ಚಿರತೆ ದಾಳಿಯಿಂದ ಗಾಯಗೊಂಡ ಯುವಕ

* ಚನ್ನಪಟ್ಟಣ ತಾಲೂಕಿನಲ್ಲಿ ಹೆಚ್ಚಿದ ಚಿರತೆ ಹಾವಳಿ * ಗರಕಹಳ್ಳಿಯಲ್ಲಿ ಯುವಕ ಮೇಲೆ ದಾಳಿ * ಕೃಷ್ಣಾಪುರದಲ್ಲಿ 300 ಕೋಳಿಗಳ ಬಳಿ
leopard
ಚಿರತೆ ಸಂಗ್ರಹ ಚಿತ್ರ
Published on: 

ರಾಮನಗರ: ಚನ್ನಪಟ್ಟಣ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಚಿರತೆ ಹಾವಳಿ ಮುಂದುವರಿದಿದ್ದು, ಗರಕಹಳ್ಳಿಯಲ್ಲಿ ಜಾನುವಾರುಗಳಿಗೆ ಮೇವು ಕೊಯ್ಯುತ್ತಿದ್ದ ಯುವಕನ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

ಮತ್ತೊಂದೆಡೆ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಕೋಳಿ ಫಾರ್ಮ್‌ಗೆ ನುಗ್ಗಿರುವ ಚಿರತೆ ನಾಲ್ಕು ದಿನಗಳಲ್ಲಿ 300ಕ್ಕೂ ಹೆಚ್ಚು ನಾಟಿ ಕೋಳಿಗಳನ್ನು ತಿಂದುಹಾಕಿದೆ.

ತಾಲೂಕಿನ ಗರಕಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ 9.30ರ ಸುಮಾರಿಗೆ ಸಿದ್ದೇಶ್ ಎಂಬ ಯುವಕ ಜಾನುವಾರುಗಳಿಗೆ ಮೇವು ಕುಯ್ಯುತ್ತಿದ್ದ ವೇಳೆ ಏಕಾಏಕಿ ಚಿರತೆ ದಾಳಿ ನಡೆಸಿದೆ ಎನ್ನಲಾಗಿದೆ. ಚಿರತೆ ದಾಳಿಯಿಂದ ಸಿದ್ದೇಶ್ ಕೆಲವೇ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದ್ದು, ಜಮೀನು ಹಾಗೂ ಜಾನುವಾರುಗಳಿರುವ ಪ್ರದೇಶಗಳಿಗೆ ತೆರಳಲು ಭಯಪಡುವಂತಾಗಿದೆ. ಅರಣ್ಯ ಇಲಾಖೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಚಿರತೆ ಸೆರೆಹಿಡಿಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

300ಕ್ಕೂ ಹೆಚ್ಚು ಕೋಳಿಗಳ ಬಲಿ!!

ಇನ್ನೊಂದೆಡೆ ಗರಕಹಳ್ಳಿ ಪಕ್ಕದ ಕೃಷ್ಣಾಪುರ ಗ್ರಾಮದಲ್ಲಿ ನಿರಂಜನ ಎಂಬ ರೈತರು ತಮ್ಮ ಜಮೀನಿನಲ್ಲಿ ನಿರ್ಮಿಸಿಕೊಂಡಿರುವ ಕೋಳಿ ಫಾರ್ಮ್‌ಗೆ ಚಿರತೆ ಕಳೆದ ನಾಲ್ಕು ದಿನಗಳಿಂದ ಪ್ರತಿನಿತ್ಯ ರಾತ್ರಿ ವೇಳೆ ಬರುತ್ತಿದೆ ಎನ್ನಲಾಗಿದೆ.

ರಾತ್ರಿ ವೇಳೆ ಕೋಳಿ ಫಾರ್ಮ್‌ಗೆ ನುಗ್ಗುತ್ತಿರುವ ಚಿರತೆ ಸುಮಾರು 300ಕ್ಕೂ ಹೆಚ್ಚು ನಾಟಿ ಕೋಳಿಗಳನ್ನು ತಿಂದುಹಾಕಿದೆ ಎಂದು ರೈತ ನಿರಂಜನ ತಿಳಿಸಿದ್ದಾರೆ. ಇದರಿಂದ ರೈತರಿಗೆ ಆರ್ಥಿಕ ನಷ್ಟವೂ ಉಂಟಾಗಿದೆ.

ಚಿರತೆ ಹಾವಳಿ ಕುರಿತು ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಸಂಚರಿಸುತ್ತಿರುವ ಕೋಳಿ ಫಾರ್ಮ್‌ ಬಳಿ ಅರಣ್ಯ ಇಲಾಖೆ ಬೋನ್ ಅಳವಡಿಸಿದ್ದು, ಚಿರತೆಯನ್ನು ಸೆರೆಹಿಡಿಯಲು ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net