ಗಣೇಶಮೂರ್ತಿಗಳ ಉಚಿತ ವಿತರಣೆ ಸದ್ದು

ಉಚಿತವಾಗಿ ಹಂಚಲು ಖರೀದಿಸಿರುವ ಗಣೇಶ ಮೂರ್ತಿಗಳು
ಉಚಿತವಾಗಿ ಹಂಚಲು ಖರೀದಿಸಿರುವ ಗಣೇಶ ಮೂರ್ತಿಗಳು
Published on
ಚನ್ನಪಟ್ಟಣ: ಗಣೇಶೋತ್ಸವಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ತಾಲೂಕಿನಲ್ಲಿ ರಾಜಕೀಯ ನಾಯಕರ ಉಚಿತ ಗಣೇಶಮೂರ್ತಿ ವಿತರಣೆ ಮತ್ತೆ ಸದ್ದು ಮಾಡುತ್ತಿದೆ. ಹಬ್ಬದ ಸಂಭ್ರಮಕ್ಕೆ ಸಾಥ್ ನೀಡುವ ನೆಪದಲ್ಲಿ ಯುವ ಸಮುದಾಯದ ಮನಸ್ಸು ಗೆಲ್ಲಲು ರಾಜಕಾರಣಿಗಳು ಮುಂದಾಗಿದ್ದರೆ, ಇದರಿಂದ ಹಬ್ಬವನ್ನೇ ನಂಬಿಕೊಂಡು ಲಕ್ಷಾಂತರ ರೂ. ಬಂಡವಾಳ ಹೂಡಿರುವ ಗಣೇಶಮೂರ್ತಿ ವ್ಯಾಪಾರಿಗಳಲ್ಲಿ ಆತಂಕ ಮನೆಮಾಡಿದೆ.
ಹೌದು...ಮೋದಕಪ್ರಿಯ ಗಣೇಶನ ಹಬ್ಬ ಎಂದರೆ ಯುವಕರಿಗೆ ಎಲ್ಲಿಲ್ಲದ ಸಡಗರ. ಗಣೇಶನ ಪ್ರತಿಷ್ಠಾಪನೆಯಿಂದ ವಿಸರ್ಜನೆಯವರೆಗೆ ವಿವಿಧ ಕಾರ್ಯಕ್ರಮಗಳ ಮೂಲಕ ಹಬ್ಬವನ್ನು ಸಂಭ್ರಮಿಸಲಾಗುತ್ತದೆ. ಪ್ರತಿ ವರ್ಷವೂ ಮೂರ್ತಿಗಳ ಖರೀದಿಗೆ ಸಂಘ-ಸಂಸ್ಥೆಗಳು ಹಾಗೂ ಯುವಕರ ತಂಡ ಹಣ ಹೊಂದಿಸುವುದು ಸಾಮಾನ್ಯ. ಮೂರ್ತಿಯ ಗಾತ್ರ, ವಿನ್ಯಾಸ ಹಾಗೂ ಅಲಂಕಾರಕ್ಕೆ ಅನುಗುಣವಾಗಿ ನೂರು ರೂ.ನಿಂದ ಲಕ್ಷಾಂತರ ರೂ.ವರೆಗೂ ದರವಿದೆ. ಇಂತಹ ಸಂದರ್ಭದಲ್ಲಿ ಈ ವರ್ಷವೂ ಉಚಿತ ಗಣೇಶಮೂರ್ತಿ ವಿತರಿಸುತ್ತಿರುವುದು ಪ್ರತಿಷ್ಠಾಪಕರಿಗೆ ಸಂತಸ ತಂದಿದೆ. ಆದರೆ, ಮೂರ್ತಿ ವ್ಯಾಪಾರಿಗಳ ಪಾಲಿಗೆ ರಾಜಕೀಯ ನಾಯಕರ ಈ ನಡೆ ನುಂಗಲಾರದ ತುತ್ತಾಗಿದೆ.
ಈ ವರ್ಷವೂ ಫ್ರೀ...!
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು ಅವರು ತಮ್ಮ ತಾಯಿ ಚೆನ್ನಮ್ಮ ಚಾರಿಟಬಲ್ ಟ್ರಸ್ಟ್ನಿಂದ 2009ರಿಂದ ಉಚಿತವಾಗಿ ಗಣೇಶಮೂರ್ತಿ ವಿತರಿಸುತ್ತಿದ್ದಾರೆ. ಕರೊನಾ ಕಾರಣದಿಂದ ಎರಡು ವರ್ಷ ಈ ಕಾರ್ಯಕ್ರಮ ಸ್ಥಗಿತಗೊಂಡಿತ್ತು. 2022ರಿಂದ ಮತ್ತೆ ಉಚಿತ ಮೂರ್ತಿ ವಿತರಣೆ ಮುಂದುವರಿದಿದ್ದು, ಇದರೊಂದಿಗೆ, ಶಾಸಕ ಸಿ.ಪಿ.ಯೋಗೇಶ್ವರ್ 4ನೇ ಬಾರಿಗೆ ಉಚಿತ ಮೂರ್ತಿ ವಿತರಣೆಗೆ ಮುಂದಾಗಿದ್ದಾರೆ. ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ತಾಲೂಕಿನ ವಿವಿಧೆಡೆಯಿಂದ ಗಣೇಶಮೂರ್ತಿಗೆ ಬೇಡಿಕೆ ಬರುತ್ತಿದೆ.
ವರ್ತಕರಿಗೆ ಶಾಕ್!
ಹಬ್ಬದ ವ್ಯಾಪಾರವನ್ನು ನಂಬಿಕೊಂಡು ತಾಲೂಕಿನ ಹಲವು ಮೂರ್ತಿ ಮಾರಾಟಗಾರರು ಲಕ್ಷಾಂತರ ರೂ. ಬಂಡವಾಳ ಹೂಡಿದ್ದಾರೆ. ತಮಿಳುನಾಡು, ಬೆಂಗಳೂರು, ತಿರುಪತಿ, ಚಿಕ್ಕತಿರುಪತಿ, ಹೊಸಕೋಟೆ ಸೇರಿ ಹಲವೆಡೆಯಿಂದ ವೈವಿಧ್ಯಮಯ ಮೂರ್ತಿಗಳನ್ನು ತರಿಸಿಕೊಂಡಿದ್ದಾರೆ. ಅಂಗಡಿ, ಗೋದಾಮು ಬಾಡಿಗೆ ಸೇರಿ ವಿವಿಧ ವೆಚ್ಚಗಳನ್ನು ಭರಿಸಿರುವ ವ್ಯಾಪಾರಿಗಳು, ಈ ಬಾರಿ ಯಾವುದೇ ಚುನಾವಣೆ ಇಲ್ಲದಿರುವುದರಿಂದ ಉಚಿತ ಮೂರ್ತಿ ವಿತರಣೆಗೆ ಬ್ರೇಕ್ ಬೀಳಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಅವರ ನಿರೀಕ್ಷೆ ಹುಸಿಯಾಗಿದ್ದು, ಈ ಬಾರಿಯೂ ಉಚಿತ ಮೂರ್ತಿ ವಿತರಣೆ ಮುಂದುವರಿದಿರುವುದು ವ್ಯಾಪಾರಿಗಳ ಚಿಂತೆಗೆ ಕಾರಣವಾಗಿದೆ.
ಕೇವಲ ಉಚಿತ ಮೂರ್ತಿ ವಿತರಣೆಯಷ್ಟೇ ಅಲ್ಲದೇ ಹೊಸ ತಲೆಮಾರಿನ ಯುವಕರು ವೈವಿಧ್ಯಮಯ ಮೂರ್ತಿಗಳನ್ನು ಖರೀದಿಸಲು ಬೆಂಗಳೂರು ಅಥವಾ ಮೈಸೂರು ನಗರಗಳತ್ತ ಮುಖ ಮಾಡುತ್ತಿರುವುದು ಸ್ಥಳೀಯ ವರ್ತಕರ ವಹಿವಾಟು ಕಡಿಮೆಯಾಗಲು ಕಾರಣವಾಗುತ್ತಿದೆ. ಒಟ್ಟಾರೆ, ಉಚಿತವಾಗಿ ಮೂರ್ತಿ ಸಿಗುವುದರಿಂದ ಪ್ರತಿಷ್ಠಾಪಕರಿಗೆ ಸಂಭ್ರಮ ಹೆಚ್ಚಾದರೆ, ವ್ಯಾಪಾರಿಗಳಿಗೆ ಗ್ರಾಹಕರ ಸಂಖ್ಯೆ ಕುಸಿಯುವ ಭೀತಿ ಎದುರಾಗಿದೆ.
"

ಈ ಹಿಂದಿನಿಂದಲೂ ಉಚಿತವಾಗಿ ಗಣೇಶಮೂರ್ತಿಗಳನ್ನು ವಿತರಿಸುತ್ತಿದ್ದೇನೆ. ಚಿಕ್ಕ ವಯಸ್ಸಿನಿಂದಲೂ ನನಗೆ ಗಣೇಶನ ಹಬ್ಬದ ಬಗ್ಗೆ ವಿಶೇಷ ಆಸಕ್ತಿ ಇದೆ. ಮೂರ್ತಿ ವಿತರಣೆಯ ಹಿಂದೆ ಯಾವತ್ತಿಗೂ ರಾಜಕೀಯ ಉದ್ದೇಶವಿಲ್ಲ. ಹಿಂದಿನಿಂದಲೂ ಮಾಡಿಕೊಂಡು ಬಂದಿರುವ ಕಾರ್ಯವನ್ನು ಈಗಲೂ ಮುಂದುವರಿಸುತ್ತಿದ್ದೇನೆ.

"

ನಮ್ಮ ಸಂಸ್ಕೃತಿಯ ಭಾಗವಾಗಿರುವ ಗಣೇಶೋತ್ಸವಕ್ಕೆ ಬಹಳ ಮಹತ್ವವಿದೆ. ಹಬ್ಬದ ಸಂಭ್ರಮದಲ್ಲಿ ನಾವೂ ಭಾಗಿಯಾಗಬೇಕು ಹಾಗೂ ಯುವಜನರ ಹಬ್ಬದ ಸಂಭ್ರಮ ಹೆಚ್ಚಿಸುವ ಉದ್ದೇಶದಿಂದ ಗಣೇಶ ಮೂರ್ತಿಗಳನ್ನು ವಿತರಿಸುತ್ತಿದ್ದೇನೆ.

"

ಮೂರ್ತಿ ವ್ಯಾಪಾರವನ್ನೇ ನಂಬಿಕೊಂಡು ಲಕ್ಷಾಂತರ ರೂ. ಬಂಡವಾಳ ಹೂಡಿದ್ದೇವೆ. ಮೂರ್ತಿಗಳಿಗೆ ಈಗಾಗಲೇ ಸಂಪೂರ್ಣ ಹಣ ಪಾವತಿಸಿ ತಂದಿದ್ದೇವೆ. ಅಂಗಡಿ ಹಾಗೂ ಗೋದಾಮಿನ ಬಾಡಿಗೆಯನ್ನೂ ನಾವೇ ಭರಿಸಬೇಕು. ಚುನಾವಣೆ ಇಲ್ಲದ ಕಾರಣ ಈ ಬಾರಿ ಉಚಿತ ಮೂರ್ತಿ ವಿತರಣೆ ಇರುವುದಿಲ್ಲ ಎಂದುಕೊಂಡಿದ್ದೆವು. ಇದೀಗ ವ್ಯಾಪಾರ ಹೇಗೆ ಆಗುತ್ತದೆ ಎಂಬುದನ್ನು ಕಾದು ನೋಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net