ಟೋಲ್ ನಲ್ಲಿ ಮಲ್ಟಿ ಲೇನ್ ಫ್ರೀ ಫ್ಲೋ ವ್ಯವಸ್ಥೆ

ಟೋಲ್ ಸಂಗ್ರಹ ಚಿತ್ರ
ಟೋಲ್ ಸಂಗ್ರಹ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಟೋಲ್ ಪ್ಲಾಜಾದಲ್ಲಿ ಗಂಟೆಗಟ್ಟೆಲೆ ಕಾಯುವಿಕೆಗೆ ಮುಕ್ತಿ
  • ಮಲ್ಟಿ ಲೇನ್ ಫ್ರೀ ಫ್ಲೋ (MLFF) ವ್ಯವಸ್ಥೆ ಜಾರಿ
  • ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕ್ರಮ
  • ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಶೀಘ್ರವೇ ಜಾರಿ


ರಾಮನಗರ: ಟೋಲ್ ಪ್ಲಾಜಾದಲ್ಲಿ ಗಂಟೆಗಟ್ಟೆಲೆ ಕಾಯುವಿಕೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚಿಂತಿಸಿದ್ದು ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಮಲ್ಟಿ ಲೇನ್ ಫ್ರೀ ಫ್ಲೋ (MLFF)..ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ.

ರಾಷ್ಟ್ಟೀಯ ಹೆದ್ದಾರಿಗಳ ಟೋಲ್ ಗಳಲ್ಲಿ ಮೊದಲು ಮಾನವಾಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಯಲ್ಲಿತ್ತು. ಇದಾದ ನಂತರ ಫಾಸ್ ಟ್ಯಾಗ್ ವ್ಯವಸ್ಥೆ ಜಾರಿಗೆ ಬಂದರೂ ಟೋಲ್ ಗಳಲ್ಲಿ ಕಾಯುವಿಕೆ ನಿಂತಿಲ್ಲ. ಈ ಹಿನ್ನೆಲೆಯಲ್ಲಿ ಎಂಎಲ್ ಎಫ್ಎಫ್ ಪದ್ದತಿ ಅಳವಡಿಸಿಕೊಳ್ಳುವ ಮೂಲಕ ಟೋಲ್ ಗಳಲ್ಲಿ ಕಾಯುವಿಕೆಯನ್ನು ತಪ್ಪಿಸುವ ಯತ್ನ ನಡೆದಿದೆ.

ಗುಜರಾತ್ ನಲ್ಲೂ ಜಾರಿ

ಮಲ್ಟಿ ಲೇನ್ ಫ್ರೀ ಫ್ಲೋ ಸಿಸ್ಟಂ ಅನ್ನು ಈಗಾಗಲೇ ಗುಜರಾತ್ ನ ರಾಷ್ಟ್ರೀಯ ಹೆದ್ದಾರಿ ೪೮ರಲ್ಲಿ ೨೦೨೫ರ ಆಗಸ್ಟ್ ನಲ್ಲಿಯೇ ಜಾರಿಗೆ ತರಲಾಗಿದ್ದು , ಉತ್ತಮ ಪ್ರತಿಕ್ರಿಯೆಯೂ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಎನ್ ಎಚ್ ಎ ಐ ಮಾಹಿತಿ ಪ್ರಕಾರ ಎಂಎಲ್ ಎಫ್ ಎಫ್ ಪದ್ದತಿಯ ಶೇ.೯೯ ರಷ್ಟು ಯಶಸ್ವಿಯೂ ಆಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು- ಮೈಸೂರು ಹೈವೆಯ ೧೧೮ ಕಿಲೋ ಮೀಟರ್‌ನಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆಗೆ ಸಿದ್ದತೆ ನಡೆದಿದೆ.

ಪ್ರಾಯೋಗಿಕ ಜಾರಿ

ಗುಜರಾತ್ ನಲ್ಲಿ ಯಶಸ್ಚಿಯಾಗಿರುವ ಎಂಎಲ್ ಎಫ್ ಎಫ್ ಪದ್ದತಿಯನ್ನು ರಾಜ್ಯದ ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿಯೂ ಜಾರಿಗೆ ತರಲು ಕ್ರಮವಹಿಸಲಾಗಿದೆ. ಈಗಾಗಲೇ ಈ ಸಂಬಂಧ ಎನ್ ಎಚ್ ಎಐ ಟೆಂಡರ್ ಆಹ್ವಾನಿಸಿದೆ. ಈ ಪ್ರಕ್ರಿಯೆ ಮುಗಿಯುತ್ತದ್ದಂತೆ ಅಗತ್ಯ ಉಪಕರಣಗಳು ಮತ್ತು ಉನ್ನತ ಮಟ್ಟದ ಕ್ಯಾಮೆರಾ ಅಳವಡಿಕೆ ಕಾರ್ಯವೂ ನಡೆದು ಟೋಲ್ ನಲ್ಲಿ ಕಾಯುವಿಕೆ ಇಲ್ಲದೆ ಬಳಸಿದ ಮಾರ್ಗಕ್ಕೆ ಮಾತ್ರ ಟೋಲ್ ಸ್ವಯಂ ಕಡಿತಗೊಳ್ಳಲಿದೆ. ಈ ಯೋಜನೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಯಶಸ್ವಿಯಾದರೆ, ರಾಜ್ಯದ ವಿವಿಧ ಟೋಲ್ ಗಳಲ್ಲೂ ಈ ಪದ್ದತಿ ಜಾರಿಗೆ ಬರಲಿದೆ ಎಂದು ಎನ್ ಎಚ್ ಎಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕಾರ್ಯನಿರ್ವಹಣೆ ಹೇಗೆ?

ಎಎನ್ ಪಿಆರ್ ಕ್ಯಾಮೆರಾದ ಕೆಲಸ ಹೇಗೆ?

ವಾಹನ ಹೆದ್ದಾರಿ ಪ್ರವೇಶ ಪಡೆಯುತ್ತಿದ್ದಂತೆ ಕ್ಯಾಮೆರಾ ನಂಬರ್ ಪ್ಲೇಟ್ ಅನ್ನು ಸ್ವಯಂ ಚಾಲಿತವಾಗಿ ಗುರ್ತಿಸಿ ಹೈ-ರೆಸಲ್ಯೂಶನ್ ಫೋಟೋ ತೆಗದುಕೊಳ್ಳುತ್ತದೆ. ನಂತರ ಎಂಎಲ್ ಎಫ್ ಸಾಫ್ಟ್‌ವೇರ್ ಬಳಸಿ ಅಂಕಿ ಮತ್ತು ಅಕ್ಷರಗಳನ್ನಿ ಡಿಜಿಟಲ್ ರೂಪಕ್ಕೆ ಪರಿವರ್ತಿಸಿ ವಾಹನ ನೋಂದಣಿ ಡೇಟಾಬೇಸ್ ಮತ್ತು ಫಾಸ್ಟ್ ಟ್ಯಾಗ್ ಮೂಲಕ ಹೋಲಿಕೆ ಮಾಡುತ್ತದೆ. ನಂತರ ಹೈವೆ ಬಳಸಿದ ಮಾರ್ಗದ ಆಧಾರದ ಮೇಲೆ ಟೋಲ್ ಸ್ವಯಂ ಕಡಿತವಾಗುತ್ತದೆ. ಇದಿಷ್ಟು ಮಾತ್ರವಲ್ಲದೆ ಕದ್ದ ವಾಹನಗಳು, ಸಂಚಾರ ನಿಯಮ ಉಲ್ಲಂಘನೆ ವಾಹನ ಪತ್ತೆಗೂ ಇದು ಸಹಕಾರಿಯಾಗಿರಲಿದೆ. ಟೋಲ್ ದಾಟಿದ ಸಮಯ, ದಿನಾಂಕದ ನಿಖರವಾಗಿ ದಾಖಲಿಸಿಕೊಳ್ಳುತ್ತದೆ.


ಪ್ರಯೋಜವೇನು?

* ಸಮಯ ಉಳಿತಾಯ
* ಟೋಲ್ ಗೇಟ್‌ಗಳಲ್ಲಿ ಕಾಯುವಂತಿಲ್ಲ
* ಪ್ರಯಾಣದ ಅವಧಿ ಕಡಿಮೆ
* ಇಂಧನ ಉಳಿತಾಯ
* ವಾಹನ ಪದೇ ಪದೆ ನಿಲ್ಲಿಸುವುದು ತಪ್ಪಲಿದೆ
* ಇಂಧನ ಉಳಿಯುತ್ತದೆ
* ಪರಿಸರ ಸ್ನೇಹಿ, ಇಂಗಾಲ ಹೊರ ಸೂಸುವಿಕೆ ಕಡಿಮೆ
* ಟೋಲ್ ನಲ್ಲಿ ವಾಹನಗಳ ದಟ್ಟಣೆ ಕಡಿಮೆ
* ಕಳವು ಮಾಡಿದ ವಾಹನಗಳ ಗುರ್ತಿಸುವಿಕೆ ಸಹ ಸಹಕಾರಿ

ಎಂಎಲ್ ಎಫ್ ಎಫ್ ಯೋಜನೆ ಟೋಲ್ ಪ್ಲಾಜಾದಲ್ಲಿ ವಾಹನಗಳ ಸಾಲುಗಳನ್ನು ಕಡಿತ ಮಾಡಲಿದೆ. ಬಳಸಿದ ಮಾರ್ಗಕ್ಕಷ್ಟೇ ಸ್ಚಯಂ ಚಾಲಿತವಾಗಿ ದರ ಕಡಿತವಾಗಲಿದೆ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಇದು ಪ್ರಾಯೋಗಿಕವಾಗಿ ಜಾರಿಗೆ ತರಲು ಕ್ರಮವಹಿಸಲಾಗಿದೆ.

ವಿಲಾಸ್ ಪಿ ಬ್ರಹ್ಮಾನ್ಕಕರ್, ಪ್ರಾದೇಶಿಕ ಅಧಿಕಾರಿ ಕರ್ನಾಟಕ ವಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net