ಸೈನೈಡ್ ಸೇವಿಸಿ ಆತ್ಮಹತ್ಯೆ

* ರಾಮನಗರದಲ್ಲಿ ಘಟನೆ * ಕೌಟುಂಬಿಕ ಕಲಹದಿಂದ ಬೇಸತ್ತು ಕೃತ್ಯ
ಆ* ತ್ಮ ಹ*ತ್ಯೆ
ಸಂಗ್ರಹ ಚಿತ್ರ
Published on: 

ರಾಮನಗರ

ನಗರದ ಐಜೂರು ಮತ್ತು ಮಹಿಳಾ ಪೊಲೀಸ್ ಠಾಣೆ ಸಮೀಪದ ಬಿ.ಎಂ.ರಸ್ತೆಯ ವಿನಾಯಕನಗರ ಬಡಾವಣೆಯ ವ್ಯಕ್ತಿಯೊಬ್ಬ ಕೌಟುಂಬಿಕ ಕಲಹಕ್ಕೆ ಬೇಸತ್ತು ಪತ್ನಿ ಮತ್ತು ಪುತ್ರನ ಎದುರಲ್ಲೇ ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಚಿನ್ನ-ಬೆಳ್ಳಿ ತಯಾರಿಸುವ ಕೆಲಸ ಮಾಡುತ್ತಿದ್ದ ನಟರಾಜ್ ಆಚಾರ್ (50) ಮೃತ. ನಟರಾಜ್‌ಗೆ ಪತ್ನಿ ದೀಪಾ ಹಾಗೂ ಎಸ್ಸೆಸ್ಸೆಲ್ಸಿ ಒದುತ್ತಿರುವ ಓರ್ವ ಪುತ್ರನಿದ್ದಾನೆ. ಕೌಟುಂಬಿಕ ವಿಷಯಕ್ಕೆ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಪತಿ ವಿರುದ್ಧ ದೀಪಾ ಮಹಿಳಾ ಠಾಣೆ ಮತ್ತು ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಗೆ ದೂರು ಕೊಟ್ಟಿದ್ದರು. ಆದರೂ, ದಂಪತಿ ನಡುವಿನ ಕಲಹ ನಿಂತಿರಲಿಲ್ಲ.

ಪತ್ನಿ ಎರಡು ತಿಂಗಳಿಂದ ಪತಿಯಿಂದ ಪ್ರತ್ಯೇಕವಾಗಿ ಹೊಳೆನರಸೀಪುರದಲ್ಲಿರುವ ತನ್ನ ಅಜ್ಜಿ ಮನೆಯಲ್ಲಿ ನೆಲೆಸಿದ್ದರು. ರಾಮನಗರದಲ್ಲಿ ಓದುತ್ತಿದ್ದ ಪುತ್ರನನ್ನು ಭೇಟಿ ಮಾಡುವುದಕ್ಕಾಗಿ ಶನಿವಾರ ರಾಮನಗರಕ್ಕೆ ಬಂದಿದ್ದು, ವಿಷಯ ತಿಳಿದ ನಟರಾಜ್ ಶಾಲೆ ಬಳಿ ಬಂದಾಗ ಮತ್ತೆ ಜಗಳವಾಗಿದೆ ಎನ್ನಲಾಗಿದೆ. ನಟರಾಜ್ ವರ್ತನೆಗೆ ಬೇಸತ್ತ ನಟರಾಜ್ ಪತ್ನಿ ಮತ್ತೆ ದೂರು ಕೊಡುವುದಾಗಿ ಮಹಿಳಾ ಠಾಣೆಗೆ ಪುತ್ರನೊಂದಿಗೆ ತೆರಳಿದಾಗ ಹಿಂಬಾಲಿಸಿಕೊಂಡು ಬಂದ ನಟರಾಜ್, ದೂರು ಕೊಟ್ಟರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಸೈನೈಡ್ ಸೇವಿಸಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net