ಚನ್ನಪಟ್ಟಣ ವೈದ್ಯನ ವಿರುದ್ಧ ಪ್ರಕರಣ ದಾಖಲು

ಸಾತ್ವಿಕ್
ಸಾತ್ವಿಕ್
Published on

ಪ್ರಮುಖ ಮುಖ್ಯಾಂಶಗಳು

  • ಹಾವು ಕಡಿತಕ್ಕೆ ಸರಿಯಾದ ಚಿಕಿತ್ಸೆ ನೀಡದೆ ಬಾಲಕನ ಸಾವು ಪ್ರಕರಣ
  • ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದ್ದ ಘಟನೆ
  • ನಾಲ್ಕು ತಿಂಗಳ ನಂತರ ಪ್ರಕರಣ ದಾಖಲು
ರಾಮನಗರ
ಹಾವು ಕಡಿತಕ್ಕೆ ಒಳಗಾಗಿದ್ದ ಬಾಲಕ ಸಾತ್ವಿಕ್​ಗೆ ಸರಿಯಾದ ಚಿಕಿತ್ಸೆ ನೀಡದೆ ಆತನ ಸಾವಿಗೆ ಕಾರಣವಾದ ಆರೋಪದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಡಾ.ರಂಜಿತ್​ ವಿರುದ್ಧ ಚನ್ನಪಟ್ಟಣ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚನ್ನಪಟ್ಟಣದ ಮಹದೇಶ್ವರ ನಗರ ನಿವಾಸಿ ಕುಶಾಲ್​ ಎಂಬುವರು ನೀಡಿದ ದೂರಿನ ಮೇರೆಗೆ ಡಾ.ರಂಜಿತ್​ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆ ವಿವರ: ಕುಶಾಲ್​ ಅವರ ಸಹೋದರಿ ಅಶ್ವಿನಿ ಮತ್ತು ನಿರಂಜನ್​ ದಂಪತಿ ಪುತ್ರ ನಾಲ್ಕು ವರ್ಷದ ಸಾತ್ವಿಕ್​ ಚನ್ನಪಟ್ಟಣದಲ್ಲಿ ತನ್ನ ಅಜ್ಜಿ ಮನೆಯಲ್ಲಿಯೇ ವಾಸವಿದ್ದು, ಮನೆ ಹತ್ತಿರದ ಖಾಸಗಿ ಶಾಲೆಯಲ್ಲಿ ಪ್ರೀ ನರ್ಸರಿ ಕಲಿಯುತ್ತಿದ್ದ. 2026ರ ಏಪ್ರಿಲ್​ 24ರಂದು ರಜೆ ಇದ್ದ ಕಾರಣ ಮನೆ ಬಳಿ ಸಂಜೆ ಆಟವಾಡುತ್ತಿದ್ದಾಗ ಹಾವು ಕಚ್ಚಿತ್ತು. ತಕ್ಷಣವೇ ಸಾತ್ವಿಕ್​ನನ್ನು ಚನ್ನಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಗಿತ್ತು. ಈ ವೇಳೆ ಕರ್ತವ್ಯದಲ್ಲಿದ್ದ ವೈದ್ಯ ಡಾ.ರಂಜಿತ್​, ಮಕ್ಕಳ ವೈದ್ಯರು ಇಲ್ಲ ಮತ್ತು ಹೆಚ್ಚಿನ ಸೌಲಭ್ಯ ಇಲ್ಲ ಎಂದು ಹೇಳಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.
ತಕ್ಷಣ ಸಾತ್ವಿಕ್​ನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಚನ್ನಪಟ್ಟಣದಲ್ಲಿ ವೈದ್ಯರು ನೀಡಿದ ಚಿಕಿತ್ಸೆಯ ವಿವರಗಳನ್ನು ಪರಿಶೀಲನೆ ಮಾಡಿದ್ದು, ವೈದ್ಯರು ಹಾವು ಕಡಿತಕ್ಕೆ ಪ್ರತಿಬಂಧಕ ಚುಚ್ಚುಮದ್ದು ನೀಡದೆ ಕೇವಲ ಟಿಟಿ ಮತ್ತು ರ್ಯಾಂಟಕ್​ ಇಂಜೆಕ್ಷನ್​ ನೀಡಿದ್ದಾರೆ. ಹಾವು ಕಡಿತಕ್ಕೆ ಪ್ರತಿಬಂಧಕ ಇಂಜೆಕ್ಷನ್​ ನೀಡಿದ್ದರೆ ವಿಷ ಹರಡುವಿಕೆ ಕಡಿಮೆ ಆಗುತಿತ್ತು ಎಂದು ಹೇಳಿದ್ದರು. ಚಿಕಿತ್ಸೆ ಫಲಕಾರಿ ಆಗದೆ ಮಗು ಏ.30ರಂದು ಮೃತಪಟ್ಟಿದೆ. ಈ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿ ರ್ನಿಲಕ್ಷ ತೋರಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಶಾಲ್​ ದೂರು ನೀಡಿದ್ದರು.

ಕೋರ್ಟ್​ ಮೆಟ್ಟಿಲೇರಿದ್ದ ತಂದೆ

ಸಾತ್ವಿಕ್​ ಸಾವಿನ ನಂತರ ಇವರ ತಂದೆ ನಿರಂಜನ್​ ಕರ್ತವ್ಯಲೋಪ ಎಸಗಿದ ವೈದ್ಯರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಹೋರಾಟಕ್ಕೆ ಇಳಿದರು. ಪ್ರಕರಣದಲ್ಲಿ ವೈದ್ಯರ ರ್ನಿಲಕ್ಷ ಕಂಡು ಬಂದ ಹಿನ್ನೆಲೆಯಲ್ಲಿ ವೈದ್ಯ ಡಾ.ರಂಜಿತ್​ ಅವರನ್ನು ಅಮಾನತು ಮಾಡಿ ಆರೋಗ್ಯ ಮತ್ತು ಕುಟುಂಬ ಇಲಾಖೆ ಆದೇಶ ಮಾಡಿತ್ತು. ನಂತರ ಇವರ ವಿರುದ್ಧ ವಿಚಾರಣೆ ಕೂಡ ನಡೆಯುತ್ತಿದೆ. ಆದರೆ, ಇವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳುವಲ್ಲಿ ಮತ್ತು ತನಿಖೆ ಮಾಡುವಲ್ಲಿ ಪೊಲೀಸ್​ ಇಲಾಖೆ ಹಿಂದೇಟು ಹಾಕಿತ್ತು. ಆದರೆ ಇದರಿಂದ ವಿಚಲಿತರಾಗದ ನಿರಂಜನ್​ ಹೈ ಕೋರ್ಟ್​ನಲ್ಲಿ ಅರ್ಜಿ ದಾಖಲು ಮಾಡಿ ವೈದ್ಯರ ವಿರುದ್ಧ ಕ್ರಮಕ್ಕಾಗಿ ಹೋರಾಟ ನಡೆಸಿದ್ದರು. ಇದರ ಫಲವಾಗಿ ವೈದ್ಯರ ವಿರುದ್ಧ ಕೂಡಲೇ ತನಿಖೆ ಮಾಡುವಂತೆ ಸೂಚನೆ ನೀಡಿ 60 ದಿನಗಳ ಒಳಗೆ ತನಿಖೆ ಪೂರ್ಣಗೊಳಿಸುವಂತೆ ಠಾಣೆ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದ ಹೈಕೋರ್ಟ್​, ಇದನ್ನು ಮೇಲುಸ್ತುವಾರಿ ಮಾಡುವಂತೆಯೂ ತಿಳಿಸಿ ಜೂನ್​.23ರಂದು ಆದೇಶ ನೀಡಿತ್ತು. ಆದರೂ ವೈದ್ಯರ ವಿರುದ್ಧ ಪ್ರಕರಣ ದಾಖಲು ಮಾಡುವಲ್ಲಿ ಪೊಲೀಸ್​ ಇಲಾಖೆ ವಿಳಂಬ ಮಾಡಿತ್ತು. ಅಂತಿಮವಾಗಿ ಆ.24ರಂದು ಪ್ರಕರಣ ದಾಖಲು ಮಾಡಲಾಗಿದೆ.

ದಯಾಮರಣಕ್ಕೆ ಅರ್ಜಿ ಯಾಕೆ?:

ತಮ್ಮ ಮಗನ ಸಾವಿಗೆ ಕಾರಣವಾದ ವೈದ್ಯರ ವಿರುದ್ಧ ಪ್ರಕರಣ ದಾಖಲು ಮಾಡಲು ಹಿಂದೇಟು ಹಾಕುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸ್​ ಇಲಾಖೆಯ ಹಿರಿಯ ಅಧಿಕಾರಿಗಳು, ಗೃಹ ಇಲಾಖೆ ಕಾರ್ಯದರ್ಶಿ, ಡಿಜಿಪಿ ಸೇರಿ ಹಲವು ಅಧಿಕಾರಿಗಳು ಮತ್ತು ಸಚಿವರಿಗೆ ನಿರಂಜನ್​ ಮನವಿ ಸಲ್ಲಿಸಿದ್ದರು. ಈ ನಡುವೆ ಹೈಕೋರ್ಟ್​ ಆದೇಶದ ಹೊರತಾಗಿಯೂ ಆಡಳಿತ ಯಂತ್ರ ದಾಟಿ ಬದಲಾವಣೆ ಆಗದ ಹಿನ್ನೆಲೆಯಲ್ಲಿ ಬೇಸತ್ತ ನಿರಂಜನ್​ ಆ.21ರಂದು ವರಮಹಾಲಕ್ಷಿ$್ಮ ಹಬ್ಬದ ದಿನದಂದು ರಾಷ್ಟ್ರಪತಿಗಳಿಗೆ ಇಮೇಲ್​ ಮಾಡಿ ದಯಾಮರಣ ಕೋರಿದ್ದಾರೆ. ತಮಗೆ ಆಗುತ್ತಿರುವ ನೋವನ್ನು ತೋಡಿಕೊಂಡಿದ್ದರು. ಇದಾದ ಮೂರನೇ ದಿನಕ್ಕೆ ಅಂದರೆ ಆ.24ರಂದು ಚನ್ನಪಟ್ಟಣ ಟೌನ್​ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲು ಮಾಡಲಾಗಿದೆ. ಬರೋಬ್ಬರಿ ಟನೆ ನಡೆದ 4 ತಿಂಗಳ ನಂತರ ಪ್ರಕರಣ ದಾಖಲಾದಂತಾಗಿದೆ. ಆದರೆ ಎಫ್​ಐಆರ್​ನಲ್ಲಿ ಯಾವುದೇ ಸೆಕ್ಷನ್​ಗಳನ್ನು ದಾಖಲು ಮಾಡದೆ ಇರುವ ಹಿನ್ನೆಲೆಯಲ್ಲಿ ಕಾನೂನು ಹೋರಾಟ ಮುಂದುವರಿಸುವುದಾಗಿ ನಿರಂಜನ್​ ಹೇಳಿದ್ದಾರೆ.
ಸೂಕ್ತ ವ್ಯವಸ್ಥೆ ಇದ್ದರೂ ಚಿಕಿತ್ಸೆ ನೀಡುವಲ್ಲಿ ವೈದ್ಯರು ರ್ನಿಲಕ್ಷ ತೋರಿದ ಕಾರಣ ಹಾವು ಕಡಿತಕ್ಕೆ ಒಳಗಾದ ನನ್ನ ಮಗ ಮೃತಪಟ್ಟ. ನನ್ನ ಮಗನಿಗೆ ಆದ ಅನ್ಯಾಯ ಯಾರಿಗೂ ಆಗಬಾರದು ಎನ್ನುವ ನಿಟ್ಟಿನಲ್ಲಿ ಈ ಹೋರಾಟ ಮಾಡುತ್ತಿದ್ದೇನೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪೊಲೀಸ್​ ಇಲಾಖೆ ಸೂಕ್ತ ತನಿಖೆ ನಡೆಸಿ ನನಗೆ ನ್ಯಾಯ ಕೊಡಿಸಕೊಡಬೇಕು. ಇಲಾಖೆಗಳಿಂದ ಸೂಕ್ತ ಸ್ಪಂದನೆ ಸಿಗದ ಕಾರಣದಿಂದಲೇ ನಾನು ಮತ್ತು ನನ್ನ ಪತ್ನಿ ದಯಾಮರಣ ಕೋರಿ ರಾಷ್ಟ್ರಪತಿಗೆ ಮನವಿ ಮಾಡಿದ್ದೇವೆ.
ನಿರಂಜನ್​, ಮೃತ ಬಾಲಕನ ತಂದೆ
----------
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿದ ವೈದ್ಯರನ್ನು ಅಮಾನತು ಮಾಡಲಾಗಿದೆ. ತನಿಖೆ ಪ್ರಗತಿಯಲ್ಲಿದೆ.
ಡಾ.ಬಿ.ಎಸ್​.ನಿರಂಜನ್​, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net