ಭೂಮಿಕಾ ಸಾವಿನ ತನಿಖೆ ಚುರುಕು

ಕಾರಿನಲ್ಲಿ ಚನ್ನಪಟ್ಟಣಕ್ಕೆ ಬಂದಿದ್ದರೂ, ಎಕ್ಸ್‌ಪ್ರೆಸ್‌ವೇ ಸಮೀಪ ಬೈಕ್‌ನಲ್ಲಿ ತೆರಳಿದ್ದು ಏಕೆ ?
ಭೂಮಿಕಾ
ಭೂಮಿಕಾ
Published on: 

ಚನ್ನಪಟ್ಟಣ: ಎಕ್ಸ್‌ಪ್ರೆಸ್‌ವೇನಲ್ಲಿ ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ಭೂಮಿಕಾ(23) ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಬೆಂಗಳೂರಿನ ರಾಮೋಹಳ್ಳಿ ನಿವಾಸಿ ಭೂಮಿಕಾ ಅ.3ರಂದು ಚನ್ನಪಟ್ಟಣಕ್ಕೆ ಬಂದಿದ್ದ ವೇಳೆ ಸಂಕಲಗೆರೆ ಸಮೀಪ ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದರು. ಆರಂಭದಲ್ಲಿ ಸಂಚಾರಿ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿತ್ತು. ಆದರೆ, ಮಗಳ ಸಾವಿನ ಸುತ್ತ ಹಲವು ಅನುಮಾನಗಳಿವೆ ಎಂದು ಆರೋಪಿಸಿದ ಆಕೆಯ ಪಾಲಕರು, ಇದು ಅಪಘಾತವಲ್ಲ, ಕೊಲೆ ಇರಬಹುದು ಎಂಬ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ಇಲಾಖೆ ವಿವಿಧ ಆಯಾಮಗಳ ತನಿಖೆ ಆರಂಭಿಸಿದೆ.

ಅ.3ರಂದು ಭೂಮಿಕಾ ಕಾರಿನಲ್ಲಿ ಚನ್ನಪಟ್ಟಣಕ್ಕೆ ಬಂದಿದ್ದರು. ಈ ವೇಳೆ ಆಕೆಯ ಸ್ನೇಹಿತ ಕಿರಣ್ ನಡುವೆ ಗಲಾಟೆ ನಡೆದಿತ್ತು ಎಂಬ ಆರೋಪವೂ ಕೇಳಿಬಂದಿದೆ. ಕಾರಿನ ಚಾಲಕ ಸಾಗರ್ ನೀಡಿರುವ ಹೇಳಿಕೆಯ ಪ್ರಕಾರ, ಕಿರಣ್ ಕಾರಿನ ಕೀ ಕಿತ್ತುಕೊಂಡು ಬೆದರಿಕೆ ಹಾಕಿದ್ದಲ್ಲದೆ, ತನ್ನ ಸಹೋದರನನ್ನು ಕರೆಸಿ ಭೂಮಿಕಾ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಈ ಆರೋಪಗಳ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ದೃಢಪಡಬೇಕಿದೆ.

ಭೂಮಿಕಾ ಕಾರಿನಲ್ಲಿ ಚನ್ನಪಟ್ಟಣಕ್ಕೆ ಬಂದಿದ್ದರೂ, ಬಳಿಕ ಎಕ್ಸ್‌ಪ್ರೆಸ್‌ವೇ ಸಮೀಪ ಬೈಕ್‌ನಲ್ಲಿ ತೆರಳಿದ್ದು ಏಕೆ ಎಂಬುದು ಪಾಲಕರ ಪ್ರಮುಖ ಪ್ರಶ್ನೆಯಾಗಿದೆ.

ಬೈಕ್‌ನಿಂದ ಇಳಿದು ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಭೂಮಿಕಾ ಮೃತಪಟ್ಟಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಅಪಘಾತದ ಬಳಿಕ ಆಕೆಯೊಂದಿಗೆ ಇದ್ದ ವ್ಯಕ್ತಿ ಸ್ಥಳದಿಂದ ತೆರಳಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಈ ಎಲ್ಲ ಅಂಶಗಳ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಬೇಕೆಂದು ಕುಟುಂಬ ಒತ್ತಾಯಿಸಿದೆ.

ಭೂಮಿಕಾ ಸಾವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಾರಿನಲ್ಲಿ ಬಂದಿದ್ದ ಯುವತಿ ಬೈಕ್‌ನಲ್ಲಿ ತೆರಳಿದ್ದೇಕೆ? ಅಪಘಾತಕ್ಕೂ ಮುನ್ನ ಗಲಾಟೆ ನಡೆದಿತ್ತೇ? ಹಲ್ಲೆ ನಡೆದಿರುವ ಆರೋಪಕ್ಕೆ ಸಾಕ್ಷ್ಯಗಳಿವೆಯೇ? ಅಪಘಾತದ ಬಳಿಕ ಸ್ಥಳದಲ್ಲಿದ್ದ ವ್ಯಕ್ತಿ ತೆರಳಿದ್ದೇಕೆ? ಇಂತಹ ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ಸಿಗಬೇಕಿದೆ. ಭೂಮಿಕಾಳ ಸಾವು ಅಪಘಾತವೇ ಅಥವಾ ಅದರ ಹಿಂದೆ ಬೇರೆ ಅಪರಾಧವಿದೆಯೇ ಎಂಬುದಕ್ಕೆ ತನಿಖೆಯೇ ಅಂತಿಮ ಉತ್ತರ ನೀಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net