

ಕನಕಪುರ: ಮಳೆ ಕೈಕೊಟ್ಟು ಬೆಳೆ ಒಣಗುತ್ತಿರುವ, ಸಾಲದ ಹೊರೆ ಹೆಚ್ಚಾಗಿ ರೈತರು ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಮಣ್ಣಿನ ಮಕ್ಕಳ ನೋವನ್ನು ಆಲಿಸದ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಕನಕಪುರದಿಂದಲೇ ಜೆಡಿಎಸ್ ರೈತ ಸ್ವಾಭಿಮಾನ ಯಾತ್ರೆ ಆರಂಭಿಸಲಾಗಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಗರದ ಚನ್ನಬಸಪ್ಪ ವೃತ್ತದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಜನರು ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಿ ಉತ್ತಮ ಆಡಳಿತ ನೀಡುವ ಅವಕಾಶ ಕಲ್ಪಿಸಿದ್ದರು. ಆದರೆ, ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ರಾಜ್ಯದ ಹಲವು ಭಾಗಗಳಲ್ಲಿ ಸಮರ್ಪಕ ಮಳೆಯಾಗದೆ ರೈತರು ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಜಾನುವಾರುಗಳಿಗೆ ಮೇವಿನ ಹಾಗೂ ನೀರಿನ ಸಮಸ್ಯೆ ಎದುರಾಗಿದೆ. ಸಾವಿರಾರು ರೈತರು ಸಾಲದ ಶೂಲಕ್ಕೆ ಸಿಲುಕಿದ್ದಾರೆ. ಆದರೆ, ರೈತರ ಸಂಕಷ್ಟವನ್ನು ಕೇಳುವವರಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರ ಸಂಕಷ್ಟ ಅರಿತು ಎರಡು ಬಾರಿ ಸಾಲ ಮನ್ನಾ ಮಾಡಲಾಗಿತ್ತು. ಆದರೆ, ಇದೇ ಜಿಲ್ಲೆಯವರೇ ಆದ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ಕನಕಪುರ ಸೇರಿ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಸಾಧ್ಯವಾಗಿಲ್ಲ. ಭಾವನಾತ್ಮಕ ಮಾತುಗಳ ಮೂಲಕ ಜನರನ್ನು ಎಷ್ಟು ದಿನ ವಂಚಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಅಭಿವೃದ್ಧಿಯ ಎಲ್ಲ ಕ್ಷೇತ್ರಗಳಲ್ಲೂ ಎಡವಿದೆ ಎಂದು ಆರೋಪಿಸಿದ ಅವರು, ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ರೈತ ಸ್ವಾಭಿಮಾನ ಯಾತ್ರೆ ಹಮ್ಮಿಕೊಳ್ಳಲಾಗಿದೆ. ರೈತರ ಧ್ವನಿಯಾಗಿ ಜೆಡಿಎಸ್ ಹೋರಾಟ ನಡೆಸಲಿದೆ ಎಂದರು.
ಮಾಜಿ ಶಾಸಕ ಎ. ಮಂಜು ಮಾತನಾಡಿ, ರಾಜ್ಯದ ಖಜಾನೆ ಖಾಲಿಯಾಗಿದ್ದು ಅಭಿವೃದ್ಧಿ ಕುಂಠಿತವಾಗಿದೆ ಎಂದು ಆರೋಪಿಸಿದರು. ಜಿಲ್ಲೆಯವರೇ ಮುಖ್ಯಮಂತ್ರಿಯಾಗಿದ್ದು, ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸಲು ವಿಫಲರಾಗಿದ್ದಾರೆ. ತಾವು ಪ್ರತಿನಿಧಿಸುವ ತಾಲೂಕು ಹಾಗೂ ಜಿಲ್ಲೆಗೆ ಏನೂ ಮಾಡದವರಿಂದ ರಾಜ್ಯದ ಜನತೆ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ಶಾಸಕ ಕೃಷ್ಣಾರೆಡ್ಡಿ ಮಾತನಾಡಿ, ರಾಜ್ಯ ಸರ್ಕಾರ ರೈತರು ಹಾಗೂ ಮಹಿಳೆಯರ ವಿರೋಧಿ ಸರ್ಕಾರವಾಗಿದೆ ಎಂದು ತೀವ್ರವಾಗಿ ಟೀಕಿಸಿದರು.
ನಲಪಾಡ್‌ಗೆ ಎ. ಮಂಜು ಎಚ್ಚರಿಕೆ: ಸಾಮಾಜಿಕ ಜಾಲತಾಣದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಲಘುವಾಗಿ ಮಾತನಾಡಿರುವ ಕಾಂಗ್ರೆಸ್ ಮುಖಂಡ ನಲಪಾಡ್ ವಿರುದ್ಧ ಹರಿಹಾಯ್ದ ಎ.ಮಂಜುನಾಥ್, ನಿಖಿಲ್ ಅವರ ವಿರುದ್ಧ ಲಘುವಾಗಿ ಮಾತನಾಡಿದರೆ ಜನರು ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದರು.
ನಿಖಿಲ್ ಮೂರು ಚುನಾವಣೆಗಳಲ್ಲಿ ಸ್ಪರ್ಧಿಸುವ ಮೂಲಕ ಜನರಿಗೆ ಚಿರಪರಿಚಿತರಾಗಿದ್ದಾರೆ. ಅವಹೇಳನಕಾರಿ ಹೇಳಿಕೆಗಳನ್ನು ನೀಡಿದರೆ ನಿಖಿಲ್ ಅವರ ಅಭಿಮಾನಿಗಳೇ ತಕ್ಕ ಉತ್ತರವನ್ನು ನೀಡಲಿದ್ದಾರೆ ಎನ್ನುವುದು ನಲಪಾಡ್ ಅವರ ಗಮನದಲ್ಲಿ ಇರಲಿ ಎಂದರು.
ಬಂಡೆಗೆ ಭಾವನೆ ಇರುತ್ತಾ? : ರಾಜಕೀಯಕ್ಕಿಂತ ಜನರ ಭಾವನೆ ಮುಖ್ಯ. ನಾವು ಭಾವನೆಯ ಮೇಲೆ ರಾಜಕೀಯ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳುತ್ತಾರೆ. ಆದರೆ, ರಾಜ್ಯದಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ತಮ್ಮ ಬದುಕಿಗೆ ಸರ್ಕಾರ ನೆರವಾಗಬೇಕು ಎಂದು ಅಂಗಲಾಚುತ್ತಿದ್ದಾರೆ. ರೈತರ ಈ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕಿದೆ ಎಂದು ನಿಖಿಲ್ ಆಗ್ರಹಿಸಿದರು.
ರೈತರ ಬದುಕು ಬರ್ಬರವಾಗಿರುವ ಸಂದರ್ಭದಲ್ಲಿ ಅವರ ಸಮಸ್ಯೆಗೆ ಪರಿಹಾರ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಒಂದು ಕಡೆ ಜನರ ಭಾವನೆ ಮುಖ್ಯ ಎಂದು ಹೇಳುತ್ತಾ, ಮತ್ತೊಂದೆಡೆ ರೈತರ ನೋವು ಮತ್ತು ಸಂಕಷ್ಟಗಳಿಗೆ ಸ್ಪಂದಿಸದಿರುವುದು ಏಕೆ ಎಂದು ಅವರು ಪ್ರಶ್ನಿಸಿದರು.
ಬಿಡದಿಯ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ ನಿಖಿಲ್, ಅವರನ್ನು ಬಂಡೆ ಎಂದು ಕರೆಯುತ್ತಾರೆ. ಆದರೆ, ಬಂಡೆಗೆ ಭಾವನೆ ಎಲ್ಲಿಂದ ಬರುತ್ತದೆ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. ರೈತರ ಸಮಸ್ಯೆ, ಮಳೆ ಕೊರತೆ ಹಾಗೂ ಕೃಷಿ ಸಂಕಷ್ಟದಂತಹ ಜನಜೀವನಕ್ಕೆ ನೇರವಾಗಿ ಸಂಬಂಧಿಸಿದ ವಿಚಾರಗಳಲ್ಲಿ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಕನಕಪುರದ ಬೀದಿಗಳಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸ್ವಕ್ಷೇತ್ರ ಕನಕಪುರದಲ್ಲಿ ರೈತ ಸ್ವಾಭಿಮಾನಿಯಾತ್ರೆ ಮೂಲಕ ಜೆಡಿಎಸ್ ಶಕ್ತಿಪ್ರದರ್ಶನ ಭರ್ಜರಿಯಾಗಿಯೇ ನಡೆಯಿತು. ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಈ ಯಾತ್ರೆಯಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳುವ ಮೂಲಕ ಸಿಎಂ ಭದ್ರ ಕೋಟೆಗೆ ಲಗ್ಗೆ ಇಡುವ ಮುನ್ಸೂಚನೆಯನ್ನು ಸಹ ನೀಡಿದರು. ಯಾತ್ರೆಯಲ್ಲಿ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿ ಪಕ್ಷದ ಶಕ್ತಿ ಪ್ರದರ್ಶಿಸಿದರು. ನಗರದ ಶಿವಪಾರ್ವತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ನಿಖಿಲ್ ಕುಮಾರಸ್ವಾಮಿ ಅವರು ರೈತ ಸ್ವಾಭಿಮಾನಿ ಯಾತ್ರೆಗೆ ಚಾಲನೆ ನೀಡಿದರು. ಬಳಿಕ ರೈಸ್ ಮಿಲ್ ವೃತ್ತದಿಂದ ಚನ್ನಬಸಪ್ಪ ವೃತ್ತದವರೆಗೆ ಸುಮಾರು 3 ಕಿ.ಮಿ. ಪಾದಯಾತ್ರೆ ಸಾಗಿ ಅಂತ್ಯಕಂಡಿತು. ಇಲ್ಲಿಯೇ ನಿಖಿಲ್ ಕುಮಾರಸ್ವಾಮಿ ಬಹಿರಂಗ ಸಮಾವೇಶ ನಡೆಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಯಾರ್ಯಾರು ಇದ್ದರು? : ಕೆ.ಆರ್. ಪೇಟೆ ಶಾಸಕ ಮಂಜು, ಮಾಜಿ ಶಾಸಕ ಎ. ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಶರವಣ, ಜವರೇಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು, ಮಾಜಿ ಶಾಸಕ ರಮೇಶ್ ಗೌಡ, ಮಹಿಳಾ ಮುಖಂಡೆ ರತ್ನಮ್ಮ, ರಾಜ್ಯ ಜೆಡಿಎಸ್ ಯುವ ಉಪಾಧ್ಯಕ್ಷ ಚಿನ್ನಸ್ವಾಮಿ, ಕನಕಪುರ ತಾಲೂಕು ಅಧ್ಯಕ್ಷ ಬಿ. ನಾಗರಾಜು, ದಿಶಾ ಸಮಿತಿ ಸದಸ್ಯರಾದ ರಾಜೇಶ್, ಶೋಭಾ, ನಗರಸಭೆ ಮಾಜಿ ಸದಸ್ಯರಾದ ಪುಟ್ಟರಾಜು, ಕುರುಪೇಟೆ ಲೋಕೇಶ್, ಸ್ಟುಡಿಯೋ ಚಂದ್ರು, ಹಿರಿಯ ಮುಖಂಡ ಸಿದ್ದಮರಿಗೌಡ, ಯುವ ಮುಖಂಡರಾದ ಅರಳಾಳು ರಾಜೇಂದ್ರ, ತಿಮ್ಮೇಗೌಡ, ಹಾರೋಹಳ್ಳಿ ತಾಲೂಕು ಅಧ್ಯಕ್ಷ ರಾಮು ಮುಂತಾದವರು ಪಾದಯಾತ್ರೆಯಲ್ಲಿ ಪಾಲ್ಗೊಂಡ ಪ್ರಮುಖರು.
ಸಾವಿರಾರು ಅಭಿಮಾನಿಗಳು ಭಾಗಿ: ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ವಾಭಿಮಾನಿ ಯಾತ್ರೆ ಸೋಮವಾರ ಬೆಳಗ್ಗೆ 9.30ಕ್ಕೆ ನಗರದ ರೈಸ್‌ಮಿಲ್‌ನಿಂದ ಪಾದಯಾತ್ರೆ ಆರಂಭವಾಗಿ ನಂತರ ನಗರದ ಸಿಬಿ ವೃತ್ತದಲ್ಲಿ ವೇದಿಕೆ ಸಮಾವೇಶ ನಡೆಯಿತು. ಯಾತ್ರೆಗೆ ಜಿಲ್ಲೆಯಾದ್ಯಂತ ಜೆಡಿಎಸ್ ಕಾರ್ಯಕರ್ತರು, ಪದಾಧಿಕಾರಿಗಳು, ಮುಖಂಡರು ಸೇರಿ ಸಾವಿರಾರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.