ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಅಪಾರ ಕ್ರೀಡಾ ಪ್ರತಿಭೆಯನ್ನು ಹೊಂದಿವೆ. ಗ್ರಾಮೀಣ ಭಾಗದ ಅನೇಕ ಯುವ ಪ್ರತಿಭೆಗಳಿಗೆ ಪ್ರತಿಭೆ ಮತ್ತು ಉತ್ಸಾಹವಿದ್ದರೂ, ಗುಣಮಟ್ಟದ ತರಬೇತಿ ಹಾಗೂ ಆಧುನಿಕ ಕ್ರೀಡಾ ಮೂಲಸೌಕರ್ಯದ ಕೊರತೆಯಿಂದಾಗಿ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪ್ರದರ್ಶಿಸಲು ಅವಕಾಶ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ದೇವನಹಳ್ಳಿಯಲ್ಲಿ ವಿಶ್ವಮಟ್ಟದ ಕ್ರೀಡಾ ಮೂಲಸೌಕರ್ಯ ನಿರ್ಮಿಸಬೇಕಾಗಿದೆ ಇದರಿಂದ ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ದೊಡ್ಡ ಉತ್ತೇಜನ ನೀಡಲಿದೆ ಎಂದು ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಪ್ರಧಾನಿ ಅವರ ಖೇಲೋ ಇಂಡಿಯಾ ಪರಿಕಲ್ಪನೆಯ ಆಶಯದಂತೆ ಕ್ರೀಡೆಯನ್ನು ದೇಶದ ಮೂಲೆಮೂಲೆಗೂ ಕೊಂಡೊಯ್ದು, ಗ್ರಾಮೀಣ ಹಾಗೂ ಸ್ಥಳಿಯ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇದೇ ಆಶಯವನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲೂ ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಸದರು ತಿಳಿಸಿದ್ದಾರೆ. ಇದು ಕೇವಲ ಒಂದು ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸುವ ಯೋಜನೆಯಲ್ಲ. ಚಿಕ್ಕಬಳ್ಳಾಪುರದ ಮುಂದಿನ ಪೀಳಿಗೆಯ ಪ್ರತಿಭೆ, ಶಿಸ್ತು, ಆತ್ಮವಿಶ್ವಾಸ ಮತ್ತು ಕನಸುಗಳಲ್ಲಿ ಮಾಡುತ್ತಿರುವ ಹೂಡಿಕೆ. ನಮ್ಮ ಗ್ರಾಮೀಣ ಭಾಗದ ಮಕ್ಕಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಕ್ರೀಡಾ ವೇದಿಕೆಯಲ್ಲೂ ಭಾರತದ ಪರವಾಗಿ ಸ್ಪರ್ಧಿಸುವಂತಹ ಅವಕಾಶಗಳನ್ನು ಸೃಷ್ಟಿಸುವುದು ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.