

ಮಾಗಡಿ:ಕಳೆದ ಏಳೆಂಟು ವರ್ಷಗಳಿಂದ ಆಮೆ ಗತಿಯಲ್ಲಿ ಸಾಗುತ್ತಿರುವ ಬೆಂಗಳೂರು- ಮಾಗಡಿ ಮೂಲಕ ಸೋಮವಾರ ಪೇಟೆಯ ಕೆಶಿಪ್ ರಸ್ತೆ ಕಾಮಗಾರಿ ವಿಳಂಬದಿಂದ ಪ್ರತಿದಿನ ಸಾರ್ವಜನಿಕರು ಬಲಿಯಾಗುತ್ತಿದ್ದರೂ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಖಂಡಿಸಿ ರಾಜ್ಯ ಕೆಂಪೇಗೌಡ ರೈತ ಸಂಘ ಹಾಗೂ ಕಾರ್ಮಿಕ ಮತ್ತು ಅನ್ನದಾತರ ಸಂರಕ್ಷಣಾ ವೇದಿಕೆ ವತಿಯಿಂದ ಮಾಗಡಿ ಪಟ್ಟಣದ ನಾರಸಿಂಹ ಸರ್ಕಲ್‌ನಲ್ಲಿ ಮಾಗಡಿ-ಕುಣಿಗಲ್ ರಸ್ತೆ ತಡೆದು ಬೃಹತ್ ರಸ್ತೆ ತಡೆನಡೆಸಿದರು.
ಪ್ರತಿಭಟನೆಯಿಂದಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಸಂಚಾರ ಸಿಕ್ಕು ಉಂಟಾಗಿ ಸಾಲು ಸಾಲು ವಾಹನಗಳು ಸಾಲಾಗಿ ನಿಂತವು. ಸ್ಥಳಕ್ಕೆ ಉಪ ತಹಸೀಲ್ದಾರ್ ಪ್ರಭಾಕರ್ ಹಾಗೂ ಕೆ-ಶಿಪ್‌ಅಧಿಕಾರಿಗಳನ್ನು ಸಾರ್ವಜನಿಕರು ತೀವ್ರ ತರಾಟೆಗೆ ತೆಗೆದುಕೊಂಡರು.
ಕೇವಲ ಮನವಿ ಸ್ವೀಕರಿಸಲು ಬರುವ ಆಡಳಿತಕ್ಕೆ ರಸ್ತೆಯಲ್ಲಿ ಉರುಳುತ್ತಿರುವ ಹೆಣಗಳು ಕಾಣಿಸುತ್ತಿಲ್ಲವೇ?’ ಎಂದು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು, ಕೆಶಿಪ್ ಉನ್ನತಾಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಅಂತಿಮವಾಗಿ ಕೆಶಿಪ್ ಎಇಇ ನಾಗರಾಜು ಸ್ಥಳಕ್ಕೆ ಭೇಟಿ ನೀಡಿ ವಾರದಲ್ಲಿ ಅಂತಿಮ ತೀರ್ಮಾನ ಕೈಗೊಂಡು ಕಾಮಗಾರಿ ಆರಂಭಿಸುತ್ತೇವೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ವಾಹನಗಳನ್ನು ತಡೆದು ಪ್ರತಿಭಟಿಸುವ ವೇಳೆ ಕೆಲವರು ವಾಹನಗಳನ್ನು ನಿಲ್ಲಿಸದೆ ಚಲಾಯಿಸುವ ವೇಳೆ ವಾಹನ ಸವಾರರು ಹಾಗೂ ಪ್ರತಿಭಟನಾ ಮಧ್ಯೆ ಮಾತಿನ ಚಕಮುಖಿ ನಡೆದು ಹಲ್ಲೆಗೆ ಮುಂದಾದ ಘಟನೆ ನಡೆಯಿತು.
ಕಾರ್ಮಿಕರ ಮತ್ತು ಅನ್ನದಾತರ ಸಂರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜು ಮಾತನಾಡಿ, ಬೆಂಗಳೂರು-ಮಾಗಡಿ ರಸ್ತೆಯಲ್ಲಿ ಸಂಚರಿಸಿದರೆ ಬಸ್, ಕಾರುಗಳ ಧೂಳಿನಿಂದ ದ್ವಿಚಕ್ರ ವಾಹನ ಸವಾರರು ಉಸಿರುಗಟ್ಟಿ ಸಾಯುವಂತಾಗಿದೆ. ಧೂಳು ಮತ್ತು ಗುಂಡಿಗಳಿಂದ ಸಂಭವಿಸಿದ ಸಾವಿಗೆ ಕೆಶಿಫ್ ಇಲಾಖೆಯೇ ನೇರ ಹೊಣೆ. ಮೃತರ ಕುಟುಂಬಕ್ಕೆ ತಕ್ಷಣ ಪರಿಹಾರ ಹಾಗೂ ಕಚೇರಿಯಲ್ಲಿ ಕೆಲಸ ನೀಡಬೇಕು ಎಂದರು.
ಕೆಂಪೇಗೌಡ ರೈತಸಂಘದ ಗೌರವಾಧ್ಯಕ್ಷ ತಮ್ಮಣ್ಣಗೌಡ ಮಾತನಾಡಿ, ಮುಂದಿನ ದಿನಗಳಲ್ಲಿ ತಾಲೂಕಾದ್ಯಂತ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ರಾಜ್ಯ ರೈತ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಯೋಗೇಶ್ ಮಾತನಾಡಿ, ರಸ್ತೆ ಕಾಮಗಾರಿ ವೇಳೆ ರೈತ ಜಮೀನು ಕೊಡದಿದ್ರೆ ಎಫ್‌ಐಆರ್ ಹಾಕಿಸುತ್ತೀರಾ ಆದರೆ ಗುತ್ತಿಗೆದಾರ ಕಾಮಗಾರಿ ವಿಳಂಬ ಮಾಡಿದ್ರೆ ಏಕೆ ಕ್ರಮಕೈಗೊಂಡಿಲ್ಲ, ನಿಮ್ಮ ತಪ್ಪಿನಿಂದ ಸಾರ್ವಜನಿಕರ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಾಮಗಾರಿಗೆ ಮಂಜುರಾದ ಹಣ ಎಲ್ಲಿ ಹೋಯಿತು ಎಂದು ಕೆಶಿಫ್ ಎಇಇ ನಾಗರಾಜು ವಿರುದ್ದ ಕಿಡಿಕಾರಿದರು.
ಸಚಿವರು ಮಧ್ಯಪ್ರವೇಶಿಸಲಿ: ಮಾಗಡಿಯಿಂದ ಸೋಮವಾರಪೇಟೆ ವರೆಗಿನ ಕೆಶಿಫ್ ರಸ್ತೆ ಕಾಮಗಾರಿ ಕಳಪೆ ಮತ್ತು ಅವೈಜ್ಞಾನಿಕತೆಯಿಂದ ಕೂಡಿದೆ. ಪಟ್ಟಣದಲ್ಲಿ ರಸ್ತೆ ಅಗೆದು ತಿಂಗಳುಗಳೇ ಕಳೆದರೂ ಪೂರ್ಣಗೊಳಿಸಿಲ್ಲ. ರಸ್ತೆ ಗುಂಡಿಗಳಿಂದಾಗಿ ಬಿದ್ದು ಈಗಾಗಲೇ 4 ಮಂದಿ ಜೀವ ಕಳೆದುಕೊಂಡಿದ್ದಾರೆ. ಸಚಿವ ಎಚ್.ಸಿ.ಬಾಲಕೃಷ್ಣ ತಕ್ಷಣ ಮಧ್ಯಪ್ರವೇಶಿಸಬೇಕು. ಶೀಘ್ರ ಕಾಮಗಾರಿ ಮುಗಿಸದಿದ್ದರೆ ತಾಲೂಕು ಕಚೇರಿ, ಕೆಶಿಪ್ ಕಚೇರಿಗೆ ಬೀಗ ಜಡಿದು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ರಾಜ್ಯ ಕೆಂಪೇಗೌಡ ರೈತ ಸಂಘದ ಅಧ್ಯಕ್ಷ ಶಿವಕುಮಾರ್ ಎಚ್ಚರಿಸಿದರು.