ಉಪನಗರ ಮಾಸ್ಟರ್​ಪ್ಲ್ಯಾನ್​ ಶ್ರೀಘ್ರ ಸಿದ್ಧ

ಬೆಂಗಳೂರಿನಲ್ಲಿ ಜಿಬಿಡಿಎ ಸಾಮಾನ್ಯ ಸಭೆ ನಡೆಯಿತು.
ಬೆಂಗಳೂರಿನಲ್ಲಿ ಜಿಬಿಡಿಎ ಸಾಮಾನ್ಯ ಸಭೆ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಜಿಬಿಡಿಎ ಅಧ್ಯಕ್ಷ ಗಾಣಕಲ್​ ನಟರಾಜ್​ ಮಾಹಿತಿ
  • ಜಿಲ್ಲಾಡಳಿತ ನಿಗದಿ ಮಾಡಿದ ಪರಿಹಾರ ದರಕ್ಕೆ ಒಪ್ಪಿಗೆ
  • ಕೌಶಲ ಕೇಂದ್ರ ಸ್ಥಾಪನೆಗೆ ಸಮ್ಮತಿ
ರಾಮನಗರ
ತಾಲೂಕಿನ ಬಿಡದಿ ಭೈರಮಂಗಲ ಮತ್ತು ಸುತ್ತ ಮುತ್ತ ನಿರ್ಮಾಣಗೊಳ್ಳಲಿರುವ ಗ್ರೇಟರ್​ ಬೆಂಗಳೂರು ಸಮಗ್ರ ಉಪನಗರ ಯೋಜನೆಗಾಗಿ ಸ್ವಾಧಿನಪಡಿಸಿಕೊಳ್ಳಲಿರುವ ಭೂಮಿಗೆ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ನಿಗದಿಪಡಿಸಿರುವ ಪರಿಹಾರ ದರಕ್ಕೆ ಒಪ್ಪಿಗೆ ಸೂಚಿಸಿರುವ ಗ್ರೇಟರ್​ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಡಿಎ)ವು ಯೋಜನೆಯ ಮಾಸ್ಟರ್​ ಪ್ಲ್ಯಾನ್​ ತಯಾರಿಸಲು ಅನುಮೋದನೆ ನೀಡಿದೆ.
ಬೆಂಗಳೂರಿನಲ್ಲಿರುವ ಬಿಎಂಆರ್​ಡಿಎ ಕಚೇರಿ ಸಂಕೀರ್ಣದಲ್ಲಿರುವ ಜಿಬಿಡಿಎ ಸಭಾಂಗಣದಲ್ಲಿ ಜಿಬಿಡಿಎ ಅಧ್ಯಕ್ಷ ಜಿ.ಎನ್​. ನಟರಾಜ್​ ಗಾಣಕಲ್​ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ 8ನೇ ಸಾಮಾನ್ಯ ಸಭೆಯು, ಪರಿಹಾರ ದರಕ್ಕೆ ಸಮ್ಮತಿ ಸೂಚಿಸುವ ಜತೆಗೆ ಅದಕ್ಕೆ ಅನುಮೋದನೆ ಕೋರಿ ಸರ್ಕಾರಕ್ಕೆ ವರದಿ ಸಲ್ಲಿಸಲು ರ್ನಿಣಯ ಕೈಗೊಂಡಿತು.
ಸಭೆ ಉದ್ದೇಶಿಸಿ ಮಾತನಾಡಿದ ನಟರಾಜ್​, ಜಿಲ್ಲಾಧಿಕಾರಿ ಯಶವಂತ್​ ವಿ.ಗುರುಕರ್​ ನಿಗದಿಪಡಿಸಿರುವ ಪರಿಹಾರ ದರವನ್ನು ಭೂಮಾಲೀಕರಿಗೆ ಪಾವತಿಸಲು ಸರ್ಕಾರದ ಅನುಮೋದನೆ ಪಡೆಯಬೇಕಿದೆ. ಹಾಗಾಗಿ, ಎಲ್ಲರ ಸಮ್ಮತಿ ಮತ್ತು ಅಭಿಪ್ರಾಯ ಆಧರಿಸಿ ಸರ್ಕಾರಕ್ಕೆ ಕಳಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿದ್ದ ಯೋಜನಾ ಪ್ರದೇಶದ ಮಾಗಡಿ ಶಾಸಕ ಬಾಲಕೃಷ್ಣ, ಜಿಬಿಡಿಎ ನಿರ್ದೇಶಕ ಡಿ.ಕೆ. ಸುರೇಶ್​ ಸೇರಿದಂತೆ ಇತರ ನಿರ್ದೇಶಕರು ಪರಿಹಾರ ದರಕ್ಕೆ ಒಪ್ಪಿಗೆ ಸೂಚಿಸಿದರು. ಗರಿಷ್ಠ ಪರಿಹಾರ ನಿಗದಿಗೆ ಶ್ರಮಿಸಿರುವ ಜಿಲ್ಲಾಧಿಕಾರಿ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಸರ್ಕಾರದಿಂದ ತುರ್ತಾಗಿ ಅನುಮೋದನೆ ಪಡೆದು ಮುಂದಿನ ಜನವರಿ ತಿಂಗಳ ಅಂತ್ಯದೊಳಗೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಮಾಗಡಿ ಶಾಸಕ ಎಚ್​.ಸಿ. ಬಾಲಕೃಷ್ಣ, ಜಿಬಿಡಿಎ ನಿರ್ದೇಶಕರಾದ ಡಿ.ಕೆ.ಸುರೇಶ್​, ಎನ್​.ನರಸಿಂಹಯ್ಯ, ಸಿ.ಎಚ್​. ಪುಟ್ಟರಾಜು, ಕಲ್ಯಾಣಮ್ಮ, ಜಿಬಿಡಿಎ ಆಯುಕ್ತ ರಾಜೇಂದ್ರ ಚೋಳನ್​, ಜಿಲ್ಲಾಧಿಕಾರಿ ಯಶವಂತ್​ ವಿ. ಗುರುಕರ್​, ಜಿಬಿಡಿಎ ಹೆಚ್ಚುವರಿ ಆಯುಕ್ತ ಮಾರುತಿ ಪ್ರಸನ್ನ, ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಮಾಸ್ಟರ್​ ಪ್ಲ್ಯಾನ್​ಗೆ ಸಮ್ಮತಿ

ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿರುವ ಉಪನಗರ ಮತ್ತು ಎಐ ಸಿಟಿ ಯೋಜನೆಗೆ ಸಂಬಂಧಿಸಿದಂತೆ ಪ್ರಾಧಿಕಾರವು ಮಾಸ್ಟರ್​ಪ್ಲ್ಯಾನ್​ ತಯಾರಿಸಲು ಸಭೆಯು ಒಪ್ಪಿಗೆ ನೀಡಿತು. ಜಿಬಿಐಟಿ - ಎಐಸಿಟಿ ನಿರ್ಮಾಣಕ್ಕೆ ಮೂಲ ಯೋಜನೆ ಸಿದ್ಧಪಡಿಸಬೇಕಿದೆ. ಉದ್ಯಮ, ವಸತಿ, ವಾಣಿಜ್ಯ ಪ್ರದೇಶ, ರಸ್ತೆ, ಉದ್ಯಾನ ಸೇರಿದಂತೆ ಹೊಸ ನಗರದ ರೂಪುರೇಷೆ ನಿರ್ಮಾಣದ ಬಗ್ಗೆ ಪ್ರಾಧಿಕಾರ ಸಮಗ್ರ ಯೋಜನೆಯನ್ನು ಸಿದ್ಧಪಡಿಸಲಿದೆ ಎಂದು ನಟರಾಜ್​ ಸಭೆ ಗಮನಕ್ಕೆ ತಂದರು. ಅದಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿದರು.

ಕೌಶಲ ಕೇಂದ್ರ ನಿರ್ಮಾಣ

ಉಪನಗರ ಯೋಜನಾ ಪ್ರದೇಶದಲ್ಲಿ ನಿರುದ್ಯೋಗಿಗಳಿಗೆ ಹಾಗೂ ಯುವಜನರಿಗೆ ಸ್ವಯಂ ಉದ್ಯೋಗ ಸೇರಿ ವಿವಿಧ ಉದ್ಯೋಗಳಿಗೆ ಅನುಕೂಲವಾಗುವಂತೆ ಗ್ರೇಟರ್​ ಬೆಂಗಳೂರು ಇಂಟಿಗ್ರೇಟೆಡ್​ ಕೌಶಲ ಮತ್ತು ಉದ್ಯೋಗ ತರಬೇತಿ ಕೇಂದ್ರ ಸ್ಥಾಪಿಸಲು ಸಭೆಯಲ್ಲಿ ತಾತ್ವಿಕ ಅನುಮೋದನೆ ನೀಡಲಾಯಿತು. ತರಬೇತಿ ಕೇಂದ್ರದಲ್ಲಿ ಯೋಜನಾ ನಿರಾಶ್ರೀತರ ಕುಟುಂಬಗಳ ವಿದ್ಯಾವಂತ ಯುವಕ ಯುವತಿಯರಿಗೆ ಅವರ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ತರಬೇತಿ ನೀಡಿ, ಮುಂದೆ ಉಪನಗರದಲ್ಲಿ ಸ್ಥಾಪನೆಯಾಗಲಿರುವ ಉದ್ಯಮಗಳಲ್ಲಿ ಉದ್ಯೋಗ ನೀಡಲು ಈಗಿನಿಂದಲೇ ಅವರನ್ನು ಅಣಿಗೊಳಿಸಬೇಕು ಎಂದು ಸಭೆಯಲ್ಲಿ ತೀರ್ಮಾನವಾಯಿತು.
"

ಜಿಬಿಐಟಿ ಯೋಜನೆಗೆ ನಿಗದಿಪಡಿಸಿರುವ ಭೂ ಸ್ವಾಧಿನದ ಪರಿಹಾರ ದರವು ದೇಶದಲ್ಲೇ ಅತಿ ಹೆಚ್ಚಿನದ್ದು. ಅದಕ್ಕೆ ಪ್ರಾಧಿಕಾರದ ಸಾಮಾನ್ಯ ಸಭೆ ಒಪ್ಪಿಗೆ ಸೂಚಿಸಿ, ಸರ್ಕಾರದ ಅನುಮೋದನೆಗೆ ಕಳಿಸಲು ತೀರ್ಮಾನಿಸಲಾಗಿದೆ. ಅನುಮೋದನೆ ದೊರೆತ ನಂತರ ಜನವರಿ ತಿಂಗಳಾಂತ್ಯದಿಂದ ಪರಿಹಾರ ವಿತರಿಸಲಾಗುವುದು. ಈ ನಿಟ್ಟಿನಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಗಾಣಕಲ್​ ನಟರಾಜ್​, ಜಿಬಿಡಿಎ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net