ರೈತರಿಗೆ ಬೆಳೆ ವಿಮೆ ರಕ್ಷಣೆ

ಬೆಳೆ ನಷ್ಟದ ಸಂಗ್ರಹ ಚಿತ್ರ
ಬೆಳೆ ನಷ್ಟದ ಸಂಗ್ರಹ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ನಷ್ಟದ ಪ್ರಮಾಣ ಕಡಿಮೆ ಮಾಡಲು ಸಹಕಾರಿ
  • ಇಲಾಖೆಗಳಿಂದ ಬೇಕಿದ ಮತ್ತಷ್ಟು ಪ್ರಚಾರ

ರಾಮನಗರ

ಜಿಲ್ಲೆಯಲ್ಲಿ ಬರ ಆವರಿಸಿದೆ, ಇತ್ತೀಚಿಗೆ ಅಲ್ಲಲ್ಲಿ ಮಳೆ ಆಗುತ್ತಿದ್ದರೂ ಕೃಷಿಗೆ ಪೂರಕವಾಗಿಲ್ಲ ಎನ್ನುವುದು ರೈತರು ಅಳಲು. ಇದರ ನಡುವೆ ಬೆಳೆ ವಿಮೆ ವ್ಯಾಪ್ತಿಗೆ ಹೆಚ್ಚಿನ ಪ್ರದೇಶ ಒಳಪಡಿಸುವ ನಿಟ್ಟಿನಲ್ಲಿ ಈಗ ಕಸರತ್ತು ಆರಂಭಗೊಂಡಿದೆ.

ಸದ್ಯಕ್ಕೆ ಜಿಲ್ಲೆಯಲ್ಲಿ ಕೃಷಿ ಬೆಳೆಗಳಿಗೆ ವಿಮೆ ಮಾಡಿಸುವ ಅವಧಿ ಆ.14ಕ್ಕೆ ಮುಕ್ತಾಯಗೊಳ್ಳಲಿದ್ದರೆ, ಮಾವು ಬೆಳೆಯನ್ನು ವಿಮೆಗೆ ಒಳಪಡಿಸಲು ಆ.30ವರೆಗೂ ಅವಕಾಶ ಇದೆ. ಇದರ ನಡುವೆ ಹೆಚ್ಚಿನ ಬೆಳೆ ಪ್ರದೇಶಗಳನ್ನು ವಿಮೆಗೆ ಒಳಪಡಿಸುವ ನಿಟ್ಟಿನಲ್ಲಿ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಖಾಡಕ್ಕೆ ಇಳಿದಿದ್ದು, ಪ್ರಚಾರ ಕಾರ್ಯವನ್ನು ಕೈಗೊಂಡಿವೆ.

ಉತ್ತಮ ಪ್ರಗತಿ:

ಜಿಲ್ಲೆಯಲ್ಲಿ ಜುಲೈನಲ್ಲಿ ಬಹುತೇಕ ಮಳೆ ಕೈಕೊಟ್ಟಿದ್ದು, ಶೇ.75 ಮಳೆ ಕೊರತೆ ಆಗಿದೆ. ಆದರೆ, ರೈತರು ಸರ್ಕಾರ ನಿಗದಿಪಡಿಸಿರುವ ಬೆಳೆಗಳನ್ನು ವಿಮೆ ವ್ಯಾಪ್ತಿಗೆ ಒಳಪಡಿಸಿದರೆ ರೈತರಿಗೆ ಆಗುವ ನಷ್ಟ ತಪ್ಪಲಿದೆ. ಅಲ್ಲದೆ, ವಿಮೆಗೆ ಒಳಪಟ್ಟ ಜಮೀನುಗಳಲ್ಲಿ ಮಳೆ ಕೊರತೆಯಿಂದಾಗಿ ಬಿತ್ತನೆ ಮಾಡದಿದ್ದರೂ ಶೇ.25 ವಿಮೆ ಮೊತ್ತ ಪಡೆಯುವ ಅವಕಾಶ ಇರುತ್ತದೆ. ಆದರೆ, ಈ ಬಾರಿ ಕೃಷಿ ಬೆಳೆಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ರೈತರು ಬೆಳೆ ವಿಮೆ ಪಡೆಯಲಿಲ್ಲವಾದರೂ, ವಿಮೆಗೆ ಒಳಪಟ್ಟ ಮಾವು ಪ್ರದೇಶದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಜಿಲ್ಲೆಯಲ್ಲಿ ಈವರೆಗೆ ಪಿಎಂಎï‌ಬಿವೈ ಯೋಜನೆಯಡಿ 12392 ಮಂದಿ ರೈತರು ಬೆಳೆ ವಿಮೆ ಮಾಡಿಸಿದ್ದರೆ, 10,300 ರೈತರು ಮಾವು ಬೆಳೆಗೆ ವಿಮೆ ಮಾಡಿಸಿದ್ದಾರೆ.

ಅವಧಿ ವಿಸ್ತರಿಸಲಿ:

ಪ್ರಸ್ತುತ ಪಿಎಂಎಫ್‌ಬಿವೈ ಯೋಜನೆಯಡಿ ಹವಾಮಾನ ಆಧಾರಿತ ವಿಮೆ ಮಾಡಿಸುವ ಅವಧಿ ಆ.14ಕ್ಕೆ ಕೊನೆಗೊಳ್ಳಲಿದೆ. ಪ್ರಚಾರದ ಕೊರತೆ ಹಾಗೂ ವಿಮೆ ಬಗ್ಗೆ ರೈತರಿಗೆ ಇರುವ ಗೊಂದಲಗಳನ್ನು ಪರಿಹಾರ ಮಾಡುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಸಾಕಷ್ಟು ರೈತರು ವಿಮೆ ಮಾಡಿಸಲು ಮುಂದೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಕೃಷಿ ಬೆಳೆಗಳಿಗೆ ವಿಮೆ ಮಾಡಿಸುವ ಅವಧಿಯನ್ನು ಮತ್ತಷ್ಟು ದಿನಗಳ ಕಾಲ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕಿದೆ. ಈ ವಿಷಯವನ್ನು ಮುಖ್ಯಮಂತ್ರಿ ಗಮನಕ್ಕೆ ತಂದು, ಅವಧಿ ವಿಸ್ತರಿಸುವ ಭರವಸೆಯನ್ನು ಸಚಿವ ಬಾಲಕೃಷ್ಣ ನೀಡಿದ್ದಾರಾದರೂ, ಇದು ಅಧಿಕೃತವಾಗಿ ಚಾಲ್ತಿಗೆ ಬರಬೇಕಿದೆ.

ರೈತರಿಗೆ ಅರಿವು ಮೂಡಿಸಲಿ:

ಪ್ರತಿವರ್ಷ ಬೆಳೆಗಳನ್ನು ವಿಮೆ ವ್ಯಾಪ್ತಿಗೆ ಒಳಪಡಿಸುವುದೇ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ಸವಾಲಿನ ಕೆಲಸ. ವಿಮೆಯ ಪ್ರೀಮಿಯಂ ಮೊತ್ತದಲ್ಲಿ ಶೇ.5 ಪಾಲನ್ನು ಮಾತ್ರ ರೈತರು ಪಾವತಿ ಮಾಡಬೇಕಿದೆಯಾದರೂ, ರೈತರು ಈ ನಿಟ್ಟಿನಲ್ಲಿ ಆಸಕ್ತಿ ತೋರುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ, ಇಲಾಖೆಗಳು ಮತ್ತು ವಿಮೆ ಟೆಂಡರ್ ಪಡೆದ ಕಂಪನಿಗಳು ರೈತರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹಿಂದೆ ಬಿದ್ದಿವೆ. ವಿಮೆ ಮಾಡಿಸುವುದರಿಂದ ಯಾರೆಲ್ಲ, ಏನೆಲ್ಲ ಲಾಭಗಳನ್ನು ಪಡೆದುಕೊಂಡಿದ್ದಾರೆ ಎನ್ನುವ ಬಗ್ಗೆ ತಿಳಿಸುವ ಪ್ರಯತ್ನವನ್ನು ಮಾಡುವಲ್ಲಿ ವಿÀಲವಾಗಿವೆ. ಆದರೆ, ಬರದ ಸನ್ನಿವೇಶದಲ್ಲಿ ವಿಮೆ ರೈತರಿಗೆ ಆಗುವ ನಷ್ಟದ ಪ್ರಮಾಣವನ್ನು ಕಡಿಮೆ ಮಾಡಲಿದ್ದು, ಈ ಬಗ್ಗೆ ಅರಿವು ಮೂಡಿಸುವ ಕೆಲಸ ಇನ್ನಾದರೂ ಆಗಲಿ.

ಅನುಕೂಲ ಪಡೆದಿದ್ದಾರೆ ರೈತರು:

ಜಿಲ್ಲೆಯಲ್ಲಿ ಸರ್ಕಾರ ಬರ ಅಥವಾ ಅತಿವೃಷ್ಟಿಯಂತಹ ಸಂದರ್ಭದಲ್ಲಿ ಪರಿಹಾರ ಘೋಷಣೆ ಮಾಡಿದ ಹೊರತಾಗಿಯೂ ವಿಮೆಗೆ ಒಳಪಟ್ಟ ಸಾಕಷ್ಟು ರೈತರು ವಿಮಾ ಪರಿಹಾರ ಮೊತ್ತವನ್ನು ಪಡೆದುಕೊಂಡು ನಷ್ಟದ ಪ್ರಮಾಣವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಅದರಲ್ಲೂ ಜಿಲ್ಲೆಯ ಮಾವು ಬೆಳೆಗಾರರು ಇದರ ಲಾಭವನ್ನು ಪಡೆದುಕೊಂಡಿರುವುದು ಅಂಕಿ-ಅAಶಗಳಿAದ ಕಂಡು ಬಂದಿದೆ. ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ ಮಾವು ಬೆಳೆಗಾರರು ಹವಾಮಾನ ವೈÀರೀತ್ಯದ ಕಾರಣದಿಂದ ನಷ್ಟ ಅನುಭವಿಸುತ್ತಲೇ ಇದ್ದಾರೆ. ಆದರೆ, ಯಾವ ರೈತರು ಮಾವು ಬೆಳೆ ವಿಮೆ ಹೊಂದಿದ್ದರೆ ಅಂತವರಿಗೆ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 71.81 ಕೋಟಿ ರೂ. ಪರಿಹಾರ ಪಡೆದುಕೊಂಡಿದ್ದು, 2025ನೇ ಸಾಲಿನ ವಿಮೆ ಇನ್ನೂ ಬರಬೇಕಿದೆ.

ಕೃಷಿ/ಮಾವು ಬೆಳೆಗೆ ವಿಮೆ ಒಳಪಟ್ಟ ಅಂಕಿ-ಅAಶ

ತಾಲೂಕು ಕೃಷಿ ಮಾವು
ಚನ್ನಪಟ್ಟಣ 507 2335
ಹಾರೋಹಳ್ಳಿ 603 79
ಕನಕಪುರ 3378 2161
ಮಾಗಡಿ 6594 1204
ರಾಮನಗರ 1310 4521
ಒಟ್ಟು 12392 10300
ಮಾವು ಬೆಳೆ ವಿಮೆ ಪರಿಹಾರ ಪಡೆದ ವಿವರ
ವರ್ಷ ವಿಮಾ ಸಂಖ್ಯೆ ಪರಿಹಾರ ಮೊತ್ತ (ಲಕ್ಷಗಳಲ್ಲಿ)
2020 672 377.36
2021 2828 765.76
2022 4560 984.16
2023 10895 2505.65
2024 9369 2547.90
ಒಟ್ಟು 28324 7180.85

ಬೆಳೆ ವಿಮೆ ರೈತರಿಗೆ ಆಗುವ ನಷ್ಟವನ್ನು ತಪ್ಪಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ರೈತರೂ ಬೆಳೆ ವಿಮೆ ಮಾಡಿಸುವಂತೆ ಪ್ರೇರೇಪಿಸಬೇಕು. ಈ ನಿಟ್ಟಿನಲ್ಲಿ ಪ್ರತಿ ವರ್ಷ ಪ್ರತಿ ರೈತರಿಗೆ ಪತ್ರ ಬರೆಯುವ ಮೂಲಕ ತಿಳಿವಳಿಕೆ ಮೂಡಿಸಬೇಕು.

| ಎಚ್.ಸಿ.ಬಾಲಕೃಷ್ಣ, ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net