ಕಲ್ಲಂಗಡಿ ತಿನ್ನಿ ದಾಹ ತಣಿಸಿಕೊಳ್ಳಿ

ಮಾಗಡಿಯಲ್ಲಿ ಕಲ್ಲಂಗಡಿ ಸವಿಯುತ್ತಿರುವ ಗ್ರಾಹಕರು
ಮಾಗಡಿಯಲ್ಲಿ ಕಲ್ಲಂಗಡಿ ಸವಿಯುತ್ತಿರುವ ಗ್ರಾಹಕರು
Published on

ಪ್ರಮುಖ ಮುಖ್ಯಾಂಶಗಳು

  • ರಸ್ತೆ ಬದಿ ರಾಶಿರಾಶಿ ಹಣ್ಣು, ಎಳನೀರು ವ್ಯಾಪಾರ ಬಲು ಜೋರು
  • ತಂಪುಪಾನೀಯಗಳ ಮೊರೆ ಹೋದ ಜನ
ಮಾಗಡಿ
ಬೇಸಿಗೆ ಶುರುವಾಗಿದ್ದು, ದಾಹ ತಣಿಸಲು ಎಲ್ಲೆಡೆ ಕಲ್ಲಂಗಡಿ, ಎಳನೀರು ವ್ಯಾಪಾರ ಜೋರಾಗಿದೆ. ತಾಲೂಕಿನಾದ್ಯಂತ ವ್ಯಾಪಾರಿಗಳು ರಸ್ತೆ, ಪ್ರಮುಖ ವೃತ್ತಗಳಲ್ಲಿ, ರಸ್ತೆ ಬದಿ, ಪಾದಚಾರಿ ಮಾರ್ಗದಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ಹಾಕಿ ಕಲ್ಲಂಗಡಿ, ಎಳನೀರು ಸೇರಿ ತಂಪುಪಾನೀಯ ಮಾರಾಟ ಮಾಡಲಾರಂಭಿಸಿದ್ದಾರೆ. ಜನ ಎಳನೀರು, ಕಲ್ಲಂಗಡಿ ಹಣ್ಣಿನ ಮೊರೆಹೋಗಿ ದೇಹ ತಂಪು ಮಾಡಿಕೊಳ್ಳುತ್ತಿದ್ದಾರೆ.
ಬಿಸಿಲಿನ ತಾಪಕ್ಕೆ ಎಷ್ಟೇ ನೀರು ಕುಡಿದರೂ ದಾಹ ನೀಗುವುದಿಲ್ಲ. ತಂಪು ಪಾನೀಯ ಸೇವಿಸಿದರೂ ಗಂಟಲು ಒಣಗುವುದು ಕಡಿಮೆಯಾಗಿಲ್ಲ, ಬಿಸಿಲಿನ ಬೇಗೆಯಿಂದ ಪಾರಾಗಲು ಜನ ತಂಪು ಪಾನೀಯದ ಜತೆಗೆ ಕಲ್ಲಂಗಡಿ ಹಣ್ಣು ಹಾಗೂ ಎಳನೀರಿನ ಮೊರೆ ಹೊಗುತ್ತಿದ್ದಾರೆ. ಪ್ರತಿ ಎಳನೀರು ಒಂದಕ್ಕೆ 50ರಿಂದ 60 ರೂಪಾಯಿಯಂತೆ ಮಾರಾಟವಾಗುತ್ತಿದೆ, ಆದರೆ ಕಡಿಮೆ ಬೆಲೆಗೆ ಸಿಗುತ್ತಿರುವ ಕಲ್ಲಂಗಡಿ ಹಣ್ಣು ಖರೀದಿಗೆ ಜನ ಮುಗಿಬೀಳುತ್ತಿದ್ದಾರೆ.
ಬೇಡಿಕೆಗೆ ತಕ್ಕಂತೆ ವ್ಯಾಪಾರಸ್ಥರು ಲೋಡ್‌ಗಟ್ಟಲೇ ಕಲ್ಲಂಗಡಿ ಶೇಖರಿಸಿ ಇಟ್ಟುಕೊಂಡಿದ್ದಾರೆ. ಪಟ್ಟಣದ ಎಲ್ಲ ಸರ್ಕಲ್‌ಗಳಲ್ಲಿ ಕಲ್ಲಂಗಡಿಗಳ ರಾಶಿ ತುಂಬಿರುವ ದೃಶ್ಯ ಕಂಡುಬರುತ್ತಿದೆ.

ಶೇ.90 ನೀರಿನಾಂಶ

ಕಲ್ಲಂಗಡಿ ಸೇವನೆಯಿಂದ ಸೌಂದರ್ಯಕ್ಕೂ ಸಹಕಾರಿ. ಜನತೆಗೆ ಕಲ್ಲಂಗಡಿಯಲ್ಲಿ ಶೇ.90 ನೀರಿನಾಂಶವಿದ್ದು, ರೋಗ ನಿರೋಧಕ ಶಕ್ತಿ ಹೊಂದಿದೆ. ಇದರ ಸೇವನೆಯಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಸ್ನಾಯುಗಳು ಬಲಗೊಳ್ಳುತ್ತವೆ. ಒತ್ತಡ, ಆತಂಕ ಕಡಿಮೆಯಾಗಲಿದೆ, ಕಿಡ್ನಿ ಕಲ್ಲನ್ನು ಕರಗಿಸುತ್ತದೆ. ವಿಟಮಿನ್ ಎ, ಸಿ, ಬೈಯೋಟಿನ್ ಎಂಬ ಪೋಷಕಾಂಶ ಹೆಚ್ಚಿರುತ್ತದೆ. ಅದರಲ್ಲೂ ಬೇಸಿಗೆಯ ವೇಳೆ ಸಂಭವಿಸುವ ಅನಾರೋಗ್ಯ ಸಮಸ್ಯೆಯಿಂದ ಮುಕ್ತರಾಗಲು ಕಲ್ಲಂಗಡಿ ಹಣ್ಣು ಸಹಾಯ ಮಾಡುತ್ತದೆ ಎನ್ನುತ್ತಾರೆ ತಜ್ಞರು.

ಭರ್ಜರಿ ವ್ಯಾಪಾರ

ಕಲ್ಲಂಗಡಿ ಸೇವನೆಯಿಂದ ದೇಹ ಆಂತರಿಕವಾಗಿ ಶುದ್ಧಿಯಾಗಿ ಸೋಂಕುಗಳು ಕಡಿಮೆಯಾಗುತ್ತವೆ. ಹಣ್ಣಿನಿಂದ ಅನೇಕ ಉಪಯೋಗವಿರುವುದರಿಂದ ಹೆಚ್ಚು ಮಂದಿ ಕಲ್ಲಂಗಡಿ ಖರೀದಿಗೆ ಮುಗಿಬೀಳುತ್ತಿದ್ದಾರೆ. ಕಳೆದ ವರ್ಷ ಪ್ರತಿ ಕೆಜಿಗೆ 20 ರೂಪಾಯಿ ಇದ್ದ ಕಲ್ಲಂಗಡಿ ಈ ಬಾರಿ 40 ರೂಪಾಯಿಗೆ ಮಾರಾಟವಾಗುತ್ತಿದೆ. ಸ್ಥಳೀಯ ಕಲ್ಲಂಗಡಿಗೆ ಅಷ್ಟು ಬೇಡಿಕೆ ಇಲ್ಲ, ಆದರೆ ನೆರೆ ರಾಜ್ಯಗಳ ಕಲ್ಲಂಗಡಿ ಹಣ್ಣಿನ ರುಚಿ ಹೆಚ್ಚಿರುವುದರಿಂದ ಗ್ರಾಹಕರು ಅದನ್ನೆ ಹೆಚ್ಚು ತಿನ್ನುತ್ತಿದ್ದಾರೆ. ಪರಿಣಾಮ ಬೇಡಿಕೆ ಹೆಚ್ಚಿದೆ. ಇದರಿಂದ ವ್ಯಾಪಾರವೂ ಭರ್ಜರಿಯಾಗಿದೆ ಎಂಬುದು ವ್ಯಾಪಾರಿಗಳ ಅನಿಸಿಕೆಯಾಗಿದೆ.

ಬಿಸಿಲು ಹೆಚ್ಚಾದಂತೆ ಕಲ್ಲಂಗಡಿ ಹಣ್ಣಿನ ವ್ಯಾಪಾರ ಜೋರಾಗಿದೆ, ಒಂದು ಪೀಸಿಗೆ 20 ರೂ. ಮಾರಾಟ ಮಾಡಲಾಗುತ್ತಿರುವುದರಿಂದ ಪ್ರತಿ ದಿನ 5 ಸಾವಿರ ರೂ.ವ್ಯಾಪಾರವಾಗುತ್ತಿದೆ. ಜನ ಹಣಕ್ಕಿಂತ ಹಣ್ಣಿನ ರುಚಿಗೆ ಹೆಚ್ಚಿನ ಗಮನ ಹರಿಸುತ್ತಾರೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಉತ್ತಮವಾದ ಹಣ್ಣುಗಳನ್ನು ತಂದು ಮಾರಾಟ ಮಾಡಲಾಗುತ್ತಿದೆ.
| ಗಿರೀಶ್
ಕಲ್ಲಂಗಡಿ, ವ್ಯಾಪಾರಿ ಮಾಗಡಿ

ತಂಪುಪಾನೀಯ, ಎಳನೀರು ಬೆಲೆ ಗಗನ ಕುಸುಮವಾಗಿರುವ ನಡುವೆ ಬಡವರಿಗೆ ಕಲ್ಲಂಗಡಿ ಕಡಿಮೆ ಬೆಲೆಗೆ ಕೈಗೆ ಸಿಗುತ್ತಿರುವುದರಿಂದ ಬೇಸಿಗೆಯಲ್ಲಿ ದಣಿವಾರಿಸಿಕೊಳ್ಳಲು ಅನುಕೂಲವಾಗಿದೆ. ಮಳೆ ಇಲ್ಲದೆ ಇದೇ ರೀತಿ ಮುಂದುವರಿದರೆ ಕಲ್ಲಂಗಡಿ ಹಣ್ಣು ಸಿಗದಂತಾಗುತ್ತದೆ.
| ಜಯಕುಮಾರು ಜೆ.ಕೆ.,
ಎಪಿಎಂಸಿ ಮಾಜಿ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net