ಸಿಎಸ್​ಆರ್​ ವ್ಯಾಪ್ತಿಗೆ ಸಹಕಾರ ಸಂಘ ಸೇರಿಸಿ

ನೂತನವಾಗಿ ಆಯ್ಕೆಯಾದ ಯರೇಹಳ್ಳಿ ಪ್ಯಾಕ್ಸ್ ನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಬಿಡಿಸಿಸಿ ಬ್ಯಾಂಕನ್ ನಿರ್ದೇಶಕ ಮಂಜು ಅಭಿನಂದಿಸಿದರು.
ನೂತನವಾಗಿ ಆಯ್ಕೆಯಾದ ಯರೇಹಳ್ಳಿ ಪ್ಯಾಕ್ಸ್ ನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಬಿಡಿಸಿಸಿ ಬ್ಯಾಂಕನ್ ನಿರ್ದೇಶಕ ಮಂಜು ಅಭಿನಂದಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಅಭಿವೃದ್ಧಿಗೆ ಸಹಕರಿಸುವಂತೆ ಬಿಡಿಸಿಸಿ ಬ್ಯಾಂಕ್​ನ ನಿರ್ದೇಶಕ ವೈ ಎಚ್​ ಮಂಜು ಒತ್ತಾಯ
  • ಕೇಂದ್ರದ ಮೇಳೆ ಒತ್ತಡ ತರಲು ಕ್ರಮ
ರಾಮನಗರ
ಖಾಸಗಿ ಕಂಪನಿಗಳು ಮತ್ತು ಕೈಗಾರಿಕೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್​ಆರ್​) ವ್ಯಾಪ್ತಿಗೆ ಗ್ರಾಮೀಣ ಭಾಗ ಕೃಷಿ ಪತ್ತಿನ ಸಹಕಾರ ಸಂಗಳನ್ನು ಸೇರ್ಪಡೆ ಮಾಡುವ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಬಿಡಿಸಿಸಿ ಬ್ಯಾಂಕ್​ನ ನಿರ್ದೇಶಕ ವೈ ಎಚ್​ ಮಂಜು ಆಗ್ರಹಿಸಿದರು.
ತಾಲೂಕಿನ ಯರೇಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಭಾಗದ ರೈತ ಸಮುದಾಯದ ಆರ್ಥಿಕ ನೆರವು ನೀಡುತ್ತಿರುವ ಪ್ಯಾಕ್ಸ್​ಗಳು ಕೆಲವು ಕಾರಣಗಳಿಂದ ಸ್ವಂತ ಕಟ್ಟಡ ಹೊಂದಲು ಸಾಧ್ಯವಾಗುತ್ತಿಲ್ಲ. ಸಿಎಸ್​ಆರ್​ ನಿಧಿಯನ್ನು ಇಂತಹ ಕಟ್ಟಡಗಳನ್ನು ಕಟ್ಟಿಕೊಳ್ಳಲು ಬಳಕೆ ಮಾಡುವ ಅವಕಾಶವನ್ನು ಮಾಡಿಕೊಟ್ಟರೆ, ಸ್ವಂತ ಕಟ್ಟಡ ಹೊಂದಲು ಸಾಧ್ಯವಾಗುತ್ತದೆ. ಇಲ್ಲವಾದರೆ ಸ್ಥಳಿಯ ಅನುದಾನದಲ್ಲಿ ಸ್ವಂತ ಕಟ್ಟಡ ಕಟ್ಟುವುದು ಕಷ್ಟದ ಕೆಲಸ. ಈ ಹಿನ್ನೆಲೆಯಲ್ಲಿ ಕೇಂದ್ರ ಕಾಪೋರ್ರೇಟ್​ ವ್ಯವಹಾರಗಳ ಸಚಿವರು, ಪ್ಯಾಕ್ಸ್​ಗಳನ್ನು ಸಿಎಸ್​ಆರ್​ ನಿಧಿ ಬಳಕೆ ವ್ಯಾಪ್ತಿಗೆ ಸೇರಿಸಬೇಕು ಎಂದರು.
ಇದಲ್ಲದೆ, ಈ ಮೊದಲು ಬಡ್ಡಿ ಸಬ್ಸಿಡಿ ರೂಪದಲ್ಲಿ ಸಾಲ ಸೌಲಭ್ಯ ಕೇಂದ್ರ ಸರ್ಕಾರದಿಂದ ದೊರೆಯುತಿತ್ತು. ಇದರಿಂದಾಗಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೆಸಿಸಿ ಬೆಳೆ ಸಾಲ ವಿತರಿಸಲಾಗುತ್ತಿತ್ತು. ಇತ್ತೀಚೆಗೆ ಕೇಂದ್ರ ಸಹಕಾರ ಸಚಿವ ಅಮಿತ್​ ಷಾ ಅವರು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದ್ದ ಸಾಲ ಸೌಲಭ್ಯವನ್ನು ಬಹುತೇಕ ನಿಲ್ಲಿಸಿದ್ದಾರೆ. ಇದರಿಂದಾಗಿ ರೈತರಿಗೆ ಭವಿಷ್ಯದಲ್ಲಿ ಕೆಸಿಸಿ ಬೆಳೆ ಸಾಲವನ್ನು ನೀಡುವುದು ಕಷ್ಟವಾಗುತ್ತದೆ.
ಸಂಕಷ್ಟದ ನಡುವೆಯೇ ಬಿಡಿಸಿಸಿ ಮೂಲಕ ಕಳೆದ ಸಾಲಿನಲ್ಲಿ ಕೆಸಿಸಿ ಬೆಳೆ ಸಾಲವನ್ನು ನೀಡಲಾಗಿದೆ. ಸಹಕಾರ ಕ್ಷೇತ್ರ, ಗ್ರಾಮೀಣ ಭಾಗದಲ್ಲಿ ರೈತರ ಸಂಕಷ್ಟದ ಸಮಯದಲ್ಲಿ ನೆರವಿಗೆ ಬರುವ ಶೂನ್ಯ ಬಡ್ಡಿದರ ಸಾಲ ಸೌಲಭ್ಯವನ್ನು ನೀಡಲು ಅನುಕೂಲವಾಗುವಂತೆ ಹಿಂದಿನ ರೀತಿಯಲ್ಲಿಯೇ ಕೇಂದ್ರದಿಂದ ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯ ತರುವ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಬೇಕಿದೆ. ಇದಕ್ಕಾಗಿ ಡಿಸಿಎಂ ಡಿ.ಕೆ.ಶಿವಕುಮಾರ್​, ಶಾಸಕರಾದ ಎಚ್​.ಸಿ.ಬಾಲಕೃಷ್ಣ, ಎಚ್​.ಎ.ಇಕ್ಬಾಲ್​ ಹುಸೇನ್​,ಯೋಗೇಶ್ವರ್​ಗೆ ಮನವಿ ಮಾಡಲಾಗುವುದು ಎಂದು ಮಂಜು ತಿಳಿಸಿದರು.

ಅವಿರೋಧ ಆಯ್ಕೆ

ಯರೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಂತೋಷ ಕುಮಾರ್​(ತೇಜು) ಹಾಗೂ ಉಪಾಧ್ಯಕ್ಷರಾಗಿ ಮಾಯಣ್ಣ ಅವಿರೋಧವಾಗಿ ಆಯ್ಕೆಯಾದರು. ಹಿಂದಿನ ಅಧ್ಯಕ್ಷರಾಗಿದ್ದ ನಾಗಣ್ಣ ಹಾಗೂ ಉಪಾಧ್ಯಕ್ಷರಾಗಿದ್ದ ಕವಿತಾ ಅವರುಗಳ ರಾಜೀನಾಮೆಯಿಂದ ತೆರವಾಗಿದ್ದ ಎರಡು ಸ್ಥಾನಗಳಿಗೆ ಸಂಘದ ಕಚೇರಿಯಲ್ಲಿ ಸೋಮವಾರ ಚುನಾವಣೆ ನಡೆಯಿತು. ಸಹಕಾರ ಇಲಾಖೆಯ ಅಧಿಕಾರಿ ಮಂಜುನಾಥ್​ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ನೂತನ ಅಧ್ಯಕ್ಷ, -ಉಪಾಧ್ಯಕ್ಷರನ್ನು ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ವೈ.ಎಚ್​.ಮಂಜು ಹಾಗೂ ನಿರ್ದೇಶಕರು ಮುಖಂಡರು ಸನ್ಮಾನಿಸಿದರು.
ನೂತನ ಅಧ್ಯಕ್ಷ ಸಂತೋಷ್​ ಕುಮಾರ್​ ಮಾತನಾಡಿ, ಸ್ಥಳಿಯ ಜನಪ್ರತಿನಿಧಿಗಳು ಮತ್ತು ಮುಖಂಡರ ಸಹಕಾರದೊಂದಿಗೆ ಸಂಘದ ಪ್ರಗತಿಗೆ ಶ್ರಮಿಸಲಾಗುವುದು. ಸಂಘದಿಂದ 9 ಕೋಟಿ ರೂ. ಕೆಸಿಸಿ ಬೆಳೆ ಸಾಲ ವಿತರಿಸಲಾಗಿದ್ದು, ರೈತರ ಸೇವೆಯೇ ನಮ್ಮ ಧ್ಯೇಯವಾಗಿದೆ. ಸಂಘವನ್ನು ಮತ್ತಷ್ಟು ಲಾಭದತ್ತ ಕೊಂಡೊಯ್ಯುವುದು ನಮ್ಮೆಲ್ಲರ ಉದ್ದೇಶ ಎಂದರು.
ಈ ವೇಳೆ ನಿರ್ದೇಶಕರಾದ ಯೋಗರಾಜ್​, ಜಯಪಾಲ್​, ಮಂಗಮ್ಮ, ಕವಿತಾ ಆನಂದ್​, ಕೃಷ್ಣಯ್ಯ, ಲೋಕೇಶ್​, ಬಿಳಿಯಪ್ಪ, ಪ್ರಶಾಂತ್​.ಕೆ, ರತ್ನಮ್ಮ, ಟಿಎಪಿಸಿಎಂಎಸ್​ ನಿರ್ದೇಶಕ ಮಹದೇವಯ್ಯ, ಯರೇಹಳ್ಳಿ ಪಿಎಸಿಎಂಎಸ್​ ಸಿಇಒ ದಿನೇಶ್​, ಮುಖಂಡರಾದ ರವಿ, ಕೃಷ್ಣ, ಹಾಪ್​ಕಾಮ್ಸ್​ ಪುಟ್ಟಸ್ವಾಮಿ, ಅಶೋಕ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net