ಸುದ್ದಿಗೋಷ್ಠಿಯಲ್ಲಿ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜು, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಇಟ್ಟಮಡು ಗೋಪಾಲ್, ಪುರಸಭೆ ಮಾಜಿ ಅಧ್ಯಕ್ಷ ಹರಿಪ್ರಸಾದ್, ಸದಸ್ಯರಾದ ರಾಕೇಶ್ ಕುಮಾರ್, ರಮೇಶ್, ಮುಖಂಡರಾದ ಖಲೀಲ್, ಪುಟ್ಟಪ್ಪ, ಧನಂಜಯ, ಸಂಪತ್ ಕುಮಾರ್, ತಮ್ಮಣ್ಣನದೊಡ್ಡಿ ಕುಮಾರ್ ಇತರರಿದ್ದರು.
ಬಿಡದಿ: ಸಚಿವ ಎಚ್.ಸಿ.ಬಾಲಕೃಷ್ಣ ಅವರು ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ಮಂಜುನಾಥ್ ವಿರುದ್ಧ ಟೀಕೆ, ಟಿಪ್ಪಣಿ ಮಾಡುತ್ತಾ ಕಾಲಹರಣ ಮಾಡುವುದನ್ನು ಬಿಟ್ಟು, ಅಭಿವೃದ್ಧಿಯತ್ತ ಗಮನ ಹರಿಸಲಿ ಎಂದು ಬಿಡದಿ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜು ಸಲಹೆ ನೀಡಿದರು.
ಮಾಜಿ ಶಾಸಕ ಎ.ಮಂಜುನಾಥ್ ಅವರ ಗೃಹ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ವಿಚಾರದಲ್ಲಿ ಟೀಕೆ ಮಾಡಿ. ಅದು ಬಿಟ್ಟು ವೈಯಕ್ತಿಕ ನಿಂದನೆ, ಹಿಳಿಯುವುದು ಸಚಿವರಿಗೆ ಶೋಭೆ ತರುವುದಿಲ್ಲ ಎಂದರು.
ಪುರಸಭೆಯ ನೂತನ ಕಟ್ಟಡ ನಿರ್ಮಾಣಕ್ಕೆ ಜಾಗ ಕೊಡಿಸುವುದು ಸೇರಿ ಪಟ್ಟಣ ವ್ಯಾಪ್ತಿಯಲ್ಲಿ ಯುಜಿಡಿ ಕಾಮಗಾರಿ, ಗ್ಯಾಸ್‌ಲೈನ್, ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಆದರೆ, ನೀವು ಅಧಿಕಾರಕ್ಕೆ ಬಂದು ಮೂರುವರೆ ವರ್ಷ ಕಳೆದರೂ ಅಭಿವೃದ್ಧಿ ಮುಗಿಯಲೇ ಇಲ್ಲ. ಅಭಿವೃದ್ಧಿ ಬಗ್ಗೆ ಇಚ್ಛಾಶಕ್ತಿ ತೋರಿಸಿ ಎಂದರು.
ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಇಟ್ಟಮಡು ಗೋಪಾಲ್ ಮಾತನಾಡಿ, ಹೋಬಳಿಯ ಹಲವು ಗ್ರಾಮಗಳಲ್ಲಿನ ರಸ್ತೆಗಳು ಮಂಡಿ ಉದ್ದ ಗುಂಡಿ ಬಿದ್ದಿವೆ. ಇದನ್ನು ಸರಿಪಡಿಸುವ ಕೆಲಸ ಮಾಡಬೇಕಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಹರಿಪ್ರಸಾದ್ ಮಾತನಾಡಿ, ಪುರಸಭೆ ಜೆಡಿಎಸ್ ವಶದಲ್ಲಿದ್ದರೂ ನಾವು ಅಭಿವೃದ್ಧಿಗೆ ಅಡ್ಡಿಪಡಿಸಿಲ್ಲ. ಇದೀಗ ನೀವೆ ಪೌರಾಡಳಿತ ಸಚಿವರಾಗಿದ್ದೀರಿ. ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ತಂದು ಮಾದರಿ ಪುರಸಭೆ ಮಾಡಿ ಎಂದು ಆಗ್ರಹಿಸಿದರು.