2031ರ ವೇಳೆಗೆ 60 ಸಾವಿರ ಉದ್ಯೋಗ ಸೃಷ್ಟಿ

Groundbreaking Ceremony for the (MRO) Unit
devanahalli
Groundbreaking Ceremony for the (MRO) Unit
Published on: 

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ರಾಜ್ಯದಲ್ಲಿ 2031ರ ವೇಳೆಗೆ ಸರ್ಕಾರ 60 ಸಾವಿರ ಉದ್ಯೋಗ ಸೃಷ್ಟಿ ಮಾಡುವ ಗುರಿ ಹೊಂದಿದೆ ಎಂದು ಬೃಹತ್​ ಕೈಗಾರಿಕಾ ಸಚಿವ ಡಾ.ಎಂ.ಬಿ ಪಾಟೀಲ್​ ತಿಳಿಸಿದರು.

ದೇವನಹಳ್ಳಿ ಏರೋಸ್ಪೇಸ್​ ಪಾರ್ಕ್​ನಲ್ಲಿ ಕಾಲಿನ್ಸ್​ ಏರೋಸ್ಪೇಸ್​ ಸಂಸ್ಥೆ ದೇಶದ ಮೊದಲ ವಿಮಾನ ನಿರ್ವಹಣೆ, ದುರಸ್ತಿ ಮತ್ತು ಪರಿಶೀಲನಾ (ಎಂಆರ್​ಒ) ಘಟಕ ನಿಮಾರ್ಣದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಏರೋಸ್ಪೇಸ್​ ಮತ್ತು ರಕ್ಷಣಾ ವಲಯದಲ್ಲಿ ರಾಜ್ಯದ ಬೆಳವಣಿಗೆಗೆ ವೇಗ ನೀಡಲು ಸರ್ಕಾರ ನೂತನ ಏರೋಸ್ಪೇಸ್​ ಮತ್ತು ರಕ್ಷಣಾ ನೀತಿ ಜಾರಿಗೆ ತಂದಿದೆ. ಈ ನೀತಿಯಡಿ 2031ರ ವೇಳೆಗೆ 60 ಸಾವಿರ ಕೋಟಿ ರೂ.ಬಂಡವಾಳ ಹೂಡಿಕೆ ಆಕರ್ಷಿಸುವುದರ ಜತೆಗೆ 60 ಸಾವಿರ ಉದ್ಯೋಗ ಸೃಷ್ಟಿಸುವ ಗುರಿ ಇಟ್ಟುಕೊಂಡಿದೆ ಎಂದರು. ದೇಶದ ಏರೋಸ್ಪೇಸ್​ ವಲಯದಲ್ಲಿ ರಾಜ್ಯ ಸುಮಾರು ಶೇ.65 ಪಾಲು ಹೊಂದಿದೆ. ಈ ಹೊಸ ಯೋಜನೆಯಿಂದ ವಿಮಾನಯಾನ ಸೇವೆಗಳ ರಫ್ತು ವಹಿವಾಟಿನಲ್ಲಿಯೂ ರಾಜ್ಯದ ಸಾಮರ್ಥ್ಯ ಹೆಚ್ಚಲಿದೆ. ಕಳೆದ ಐದು ವರ್ಷಗಳಲ್ಲಿ ಕಾಲಿನ್ಸ್​ ಏರೋಸ್ಪೇಸ್​ ಸಂಸ್ಥೆಯು ಭಾರತದಲ್ಲಿ 200 ಮಿಲಿಯನ್​ ಡಾಲರ್​ ಹೂಡಿಕೆ ಮಾಡಿದೆ. ಕಳೆದ ನವೆಂಬರ್​ನಲ್ಲಿ ಇದೇ ದೇವನಹಳ್ಳಿಯಲ್ಲಿ ಕಂಪನಿಯ ತಯಾರಿಕಾ ಘಟಕ ಉದ್ಘಾಟಿಸಲಾಗಿತ್ತು ಎಂದು ಸಚಿವರು ಸ್ಮರಿಸಿದರು.

ಅಭಿವೃದ್ಧಿ ಅಗತ್ಯ:

ದೇಶದಲ್ಲಿ ಪ್ರಾದೇಶಿಕ ವಿಮಾನಯಾನ ಸಂಪರ್ಕ ಜಾಲ ವಿಸ್ತರಣೆಯಾಗುತ್ತಿರುವುದರಿಂದ ಹಾಗೂ ರಕ್ಷಣಾ ವಲಯದಲ್ಲಿಯೂ ವಿಮಾನಗಳ ನಿರ್ವಹಣೆ ಮತ್ತು ದುರಸ್ತಿ ಸೇವೆಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಎಂಆರ್​ಒ ಘಟಕಗಳ ಅಭಿವೃದ್ಧಿ ಅತ್ಯಂತ ಅಗತ್ಯವಾಗಿದೆ ಎಂದ ಸಚಿವರು ಈ ಸೇವೆಗಳನ್ನು ದೇಶೀಯವಾಗಿಯೇ ಅಭಿವೃದ್ಧಿಪಡಿಸುವುದರಿಂದ ವಿದೇಶಿ ಸಂಸ್ಥೆಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಜತೆಗೆ ವೈಮಾನಿಕ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಮತ್ತು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು. ಕಾಲಿನ್ಸ್​ ಏರೋಸ್ಪೇಸ್​ನ ಈ ಹೂಡಿಕೆಯು ರಾಜ್ಯ ಕೈಗಾರಿಕಾ ಪರಿಸರ ವ್ಯವಸ್ಥೆ, ತಾಂತ್ರಿಕ ಪರಿಣತಿ ಮತ್ತು ಉದ್ಯೋಗಾವಕಾಶಗಳ ವಿಸ್ತರಣೆಗೆ ಸಹಕಾರಿಯಾಗಲಿದೆ. ಜಾಗತಿಕ ಏರೋಸ್ಪೇಸ್​ ಕಂಪನಿಗಳನ್ನು ರಾಜ್ಯದತ್ತ ಆಕರ್ಷಿಸುವ ಸರ್ಕಾರದ ಪ್ರಯತ್ನಗಳಿಗೆ ಮತ್ತೊಂದು ಮಹತ್ವದ ಸೇರ್ಪಡೆಯಾಗಿದೆ ಎಂದರು. ರಾಜ್ಯ ಸರ್ಕಾರ ಯೋಜನೆಗಾಗಿ 26 ಎಕರೆ ಭೂಮಿ ಒದಗಿಸಿದ್ದು, ಇದರಿಂದ ಸುಮಾರು 2,100 ನೇರ ಉದ್ಯೋಗ ಸೃಷ್ಟಿಯಾಗಲಿವೆ ಎಂದು ತಿಳಿಸಿದರು.

ಮಹತ್ವದ ಹೆಜ್ಜೆ:

ಸಂಸದ ಡಾ.ಕೆ.ಸುಧಾಕರ್​ ಮಾತನಾಡಿ, ಭಾರತ ಈಗಾಗಲೇ ಜಗತ್ತಿನ ಮೂರನೇ ಅತಿದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆಯಾಗಿದೆ. ಆದರೆ ನಮ್ಮ ದೇಶ ಕೆಲವೇ ವಿಮಾನಗಳು ಹಾರಾಡುವ ದೇಶವಾಗಿ ಉಳಿಯಬಾರದು ಅದಕ್ಕಿಂತ ಮುಂದಕ್ಕೆ ಹೋಗಿ ಬೆಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು. ಇಡೀ ಜಗತ್ತಿಗೆ ಅಗತ್ಯವಿರುವ ವಿಮಾನಗಳನ್ನು ವಿನ್ಯಾಸಗೊಳಿಸುವ, ಉತ್ಪಾದಿಸುವ, ನಿರ್ವಹಿಸುವ ಮತ್ತು ಸೇವೆ ಒದಗಿಸುವ ದೇಶವಾಗಿ ಭಾರತ ಬೆಳೆಯಬೇಕಿದೆ. ಈ ನಿಟ್ಟಿನಲ್ಲಿ ನೂತನ ಘಟಕ ಮಹತ್ವದ ಹೆಜ್ಜೆಯಾಗಿದೆ ಎಂದರು.