್ದಾಳೆ. ದಯವಿಟ್ಟು ಮೊಮ್ಮಗನಿಗೆ ಸಹಾಯ ಮಾಡಿ ಎಂದು ನಡುಗುವ ದನಿಯೊಂದರ ಕರೆ ಆಧರಿಸಿ ತಕ್ಷಣ ಕಾರ್ಯಪ್ರವೃತ್ತರಾದ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಸ್ಥಳಕ್ಕೆ ದಾವಿಸಿ ಕೂಸನ್ನು ಸುಪರ್ದಿಗೆ ಪಡೆದಿದೆ.
ತಾಯಿ ಆಗಾಗ ಬರುತ್ತಾಳೆ, ನಾಪತ್ತೆಯಾಗುತ್ತಾಳೆ:
ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಜಿಲ್ಲಾ ಅಕ್ಕಪಡೆದ ಸಹಕಾರದಲ್ಲಿ ದೊಡ್ಡಬಳ್ಳಾಪುರದ ಕಚೇರಿಪಾಳ್ಯ ನಗರಕ್ಕೆ ಭೇಟಿ ನೀಡಿದಾಗ 5 ತಿಂಗಳ ಹಸುಗೂಸು ಹಸಿನಿಂದ ಬಳಲಿ ಅಸ್ವಸ್ಥಗೊಂಡಿದ್ದ ಚಿತ್ರಣ ಕಂಡುಬಂತು. ಕರೆ ಮಾಡಿದ್ದ ಮಗುವಿನ ತಾತನನ್ನು ವಿಚಾರಿದಾಗ ಮಗುವಿನ ತಾಯಿ ಆಗಾಗ ಮನೆಗೆ ಬರುತ್ತಾಳೆ, ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಾಳೆ, ಎರಡು ತಿಂಗಳಿಂದ ಇತ್ತ ಕಡೆ ಸುಳಿದಿಲ್ಲ, ನೆರೆಹೊರೆಯವರು ಮಗುವಿಗೆ ಹಾಲು ನೀಡಿ ಸಾಧ್ಯವಾದಷ್ಟು ಪೋಷಣೆ ಮಾಡಿದ್ದಾರೆ. ನನಗೆ ತುಂಬಾ ವಯಸ್ಸಾಗಿದೆ ಆರೋಗ್ಯ ಸರಿಯಿಲ್ಲ. ಇಂಥ ಪರಿಸ್ಥಿತಿಯಲ್ಲಿ ಹಸುಗೂಸನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳ ಬಳಿ ತಾತ ಅಂಗಲಾಚಿದ್ದಾರೆ.
ಶುಕ್ರವಾರ ಸಮಿತಿ ಎದುರು ಹಾಜರು:
ದೊಡ್ಡಬಳ್ಳಾಪುರದ ಕಚೇರಿಪಾಳ್ಯದಲ್ಲಿ ತಾತನ ಮನವಿ ಮೇರೆಗೆ ಮಗುವನ್ನು ಸುಪರ್ದಿಗೆ ಪಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಗುವಿಗೆ ತಾತ್ಕಾಲಿಕವಾಗಿ ಶಿಶುಮಂದಿರದ ಆಸರೆಗೊಪ್ಪಿಸಿದ್ದಾರೆ. ಮಗುವಿನ ಆರೋಗ್ಯ ತಪಾಸಣೆ ನಡೆಸಿದ್ದು ಅದೃಷ್ಟವಶಾತ್ ಮಗು ಆರೋಗ್ಯವಾಗಿದೆ ಎಂದು ವೈದ್ಯಾಧಿಕಾರಿಗಳು ದೃಢೀಕರಿಸಿದ್ದಾರೆ. ಮಗುವಿಗೆ ಶಿಶುಮಂದಿರ ಸಿಬ್ಬಂದಿ ಹಾಲುಣಿಸಿ ಪೋಷಣೆ ಮಾಡಿದ್ದಾರೆ. ಅಧಿಕಾರಿಗಳ ಪ್ರಕಾರ ಮಗುವಿಗೆ ಸ್ನಾನ ಮಾಡಿಸಿದೇ ತಿಂಗಳುಗಟ್ಟಲೆಯಾಗಿದೆ ಎಂದಿದ್ದಾರೆ. ಇಂಥ ಅಮಾನವೀಯ ಪರಿಸ್ಥಿತಿಯಲ್ಲಿ ಬದುಕಿದ್ದ ಮಗುವಿನ ಸ್ಥಿತಿಗೆ ಸಿಬ್ಬಂದಿಯೇ ಮರುಗುವಂತಾಗಿದೆ. ತಾತ್ಕಾಲಿಕವಾಗಿ ಶಿಶುಮಂದಿರದ ಆಶ್ರಯದಲ್ಲಿರುವ ಮಗುವನ್ನು ಶುಕ್ರವಾರ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಲಾಗುತ್ತದೆ. ಸಮಿತಿ ಆದೇಶದಂತೆ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ 9 ಮಕ್ಕಳು ದತ್ತು ಸಂಸ್ಥೆಯಲ್ಲಿದ್ದು, 5 ಮಕ್ಕಳು ಪಾಲನೆ ಮತ್ತು ಪೋಷಣೆಯಲ್ಲಿದ್ದಾರೆ. 4 ಮಕ್ಕಳು ದತ್ತು ಪ್ರಕ್ರಿಯೆಯಲ್ಲಿದ್ದಾರೆ. ಇನ್ನೂ ವಿಶೇಷ ಪಾಲನಾ ಯೋಜನೆಯಡಿ ಎಚ್‌ಐವಿ ಸೋಂಕಿತ ಹಾಗೂ ಭಾದಿತ ಮಕ್ಕಳಿಗೆ ಮತ್ತು ಏಡ್ಸ್ ರೋಗದಿಂದ ಪಾಲಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಪೌಷ್ಠಿಕ ಆಹಾರ, ಶಿಕ್ಷಣ, ಆರೋಗ್ಯಕ್ಕಾಗಿ ಪ್ರತಿ ತಿಂಗಳು ಡಿಬಿಟಿ ಮೂಲಕ ಸಹಾಯಧನ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಕ್ಕಳ ಸಹಾಯವಾಣಿ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತದೆ, ದೊಡ್ಡಬಳ್ಳಾಪುರದ ಕಚೇರಿಪಾಳ್ಯದಲ್ಲಿ ತಾಯಿಯಿಂದ ಪರಿತ್ಯಕ್ತವಾಗಿರುವ ಮಗುವಿನ ಮಾಹಿತಿ ಪಡೆದ ತಕ್ಷಣ ಮಹಿಳಾ ಪೊಲೀಸ್ ಠಾಣೆ ಸಿಬ್ಬಂದಿ, ಅಕ್ಕಪಡೆ ಸಹಕಾರದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಮಗುವನ್ನು ರಕ್ಷಣೆ ಮಾಡಲಾಗಿದೆ. ತಾತ್ಕಾಲಿಕವಾಗಿ ಮಗುವನ್ನು ಶಿಶುಮಂದಿರದ ಸುಪರ್ದಿಗೆ ನೀಡಲಾಗಿದೆ. ಶುಕ್ರವಾರ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಲಾಗುತ್ತದೆ.
ಶ್ರೀನಿವಾಸ್, ಮಹಿಳಾ ಘಟಕದ ಜಿಲ್ಲಾ ಸಂಯೋಜಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net