ಸುಗಮ ಸಂಚಾರಕ್ಕೆ ಗುಂಡಿ ಗಂಡಾಂತರ

ರಸ್ತೆ ಗುಂಡಿಯಲ್ಲಿ ನೀರು ನಿಂತು ಕೆರೆಯಂತಾಗಿರುವುದು.
ರಸ್ತೆ ಗುಂಡಿಯಲ್ಲಿ ನೀರು ನಿಂತು ಕೆರೆಯಂತಾಗಿರುವುದು.
Published on

ಕೈಲಾಂಚ:

ಶಿವನಹಳ್ಳಿ ದೇವಸ್ಥಾನ ಚನ್ನಪಟ್ಟಣ ರಸ್ತೆ ವಡ್ಡರದೊಡ್ಡಿ ಬಳಿ ರಸ್ತೆ ಗುಂಡಿಮಯವಾಗಿದ್ದು, ನಿತ್ಯ ವಾಹನ ಸವಾರರು ಬಿದ್ದು ಏಳುತ್ತಿದ್ದು, ರಸ್ತೆ ಸರಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಚನ್ನಪಟ್ಟಣ&ರಾಮನಗರ&ರೇವಣಸಿದ್ದೇಶ್ವರ ಬೆಟ್ಟ, ಕನಕಪುರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಪ್ರತಿ ನಿಮಿಷವೂ ವಾಹನ ದಟ್ಟಣೆಯಿಂದ ರಸ್ತೆ ಕೂಡಿದೆ. ಇಂತಹ ಪ್ರಮುಖ ರಸ್ತೆಯಲ್ಲಿ ರಸ್ತೆ ಗುಂಡಿ ಬಿದ್ದು ಹಲವು ತಿಂಗಳುಗಳೇ ಕಳೆದಿವೆ. ರಸ್ತೆಯಲ್ಲಿ ಹಾಕಿರುವ ಡಾಂಬರೀಣ ಕಲ್ಲುಗಳು ಕಿತ್ತು ಬಂದು ಆಳವಾದ ಗುಂಡಿಗಳಾಗಿವೆ. ವಡ್ಡರದೊಡ್ಡಿ ಗ್ರಾಮದ ಬಳಿಯ ರಸ್ತೆ ಗುಂಡಿ ವಾಹನ ಸವಾರರಿಗೆ ಅಪಾಯ ತಂದೊಡ್ಡಿವೆ.
ಸಣ್ಣ ಮಳೆ ಬಿದ್ದರೂ ರಸ್ತೆ ನೀರು ಮಯವಾಗಿ ಕೆರೆಯಂತಾಗುತ್ತದೆ. ಆಳವಾದ ಗುಂಡಿ ರಸ್ತೆ ಮಧ್ಯೆ ಉಂಟಾಗಿರುವ ಕಾರಣ ರಸ್ತೆಯಲ್ಲಿನ ಗುಂಡಿಗೆ ನೀರು ತುಂಬಿರುವ ಕಾರಣ ವಾಹನ ಸವಾರರಿಗೆ ಗುಂಡಿ ಕಾಣದೆ ರಸ್ತೆ ಗುಂಡಿಯಲ್ಲಿ ಎದ್ದು ಬೀಳಬೇಕಿದೆ. ದ್ವಿಚಕ್ರ ವಾಹನ ಸವಾರರಂತೂ ಒಂದಲ್ಲ ಒಂದು ವಾಹನ ಸವಾರರು ಪ್ರತಿದಿನ ಬಿದ್ದು ಏಳುತ್ತಿದ್ದು ಹಿಡಿ ಶಾಪ ಜನರದ್ದಾಗಿದೆ. ಈಗಾಗಲೇ ಇಲ್ಲಿ ಅನೇಕರು ಗುಂಡಿಯಲ್ಲಿ ವಾಹನಗಳು ಬೀಳುವ ಕಾರಣ ನಿಯಂತ್ರಣತಪ್ಪಿ ಗಾಯಗೊಂಡ ನಿದರ್ಶನಗಳು ಇವೆ ಎನ್ನುತ್ತಾರೆ ಲಕ್ಕೋಜನಹಳ್ಳಿ ಸಂತೋಷ್​.

ಸಮಸ್ಯೆ

ಪ್ರತಿದಿನ ಲಕ್ಕೋಜನಹಳ್ಳಿ, ಬನ್ನಿಕುಪ್ಪೆ, ಅಂಕನಹಳ್ಳಿ, ಕವಣಾಪುರ ಕೈಲಾಂಚ ಭಾಗದ ಗ್ರಾಮಗಳ ಜನರು ಚನ್ನಪಟ್ಟಣ ಮದ್ದೂರು ಮಂಡ್ಯ ಮೈಸೂರು ಕಡೆ ಹೋಗಲು ಇದೇ ರಸ್ತೆಯನ್ನು ಪ್ರಮುಖವಾಗಿ ಬಳಸುತ್ತಾರೆ. ಜತೆಗೆ ಚನ್ನಪಟ್ಟಣ ಭಾಗದ ಕಾರ್ಖಾನೆಗಳಿಗೆ ಮಾರುಕಟ್ಟೆಗಳಿಗೆ ನೂರಾರು ಉದ್ಯೋಗಿಗಳು, ರೈತರು ದ್ವಿಚಕ್ರ ವಾಹನಗಳಲ್ಲೇ ಓಡಾಟ ನಡೆಸುತ್ತಾರೆ. ರಾತ್ರಿ ಪಾಳಿಯಲ್ಲೂ ಕೆಲಸ ನಿರ್ವಹಿಸಿ ಬರುವ ಕಾರಣ ರಸ್ತೆಯಲ್ಲಿ ಗುಂಡಿಗಳು ಕಾಣದೆ ಅನೇಕರು ಗುಂಡಿಗಳಲ್ಲಿ ಬಿದ್ದರುವ ಉದಾಹರಣೆಗಳಿವೆ.

ವಾಹನ ಸವಾರರಿಗೆ ಕಂಟಕ!

ಪ್ರಸಿದ್ದ ಪ್ರವಾಸಿ ತಾಣ ರೇವಣಸಿದ್ದೇಶ್ವರ ಬೆಟ್ಟಕ್ಕೆ ದ್ವಿಚಕ್ರ ವಾಹನದಲ್ಲಿ ಮಂಡ್ಯ, ಮದ್ದೂರು, ಚನ್ನಪಟ್ಟಣ ಭಾಗದ ಜನರು ದ್ವಿಚಕ್ರ ವಾಹನಗಳಲ್ಲೇ ಬಂದು ಹೋಗುತ್ತಾರೆ. ಅಲ್ಲದೆ, ಶಾಲಾ&ಕಾಲೇಜಿಗೆ ದ್ವಿಚಕ್ರ ವಾಹನಗಳಲ್ಲಿ ಹೋಗುವ ವಿದ್ಯಾರ್ಥಿಗಳಿಗೆ ಮಹಿಳೆಯರಿಗೆ ರಸ್ತೆ ಸಮಸ್ಯೆ ಉಂಟುಮಾಡುತ್ತಿದೆ. ರಸ್ತೆಯಲ್ಲಿ ಗುಂಡಿಗಳು ದರ್ಭಾರ್​ ನಡೆಸುತ್ತಿರುವ ಕಾರಣ ರಾತ್ರಿ ವೇಳೆ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ಗುಂಡಿ ಕಂಟಕವಾಗಿದೆ. ಸಂಬಂಧಪಟ್ಟ ಇಲಾಖೆ ಕೂಡಲೇ ಗುಂಡಿ ಸಮಸ್ಯೆ ಬಗೆಹರಿಸಬೇಕು ಎನ್ನುತ್ತಾರೆ ಬನ್ನಿಕುಪ್ಪೆ ಚಂದ್ರಗಿರಿ.
"

ಸಾವಿರಾರು ವಾಹನ ಸವಾರರು ಪ್ರತಿದಿನ ರಸ್ತೆಯಲ್ಲಿ ಸಂಚರಿಸುತ್ತಾರೆ. ವಡ್ಡರದೊಡ್ಡಿ ಬಳಿ ರಸ್ತೆಯಲ್ಲಿ ಆಳವಾದ ಗುಂಡಿ ನಿರ್ಮಾಣವಾಗಿದೆ. ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ ಈಗಾಗಲೇ ಗುಂಡಿಯಲ್ಲಿ ಬಿದ್ದು ಗಾಯಮಾಡಿಕೊಂಡಿದ್ದಾರೆ. ರಸ್ತೆ ಪಕ್ಕದಲ್ಲಿ ಕಾಲುವೆ ಮುಚ್ಚಿರುವ ಕಾರಣ ಕಾಲುವೆ ನೀರು ರಸ್ತೆಗೆ ಬಂದು ನಿಂತು ರಸ್ತೆ ಗುಂಡಿಯಾಗಿ ಕೆರೆಯಾಗಿದೆ. ಕೂಡಲೇ ಸ್ಥಳಿಯ ಗ್ರಾಪಂ ಇಲ್ಲವೇ ಲೋಕೋಪಯೋಗಿ ಇಲಾಖೆ ಅಗತ್ಯ ಕ್ರಮ ಕೈಗೊಂಡು ರಸ್ತೆ ಸಮಸ್ಯೆ ಸರಿಪಡಿಸಬೇಕು.

— > ಬಿ.ಜಿ. ಶ್ರೀನಿವಾಸಮೂರ್ತಿ, ಬನ್ನಿಕುಪ್ಪೆ.

"

ರೇವಣಸಿದ್ದೇಶ್ವರಬೆಟ್ಟ & ಶಿವನಹಳ್ಳಿ ದೇವಸ್ಥಾನ ಚನ್ನಪಟ್ಟಣ ರಸ್ತೆ ನಿರ್ವಹಣೆ ಮತ್ತು ಗಿಡಗಂಡಿ ತೆಗೆಯಲು ಲೋಕೋಪಯೋಗಿ ಇಲಾಖೆ ಟೆಂಡರ್​ ಕರೆದಿದೆ. ಇಲಾಖೆ ನಿಯಮಾನುಸಾರ ಟೆಂಡರ್​ ಮುಗಿದ ನಂತರ ಹದಗೆಟ್ಟಿರುವ ರಸ್ತೆ ಗುಂಡಿ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿ ಸಮಸ್ಯೆ ಸರಿಪಡಿಸಲಾಗುತ್ತದೆ.

— > ಪಳನಿಸ್ವಾಮಿ, ಎಇ, ಪಿಡಬ್ಲೂ$್ಯಡಿ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net