ಚನ್ನಪಟ್ಟಣ: ಹೊಸ ವರ್ಷವನ್ನು ಸ್ವಾಗತ ಮಾಡಲು ಸಜ್ಜಾಗಿದ್ದ ನಿವಾಸಿಗಳು ರಸ್ತೆಯಲ್ಲಿ ಮಾಡಿದ್ದ ವಾಮಾಚಾರದ ದೃಶ್ಯವನ್ನು ಕಂಡು ಬೆಚ್ಚಿ ಬಿದ್ದ ಘಟನೆ ತಾಲೂಕಿನ ಕೋಡಂಬಳ್ಳಿ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಗುರುವಾರ ನಡೆದಿದೆ.
ಓಡಾಡುವ ರಸ್ತೆಯಲ್ಲಿ ಮಣ್ಣಿನ ಗೊಂಬೆ ಆಕಾರಕ್ಕೆ ಅರಿಶಿನ, ಕುಂಕುಮ, ನಿಂಬೆಹಣ್ಣು, ದೀಪ ಇಟ್ಟು ಪೂಜೆ ಮಾಡಿದ್ದು, ಮೊಟ್ಟೆಯನ್ನು ಸಹ ಹೊಡೆಯಲಾಗಿದೆ. ವಿಚಿತ್ರರೀತಿಯ ಅಕಾರದ ಮಣ್ಣಿನ ಮೂರ್ತಿಯ ಸುತ್ತಲೂ ರಂಗೋಲಿ ಸಹ ಬಿಡಲಾಗಿದೆ. ಬುಧವಾರ ರಾತ್ರಿ ಈ ಕೆಲಸ ಮಾಡಲಾಗಿದೆ ಎನ್ನಲಾಗಿದ್ದು, ವಾಮಾಚಾರದ ಈ ದೃಶ್ಯವನ್ನು ಕಂಡು ಬೀದಿಯ ಜನತೆ ಗಾಬರಿಗೊಂಡಿದ್ದಾರೆ.
ಹೊಸವರ್ಷದ ಅಮಲಿನಲ್ಲಿ ಯಾರೋ ಕಿಡಿಗೇಡಿಗಳು ಈ ರೀತಿ ತಮಾಷೆಗೆ ಮಾಡಿದ್ದಾರಾ ಅಥವಾ ಉದ್ದೇಶದಿಂದಲೇ ಮಾಡಿದ್ದಾರ ಎಂಬುದರ ಬಗ್ಗೆ ಗ್ರಾಮಸ್ಥರು ಗೊಂದಲ ಹಾಗೂ ಗಾಬರಿಗೆ ಒಳಗಾಗಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಮಾಡಲಿ ಎಂದು ಜನರು ಒತ್ತಾಯಿಸಿದ್ದಾರೆ.