ಜಿಲ್ಲೆಯಲ್ಲಿ ಸುಮಾರು 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಚನ್ನಪಟ್ಟಣ ತಾಲೂಕು ಒಂದರಲ್ಲಿಯೇ ಸುಮಾರು 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತದೆ. ಕಳೆದ ಹಲವಾರು ವರ್ಷಗಳಿಂದಲೂ ಬೆಂಕಿ ರೋಗ, ನುಸಿ ಪೀಡೆಯಂತಹ ರೋಗಗಳನ್ನು ರೈತರು ಎದುರಿಸಿದ್ದಾರೆ. ಈಗಲೂ ನುಸಿ ಪೀಡೆ ರೋಗ ವ್ಯಾಪಕವಾಗಿದೆ. ಕಳೆದ ವರ್ಷ ರಾಮನಗರ ಜಿಲ್ಲೆಯಲ್ಲಿ ಬಿಸಿಲ ತಾಪ 40 ಡಿಗ್ರಿ ಆಸುಪಾಸಿಗೆ ಬಂದು ತಲುಪಿತ್ತು. ಈ ಬಾರಿಯೂ ಬಿಸಿಲು ತಾಪ ಕಳೆದ ಸಾಲಿನ ದಾಖಲೆ ಮುರಿಯುವ ಸಾಧ್ಯತೆ ಇದೆ. ನೀರಾವರಿ ತೋಟದಲ್ಲಿಯೂ ತೆಂಗು ಬಿಸಿಲ ಬೇಗೆಗೆ ಸಾಯುವ ಹಂತಕ್ಕೆ ತಲುಪಿದ್ದವು. ಇದರ ಪರಿಣಾಮ ಇನ್ನೂ ತೆಂಗು ಇಳುವರಿ ಮೇಲೆ ಇದ್ದು, ಉತ್ಪಾದನೆ ಮೇಲೆ ಪರಿಣಾಮ ಬೀರಿದೆ.