ಮೈ ಮರೆಯದಿರಿ ಆನ್ ಲೈನ್ ವಂಚಕರು ಕಾಯುತ್ತಿದ್ದಾರೆ...

ಆನ್ ಲೈನ್ ವಂಚಕರ ಸಂಗ್ರಹ ಚಿತ್ರ
ಆನ್ ಲೈನ್ ವಂಚಕರ ಸಂಗ್ರಹ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಹೆಚ್ಚುತ್ತಿವೆ ಆನ್ ಲೈನ್ ವಂಚನೆ ಪ್ರಕರಣಗಳು
  • ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 555 ಪ್ರಕರಣಗಳು
  • ವಂಚನೆಯಲ್ಲಿ ವೇಗ ಪತ್ತೆಯಲ್ಲಿ ನಿಧಾನ
ರಾಮನಗರ: ದಿನದಿಂದ ದಿನಕ್ಕೆ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯ ಒಟ್ಟು 32. 28 ಕೋಟಿ ರೂ ಹಣ ಕತ್ತಲೆ ಖದೀಮರ ಪಾಲಾಗಿದ್ದು, ಪತ್ತೆ ಪ್ರಮಾಣ ಹೆಚ್ಚಳವಾಗದಿರುವುದು ಆತಂಕ ಸೃಷ್ಠಿಸಿದೆ.
ಬೆಳಗಾವಿಯ ಅಧಿವೇಶನದಲ್ಲಿ ರಾಜ್ಯ ಸರ್ಕಾರವ ನೀಡಿರುವ ಮಾಹಿತಿಯಂತೆ 2023, 2024 ಮತ್ತು 2025ರ ನವೆಂಬರ್ 15ವರೆಗೆ ಜಿಲ್ಲೆಯಲ್ಲಿ ಒಟ್ಟು 555 ಆನ್‌ಲೈನ್ ವಂಚನೆ ಪ್ರಕರಣ ದಾಖಲಾಗಿದ್ದು, ಇಷ್ಟೂ ಪ್ರಕರಣಗಳಲ್ಲಿ ದೂರುದಾರರು ಕಳೆದುಕೊಂಡು ಒಟ್ಟು ಮೊತ್ತ 322881911 ರೂ.ಗಳು.

ಭಿನ್ನ ವಿಭಿನ್ನ ಹಾದಿ

ಆನ್ ಲೈನ್ ವಂಚನೆ ಪೊಲೀಸರ ಉಪಕ್ರಮಗಳ ಹೊರತಾಗಿಯೂ ಭಿನ್ನ ವಿಭಿನ್ನ ಬದಲಾವಣೆಯೊಂದಿಗೆ ನಡೆಯುತ್ತಲೇ ಇದೆ.
ಎಲ್ಲೋ ಕುಳಿತು ಉದ್ಯೋಗ, ಸಾಲ ಕೊಡಿಸುವುದಾಗಿ, ಕಡಿಮೆ ಬೆಲೆಗೆ ದುಬಾರಿ ವಸ್ತುಗಳನ್ನು ಕೊಡುವುದಾಗಿ, ವರ್ಕ್ ಫ್ರಂ ಹೋಂ ಹೆಸರಿನಲ್ಲಿ, ಒಂದೇ ದಿನದಲ್ಲಿ ಲಕ್ಷಾಂತರ ರೂ.ಗಳನ್ನು ದೋಚುತ್ತಿದ್ದ ಖದೀಮರು, ನಂತರ ಆ್ಯಪ್‌ಗಳ ಮೂಲಕ ವಂಚನೆಗೆ ಮುಂದಾದರು. ವಾಟ್ಸ್ ಆಪ್ ಕರೆ ಮಾಡಿ, ನಂತರ ಅವರ ಫೋಟೋಗಳ್ನು ಎಡಿಟ್ ಮಾಡಿ ಬೆದರಿ ಹಣ ಕೀಳುವ ದಂದೆಗಳು ಆರಂಭಗೊAಡವು. ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಕೋಟಿಗಳನ್ನು ಬಾಚುವ ಕೆಲಸನ್ನು ಆನ್‌ಲೈನ್ ವಂಚಕರು ಮುಂದಾಗಿದ್ದಾರೆ ಅದೆಷ್ಟೋ ಅಮಾಯಕರು ಮಾನ ಹಾನಿಯನ್ನು ತಪ್ಪಿಸಿಕೊಳ್ಳುವ ಸಲುವಾಗಿ ತಮ್ಮದಲ್ಲದ ತಪ್ಪಿಗೆ ಹಣವನ್ನು ಕಳೆದುಕೊಂಡಿದ್ದಾರೆ.

ಯಾಮಾರಿದರೆ ಮುಗಿಯಿತು

ವಂಚಕರಿಗೆ ಅಮಾಯಕರೇ ಟಾರ್ಗೆಟ್. ಕೆಲವೊಮ್ಮೆ ಅರಿತವರೂ ಸಹ ಇವರು ಬೀಸುವ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ. ಸಹಕಾರ ಇಲಾಕೆಯಲ್ಲಿ ಉನ್ನತ ಹುದ್ದೆಯಲ್ಲಿದ್ದು ನಿವೃತ್ತಿ ಹೊಂದಿದ್ದ ಚನ್ನಪಟ್ಟಣ ತಾಲೂಕಿನ ವ್ಯಕ್ತಿಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಬೆದರಿಸಿ ಅವರಿಂದ ಒಂದು ಕೋಟಿ ರೂ.ಗೂ ಹೆಚ್ಚು ಹಣವನ್ನು ವಂಚಕರು ಲಪಟಾಯಿಸಿದ್ದರು. ಇವರಿಗೆ ಸೈಬರ್ ವಂಚನೆ ಬಗೆಗೆ ಅರಿವಿತ್ತಾದರೂ ಮಾನ ಹೋಗುವ ಭಯದಲ್ಲಿ ಹಣ ಕಳೆದುಕೊಂದಿದ್ದಾರೆ. ಆದರೆ ಈವರೆವಿಗೂ ಈ ಪ್ರಕರಣ ಇನ್ನು ಪತ್ತೆ ಆಗಲೇ ಇಲ್ಲ.

ಸಾಧನೆ ಕಳಪೆ - ಪತ್ತೆ ಕಷ್ಟ

ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ 555 ಆನ್‌ಲೈನ್ ವಂಚನೆ ಪ್ರಕರಣಗಳು ದಾಖಲಾಗಿವೆ. ಆದರೆ ಇವುಗಳಲ್ಲಿ ಪತ್ತೆಯಾದ ಪ್ರಕರಣಗಳ ಸಂಖ್ಯೆ ಮಾತ್ರ ಕೇವಲ 49. ಉಳಿದ ಪ್ರಕರಣಗಳು ಪತ್ತೆಯಾಗಿಲ್ಲ. ಜನತೆ ಕಳೆದುಕೊಂಡಿರುವುದು ಕೋಟಿ ಕೋಟಿ ರೂ. ಲೆಕ್ಕದಲ್ಲಾದರೆ, ಪೊಲೀಸ್ ಇಲಾಖೆ ಪತ್ತೆಮಾಡಿರುವ ಹಣ ಕೆಲವೇ ಲಕ್ಷ ರೂ.ಗಳಲ್ಲಿದೆ.
ಕತ್ತಲೆ ಕೋಣೆಯಲ್ಲಿಯೇ ಕುಳಿತು ಆಪರೇಟ್ ಮಾಡುವ ಈ ಆನ್ ಲೈನ್ ವಂಚಕರನ್ನು ಹಿಡಿಯುವುದು ಅಷ್ಟು ಸುಲಭವಲ್ಲ. ಯಾಕೆಂದರೆ ವಂಚಕರು ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಕುಳಿತು ವಂಚನೆ ನಡೆಸುತ್ತಿರುತ್ತಾರೆ. ಅಮಾಯಕರ ಸಿಮ್ ಹಾಗೂ ಐಪಿ ವಿಳಾಸ ಬಳಸಿಕೊಂಡು ಕೆಲಸ ಮಾಡುವುದರಿಂದ ಪೊಲೀಸರಿಗೂ ಇವರನ್ನು ಪತ್ತೆ ಹಚ್ಚುವುದು ಕಷ್ಟ. ಇನ್ನು ವಂಚನೆಗೊಳಗಾಗುವ ಜನರು ವಂಚನೆಗೊಳಗಾದ ಹಲು ದಿನಗಳ ಬಳಿಕ ಪೊಲೀಸ್ ಠಾಣೆಗೆ ಬಂದು ದೂರು ನೀಡುವುದರಿಂದಲೂ ವಂಚಕರು ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಂಡು ದೂರವೇ ಹೋಗಿ ಬಿಟ್ಟಿರುತ್ತಾರೆ.
ಇನ್ನು ಪ್ರತಿ ಜಿಲ್ಲೆಯಲ್ಲಿ ಸಿಇಎನ್ ಠಾಣೆಗಳನ್ನು ಸರ್ಕಾರ ತೆರೆದಿದೆಯಾದರೂ ಇವರಿಗೆ ಸೂಕ್ತ ತರಬೇತಿ ಮತ್ತು ಅಗತ್ಯ ಪರಿಕರಗಳನ್ನು ಪೂರೈಸುವಲ್ಲಿ ವಿಫಲವಾಗಿರುವ ಕಾರಣ ಪತ್ತೆಯೂ ಕಷ್ಟವಾಗಿದೆ. ಇನ್ನು ಸಿಇಎನ್ ಠಾಣೆಗಳಲ್ಲಿ ಇರುವ ಹೆಚ್ಚಿನ ಸಿಬ್ಬಂದಿ ಕಾನೂನು ಸುವ್ಯಸ್ಥೆ ವಿಭಾಗದಲ್ಲಿಯೇ ಹೆಚ್ಚು ಕೆಲಸ ಮಾಡುವ ಕಾರಣ, ಇವರಿಗೆ ಸೂಕ್ತ ತರಬೇತಿಯೂ ಇರುವುದಿಲ್ಲ. ಇದೂ ಸಹ ಆನ್‌ಲೈನ್ ವಂಚಕರಿಗೆ ವರದಾನವಾಗಿ ಪರಿಣಮಿಸಿದೆ.

ಎಚ್ಚರಗೊಳ್ಳಿ

ಜಿಲ್ಲೆ ಮಾತ್ರವಲ್ಲದೇ ರಾಜ್ಯದಲ್ಲಿ ನಡೆಯುತ್ತಿರುವ ಆನ್‌ಲೈನ್ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಬೇಕಾದರೆ ಜನ ಜಾಗೃತಿಗೊಳ್ಳಬೇಕಾಗಿರುವ ಜತೆಗೆ, ಪೊಲೀಸ್ ಮತ್ತು ಬ್ಯಾಂಕಿAಗ್ ಕ್ಷೇತ್ರವೂ ಹೊಸ ತಂತ್ರಜ್ಞಾನದೊAದಿಗೆ ಉನ್ನತೀಕರಣಗೊಳ್ಳಬೇಕಿದೆ. ಇಲ್ಲವಾದರೆ ವಂಚಕರು ಹೊಸ ವಿಧಾನಗಳ ಮೂಲಕ ಅಮಾಯಕರ ಹಣವನ್ನು ದೋಚುವ ಕೆಲಸ ಮಾಡುತ್ತಲೇ ಇರುತ್ತಾರೆ.
ಅಂಕಿ-ಅಂಶ
ಜಿಲ್ಲೆಯಲ್ಲಿ ಕಳೆದ 3 ವರ್ಷದಲ್ಲಿ ದಾಖಲಾದ ಆನ್ ಲೈನ್ ವಂಚನೆ ಪ್ರಕರಣ
ವರ್ಷ ಪ್ರಕರಣಗಳು ಪತ್ತೆ ವಂಚನೆಯಾದ ಹಣ
2023 151 18 6.06 ಕೋಟಿ
2024 212 18 15.27 ಕೋಟಿ
2025 192 13 10.94 ಕೋಟಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net