ಕಾಡಂಚಿನ ಕೃಷಿ ಉತ್ಪನ್ನಕ್ಕೆ ಬ್ರ್ಯಾಂಡ್ ವ್ಯಾಲ್ಯೂ

ಆನೆಕಾಡು ಫುಡ್ ಕಾಸ್ಟ್ ನ ಲೊಗೊ.
ಆನೆಕಾಡು ಫುಡ್ ಕಾಸ್ಟ್ ನ ಲೊಗೊ.
Published on

ಪ್ರಮುಖ ಮುಖ್ಯಾಂಶಗಳು

  • ಆನೆಕಾಡು ಫುಡ್ ಪಾಡ್ ಕಾಸ್ಟ್
  • ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಯೋಜನೆ
  • ಆನೆ ದಾಳಿಯಿಂದ ಆಗುವ ನಷ್ಟ ಸರಿದೂಗಿಸುವ ಯತ್ನ
ರಾಮನಗರ
ಅರಣ್ಯ ಎಂದರೆ ಇತ್ತೀಚಿನ ದಿನಗಳಲ್ಲಿ ಮಾನವ ಮತ್ತು ವನ್ಯಮೃಗಗಳ ಸಂಘರ್ಷದ್ದೇ ಚರ್ಚೆ. ಪ್ರಾಣಿಗಳ ಕಾಟದಿಂದ ರೈತರಿಗೆ ಮುಕ್ತಿ ಸಿಗುತ್ತಿಲ್ಲ ಎನ್ನುವ ಆರೋಪ ಪದೇಪದೆ ಕೇಳಿ ಬರುತ್ತಲೇ ಇರುತ್ತವೆ.
ಆದರೆ, ಇದಕ್ಕೆ ಪರ್ಯಾಯ ಮತ್ತು ರೈತರಿಗೆ ಪೂರಕವಾದ ಹಾಗೂ ದೇಶದಲ್ಲಿಯೇ ಮೊದಲನೆಯದು ಎನ್ನಲಾದ ಪ್ರಯತ್ನಕ್ಕೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅರಣ್ಯ ಸಿಬ್ಬಂದಿ ಮುಂದಾಗಿದ್ದಾರೆ. ಪರಿಸರ ಸೂಕ್ಷ್ಮ ವಲಯದಲ್ಲಿ ರೈತರು ಬೆಳೆಯುವ ಬೆಳೆಗಳನ್ನು ಬ್ರ್ಯಾಂಡ್ ಮೂಲಕ ಮಾರುಕಟ್ಟೆಗೆ ಪರಿಚಯಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿ, ಇದನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದಾರೆ.

ಏನಿದು ಆನೆಕಾಡು ಫುಡ್

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಆನೆ ಸೇರಿದಂತೆ ಇತರ ವನ್ಯಮೃಗಗಳ ಹಾವಳಿ ತುಸು ಹೆಚ್ಚೇ ಇದೆ. ಅದರಲ್ಲೂ ಕಾಡಂಚಿನ ಗ್ರಾಮಗಳ ರೈತರ ಪರಿಸ್ಥಿತಿಯಂತೂ ಹೇಳತೀರದು. ಅರಣ್ಯ ಇಲಾಖೆ ಪರಿಹಾರದ ರೂಪದಲ್ಲಿ ನಷ್ಟ ಭರಿಸುವ ಪ್ರಯತ್ನ ರೈತರಿಗೆ ತೃಪ್ತಿ ನೀಡುತ್ತಿಲ್ಲ. ಇದರ ಬಗ್ಗೆ ಅರಿವಿರುವ ಅರಣ್ಯ ಇಲಾಖೆ ಅಧಿಕಾರಿಗಳು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಒಳಪಡುವ ರೈತರು ಬೆಳೆಯುವ ಉತ್ಪನ್ನಗಳಿಗೆ ಬ್ರ್ಯಾಂಡ್ ಮೌಲ್ಯ ಒದಗಿಸಲು ಚಿಂತಿಸಿ, ಆನೆಕಾಡು ಫುಡ್ ಪಾಡ್‌ಕಾಸ್ಟ್ ಎನ್ನುವ ನಾಮಕರಣ ಮಾಡಿದ್ದಾರೆ.

ಏಕೀ ನಿರ್ಧಾರ ?

ಇತ್ತೀಚಿನ ದಿನಗಳಲ್ಲಿ ಸಾವಯವ ಮತ್ತು ನೈಸರ್ಗಿಕ ಕೃಷಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಸಾವಯವ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯೂ ಇದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಗಡಿಯಿಂದ ಕನಿಷ್ಠ 100 ಮೀಟರ್‌ನಿಂದ ಗರಿಷ್ಠ ಒಂದು ಕಿಮೀವರೆಗೆ ಪರಿಸರ ಸೂಕ್ಷ್ಮ ವಲಯ (ಇಎಸ್‌ಝಡ್) ಎಂದು ಘೋಷಿಸಲಾಗಿದೆ. ಈ ವ್ಯಾಪ್ತಿಯಲ್ಲಿ 77 ಗ್ರಾಮಗಳು 16 ಹಾಡಿಗಳಿವೆ. ಸದರಿ ಪ್ರದೇಶದಲ್ಲಿ ಪರಿಸರಕ್ಕೆ ಪೂರಕವಾಗಿರುವ ಕೃಷಿ ಚಟುವಟಿಕೆ ಹೊರತುಪಡಿಸಿ, ಗಣಿಗಾರಿಕೆ, ಕಾರ್ಖಾನೆಗಳು, ಪರಿಸರಕ್ಕೆ ಮಾರಕವಾಗಿರುವ ಯಾವುದೇ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳು ಹೆಚ್ಚಿನದಾಗಿ ನೈಸರ್ಗಿಕವಾಗಿಯೇ ಇರುತ್ತವೆ. ಇದರಿಂದ ರೈತರಿಗೆ ಪ್ರಾಣಿಗಳ ಹಾವಳಿಯಿಂದ ಆಗುವ ನಷ್ಟವನ್ನು ಈ ಮೂಲಕ ಭರಿಸಿಕೊಳ್ಳಬಹುದಾಗಿದೆ ಎನ್ನುವುದು ಅರಣ್ಯ ಇಲಾಖೆ ಲೆಕ್ಕಾಚಾರ.

ನೇರ ಮಾರುಕಟ್ಟೆ

ಆನೆಕಾಡು ಫುಡ್ ಪಾಡ್ ಕಾಸ್ಟ್ ಬ್ರ್ಯಾಂಡ್ ಮೂಲಕ ರೈತರು ಬೆಳೆಗಳನ್ನು ತಾವೇ ಮಾರಾಟ ಮಾಡಿಕೊಳ್ಳಬಹುದಾಗಿದೆ. ಮೊದಲ ಯತ್ನವಾಗಿ ಕನಕಪುರ ತಾಲೂಕಿನ ಕೋಡಿಹಳ್ಳಿ ವನ್ಯ ಜೀವಿ ವಲಯ ವ್ಯಾಪ್ತಿಯ ಬೆಟ್ಟಹಳ್ಳಿಯಲ್ಲಿ ಅತಿ ಶೀಘ್ರದಲ್ಲಿಯೇ ಮಾರಾಟ ಮಳಿಗೆಯೂ ಆರಂಭಗೊಳ್ಳಲಿದೆ. ಇದರ ಜತೆಗೆ, ರೈತರ ಗುಂಪುಗಳನ್ನು ರಚಿಸುವ ಮೂಲಕ ಮಾರುಕಟ್ಟೆಯನ್ನು ರಾಜಧಾನಿ ಬೆಂಗಳೂರಿಗೆ ವಿಸ್ತರಿಸುವ ಯೋಜನೆಯೂ ಅರಣ್ಯ ಇಲಾಖೆಗೆ ಇದೆ. ಇದರಿಂದ ರೈತರು ತಮ್ಮ ಬೆಳೆಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಮೂಲಕ, ಮಧ್ಯವರ್ತಿಗಳ ಹಾವಳಿಯೂ ಇಲ್ಲದೆ ಹೆಚ್ಚಿನ ಲಾಭವನ್ನು ಸಹ ಗಳಿಸಬಹುದಾಗಿದೆ.

ಮತ್ತಷ್ಟು ಯೋಜನೆ

ಸದ್ಯಕ್ಕೆ ಪರಿಸರ ಸೂಕ್ಷ್ಮ ವಲಯದ ರೈತರು ಬೆಳೆದ ಬೆಳೆಗಳಿಗೆ ಬ್ರಾೃಂಡ್ ವ್ಯಾಲ್ಯೂ ಕೊಡಿಸಿಕೊಡುವ ಪ್ರಯತ್ನಕ್ಕೆ ಕೈ ಹಾಕಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅರಣ್ಯ ಸಿಬ್ಬಂದಿ, ಭವಿಷ್ಯದಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ನಾಶವಾಗುವ ಬೆಳೆಗಳ ವೀಕ್ಷಣೆಗೆ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ಚಿಂತನೆಯನ್ನೂ ಸಹ ನಡೆಸಿದೆ. ಅಸ್ಸಾಂನಲ್ಲಿ ಈಗಾಗಲೇ ಇರುವ ಆಗ್ರೋ ಟೂರಿಸಂ ಅನ್ನು ಇಲ್ಲಿಯೂ ಪರಿಚಯಿಸಿದರೆ ಖಂಡಿತವಾಗಿ ಇದರಿಂದ ರೈತರಿಗೆ ಹೆಚ್ಚಿನ ಲಾಭವೂ ಆಗಲಿದೆ. ಇಷ್ಟೇ ಅಲ್ಲದೆ, ಹೋಟೆಲ್‌ಗಳು, ಹೋಂ ಸ್ಟೇಗಳು, ರೆಸಾರ್ಟ್‌ಗಳಿಯೂ ರೈತರ ಉತ್ಪನ್ನಗಳಿಗೆ ಜಾಗ ದೊರಕಿಸಿಕೊಡುವ ಯತ್ನವೂ ಸದ್ದಿಲ್ಲದೆ ಅರಣ್ಯ ಇಲಾಖೆಯಿಂದ ಸಾಗಿದೆ.
"

ಕೋಡಿಹಳ್ಳಿ ವನ್ಯಜೀವಿ ವಲಯ ಮತ್ತು ಕನಕಪುರ ಸಾವಯವ ರೈತ ಉತ್ಪಾದಕರ ಕಂಪನಿ ಜಂಟಿಯಾಗಿ ಪರಿಸರ ಸೂಕ್ಷ್ಮ ವಲಯದ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ನಿಗದಿಪಡಿಸಿ ಮಾರಾಟ ಮಾಡಲು ಚಿಂತಿಸಿದೆ. ಇದರಿಂದ ರೈತರಿಗೆ ಮಾರುಕಟ್ಟೆಗಿಂತ ಶೇ.2 ರೂ.ವರೆಗೆ ಹೆಚ್ಚು ಲಾಭವಾಗುತ್ತದೆ. ಈ ಭಾಗದಲ್ಲಿ ಕಾಡು ಪ್ರಾಣಿಗಳಿಂದ ರೈತರಿಗಾಗುವ ನಷ್ಟಕ್ಕೆ ಅವರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸ್ಥಳದಲ್ಲಿಯೇ ಸಿಗುತ್ತದೆ. ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು.

ನಾಗರಾಜು, ಡಿಆರ್‌ಎಫ್‌ಒ,ಕೋಡಿಹಳ್ಳಿ ವನ್ಯ ಜೀವಿ ವಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net