ಭೂಮಿಕಾ ಸಾವಿನ ಸುತ್ತ ಹಲವು ಅನುಮಾನ!

* ಅಪಘಾತದಲ್ಲಿ ಮಗಳು ಮೃತಪಟ್ಟಿಲ್ಲ * ಸಮಗ್ರ ತನಿಖೆಗೆ ಪಾಲಕರ ಆಗ್ರಹ
Bhoomika
ಮೃತಪಟ್ಟಿರುವ ಭೂಮಿಕ
Published on: 

ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಎಕ್ಸ್​ಪ್ರೆಸ್​ ಹೈವೇ ಬಳಿ ಇತ್ತೀಚಿಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವತಿ ಭೂಮಿಕಾ (23) ಮೃತಪಟ್ಟಿದ್ದು, ಈ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ನಮ್ಮ ಮಗಳ ಸಾವು ಅಪಘಾತದಿಂದ ಮೃತಪಟ್ಟಿಲ್ಲ, ಇದರ ಹಿಂದೆ ಕೊಲೆಯ ಸಂಚು ಇರಬಹುದು ಎಂದು ಮೃತಳ ಪಾಲಕರು ಶಂಕೆ ವ್ಯಕ್ತಪಡಿಸಿ, ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

ಏನಿದು ಪ್ರಕರಣ?:

ಕಳೆದ ಅ.3ರಂದು ಬೆಂಗಳೂರಿನ ರಾಮೋಹಳ್ಳಿ ಮೂಲದ ಭೂಮಿಕಾ ಸ್ನೇಹಿತನೊಂದಿಗೆ ಚನ್ನಪಟ್ಟಣಕ್ಕೆ ಬಂದಿದ್ದ ವೇಳೆ ರಸ್ತೆ ದಾಟಲು ಮುಂದಾದಾಗ ಅಪಘಾತ ಸಂಭವಿಸಿತ್ತು ಎನ್ನಲಾಗಿದೆ. ಈ ಸಂಬಂಧ ಚನ್ನಪಟ್ಟಣ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ರಸ್ತೆ ಅಪಘಾತವೆಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಮಗಳ ಸಾವಿನ ಕುರಿತು ಹಲವು ಅನುಮಾನ ವ್ಯಕ್ತಪಡಿಸಿರುವ ಪಾಲಕರು, ಶುಕ್ರವಾರ ನಗರದ ಠಾಣೆಯ ಎದುರು ಭೂಮಿಕಾ ಫೋಟೋ ಹಿಡಿದು ಪ್ರತಿಭಟನೆ ನಡೆಸಿದರು. ಸಾವಿನ ಹಿಂದಿನ ಸತ್ಯವನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಗೆ ಕನ್ನಡಪರ ಹೋರಾಟಗಾರರು ಬೆಂಬಲ ವ್ಯಕ್ತಪಡಿಸಿದರು.

ಪಾಲಕರ ಅನುಮಾನ!:

ಚನ್ನಪಟ್ಟಣದ ಬೆಳಕೆರೆಯ ಕಿರಣ್​ ಎಂಬಾತನೊಂದಿಗೆ ಭೂಮಿಕಾಗೆ ಜಗಳವಾಗಿತ್ತು. ಅದರ ಬೆನ್ನಲ್ಲೆ ನಮ್ಮ ಮಗಳು ಮೃತಪಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ, ಘಟನಾ ಸ್ಥಳದ ಸಿಸಿ ಕ್ಯಾಮರಾ ಪರಿಶೀಲಿಸಿ, ಘಟನೆ ನಡೆದ ಸಂದರ್ಭದ ಸಂಪೂರ್ಣ ಚಿತ್ರಣವನ್ನು ಸಂಗ್ರಹಿಸಬೇಕು. ಅಪಘಾತದ ಸ್ವರೂಪ ಹಾಗೂ ಸಾವಿಗೆ ಕಾರಣವಾದ ನೈಜ ಸಂಗತಿಗಳನ್ನು ತನಿಖೆಯ ಮೂಲಕ ಬಹಿರಂಗಪಡಿಸಬೇಕೆಂಬುದು ಪಾಲಕರ ಒತ್ತಾಯ.

ಘಟನೆಯ ದಿನ ಭೂಮಿಕಾ ತಮ್ಮ ವಾಹನ ಚಾಲಕ ಸಾಗರ ಎಂಬಾತನೊಂದಿಗೆ ಕಾರಿನಲ್ಲಿ ಬಂದಿದ್ದಳು. ಆರಂಭದಲ್ಲಿ ಬೆಂಗಳೂರಿನ ಮತ್ತೊಂದು ಸ್ಥಳಕ್ಕೆ ತೆರಳುವ ಬಗ್ಗೆ ಮಾತನಾಡಿದ್ದ ಯುವತಿ, ಕುಂಬಳಗೂಡು ತಲುಪಿದ ಬಳಿಕ ಚನ್ನಪಟ್ಟಣಕ್ಕೆ ಹೋಗುವುದಾಗಿ ತಿಳಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ, ಅಂದು ರಾತ್ರಿ ಭೂಮಿಕಾ ಚನ್ನಪಟ್ಟಣಕ್ಕೆ ಬಂದಿದ್ದೇಕೆ? ಕಿರಣ್​ ಜತೆ ನಡೆದಿತ್ತು ಎನ್ನಲಾದ ಜಗಳಕ್ಕೂ ಯುವತಿಯ ಸಾವಿಗೂ ಏನಾದರೂ ಸಂಬಂಧವಿದೆಯೇ? ಘಟನೆ ನಡೆದ ಸಂದರ್ಭ ಮತ್ತು ಅದಕ್ಕೂ ಮುನ್ನ ನಡೆದ ಬೆಳವಣಿಗೆಗಳೇನು? ಎಂಬ ಪ್ರಶ್ನೆಗಳು ಇದೀಗ ಚರ್ಚೆಗೆ ಬಂದಿವೆ. ಈ ಎಲ್ಲ ಅಂಶಗಳಿಗೂ ತನಿಖೆಯಿಂದಲೇ ಸ್ಪಷ್ಟ ಉತ್ತರ ದೊರೆಯಬೇಕಿದೆ.

ಯುವತಿಯ ಸಾವಿನ ಹಿಂದೆ ಕೊಲೆಯ ಶಂಕೆಯಿದೆ ಎಂಬ ಪಾಲಕರ ಆರೋಪಕ್ಕೆ ಈವರೆಗೆ ಅಧಿಕೃತ ದೃಢೀಕರಣ ದೊರೆತಿಲ್ಲ. ಹೀಗಾಗಿ, ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಪೊಲೀಸರ ಮುಂದಿರುವ ಪ್ರಮುಖ ಹೊಣೆಗಾರಿಕೆಯಾಗಿದೆ. ಸಿಸಿ ಕ್ಯಾಮರಾ ದೃಶ್ಯಾವಳಿ, ಸಾಗರನ ಹೇಳಿಕೆ, ಲಭ್ಯವಿರುವ ಸಾಕ್ಷ್ಯಗಳನ್ನು ಪರಿಶೀಲಿಸಿ ನಿಷ್ಪಪಾತ ತನಿಖೆ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಒಟ್ಟಾರೆ, ಅಪಘಾತವೆಂದು ದಾಖಲಾಗಿರುವ ಭೂಮಿಕಾ ಸಾವಿನ ಪ್ರಕರಣ ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ರಸ್ತೆ ಅಪಘಾತವೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದು ಸಮಗ್ರ ಪೊಲೀಸ್​ ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net