

ಹಾರೋಹಳ್ಳಿ: ದೊಡ್ಡ ಕುರುಬರಹಳ್ಳಿ ದೇವಸ್ಥಾನ ಉದ್ಘಾಟನೆ ಸಮಯದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಲು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬಂದಾಗ ಕೆಲ ಕಿಡಿಗೇಡಿಗಳು ದೇವಸ್ಥಾನದ ಬಾಗಿಲು ಮುಚ್ಚಿ ಉದ್ದಟತನ ಮೆರೆದು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮದ ಬಿಸಿಲು ಮಾರಮ್ಮ ದೇವಾಲಯದ ಉದ್ಘಾಟನಾ ಕಾರ್ಯಕ್ರಮ ಗುರುವಾರ ಮತ್ತು ಶುಕ್ರವಾರ ನಿಗದಿಯಾಗಿತ್ತು. ಗುರುವಾರ ಸಂಸದ ಡಾ. ಸಿ ಎನ್. ಮಂಜುನಾಥ್, ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಗೌತಮ್ ಗೌಡ ಸೇರಿ ಹಲವು ಮುಖಂಡರು ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಶುಕ್ರವಾರ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಹಲವು ಪೂಜಾ ವಿಧಿ ವಿಧಾನಗಳು ನಡೆದವು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್, ವಿಧಾನಪರಿಷತ್ ಸದಸ್ಯ ಎಸ್. ರವಿ ಸೇರಿ ಹಲವರು ದೇವರ ದರ್ಶನ ಪಡೆದಿದ್ದರು.
ಮಧ್ಯಾಹ್ನ 3ಗಂಟೆ ಸಮಯದಲ್ಲಿ ನಿಖಿಲ್ ಕುಮಾರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಿಖಿಲ್ ಅವರನ್ನು ಜಯ ಘೋಷಗಳೊಂದಿಗೆ ಕಾರ್ಯಕರ್ತರು, ಗ್ರಾಮಸ್ಥರು ಕರೆ ತಂದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಮೈಕ್ನಲ್ಲಿ ಶಾಸಕ ಇಕ್ಬಾಲ್ ಹುಸೇನ್ ಅವರು ಇನ್ನೇನು ಕೆಲವೇ ಕ್ಷಣಗಳಲ್ಲಿ ಬರಲಿದ್ದಾರೆ ಎಂದು ಘೋಷಿಸುತ್ತಿದ್ದರು. ಅಲ್ಲಿಯೇ ನೆರೆದಿದ್ದ ಕೆಲ ಜೆಡಿಎಸ್ ಕಾರ್ಯಕರ್ತರು ನಿಖಿಲ್ ಬರುವುದನ್ನು ಮೈಕ್ನಲ್ಲಿ ಘೋಷಣೆ ಮಾಡಿ ಎಂದು ಹೇಳಿದರು.
ಮಾರಾಮಾರಿ: ಅಶೋಕ್ ಎಂಬಾತ ಮೈಕ್ ನೀಡದೆ ದರ್ಪ ಮೆರೆದಿದ್ದು, ಅಷ್ಟೇ ಅಲ್ಲದೆ ದೇವಸ್ಥಾನದ ಬಳಿ ನಿಖಿಲ್ ಬರುತ್ತಿದ್ದಂತೆ ದೇವಸ್ಥಾನದ ಬಾಗಿಲು ಮುಚ್ಚಿ ಬೀಗ ಹಾಕಿಕೊಂಡು ಹೊರಟಿದ್ದಾನೆ. ಇದರಿಂದ ಕುಪಿತಗೊಂಡ ಜೆಡಿಎಸ್ ಕಾರ್ಯಕರ್ತರು ದೇವಸ್ಥಾನದ ಬಾಗಿಲು ತೆಗೆಯುವಂತೆ ಕೇಳಿದ್ದಾರೆ. ನಂತರ ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿ ಮಾರಾಮಾರಿ ನಡೆಸಿದರು. ಬಾಗಿಲು ಹಾಕಿದ ನಂತರ ಸುಮಾರು 15 ನಿಮಿಷ ಶಾಂತ ರೀತಿಯಿಂದ ನಿಖಿಲ್ ದೇವಿಯ ದರ್ಶನ ಪಡೆಯಲು ಕಾದಿದ್ದಾರೆ. ಆದರೆ, ಬಾಗಿಲನ್ನು ತೆರೆಯದೆ ಇದ್ದುದರಿಂದ ಅಲ್ಲಿಂದ ತೆರಳಿದ್ದಾರೆ.
ಗ್ರಾಮದ ಮಹಿಳೆಯರ ಶಾಪ: ನಿಖಿಲ್ ಅವರಿಗೆ ದೇವಸ್ಥಾನದ ಬಾಗಿಲು ಮುಚ್ಚಿ ದರ್ಶನಕ್ಕೆ ಅವಕಾಶ ನೀಡದಿರುವ ಸುದ್ದಿ ಹಬ್ಬಿದ ಹಿನ್ನೆಲೆಯಲ್ಲಿ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ದೇವಸ್ಥಾನದ ಬೀಗ ಜಡಿದ ಕಿಡಿಗೇಡಿಗಳಿಗೆ ತಾಯಿ ಬಿಸಿಲು ಮಾರಮ್ಮ ತಕ್ಕ ಶಾಸ್ತಿ ಮಾಡುತ್ತಾಳೆ ಎಂದು ಹಿಡಿ ಶಾಪ ಹಾಕಿದರು.
ದೇವಸ್ಥಾನವು 9 ಹಳ್ಳಿಗೆ ಸೇರಿದ್ದಾಗಿದ್ದು, ಎಲ್ಲ ಜಾತಿ, ಧರ್ಮದವರಿಗೂ ಪೂಜಿಸುವ ಹಕ್ಕಿದೆ. ಅದು ಯಾವುದೋ ರಾಜಕೀಯ ಬೆರೆಸಿಕೊಂಡು ನಮ್ಮ ನಾಯಕರಿಗೆ ಇಂತಹ ಅವಮಾನ ಮಾಡಿರುವುದು ತಲೆತಗ್ಗಿಸುವ ವಿಚಾರವಾಗಿದೆ. ದೇವಸ್ಥಾನ ಅವರ ಸ್ವತ್ತಲ್ಲ. ಇಡೀ ಗ್ರಾಮಸ್ಥರ, ಸುತ್ತಮುತ್ತಲ ಹಳ್ಳಿಯವರ ಸ್ವತ್ತಾಗಿದೆ. ಭಕ್ತಿಯಿಂದ ಪೂಜಿಸುವ ಸ್ಥಳವಾಗಿದೆ. ಇಂತಹ ಅವಮಾನ ಸಹಿಸಲಾಗದು ಎಂದು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ: ನಿಖಿಲ್ ಅವರನ್ನು ಅವಮಾನ ಮಾಡಿದ್ದರಿಂದ ಸುತ್ತಮುತ್ತಲ ಗ್ರಾಮಸ್ಥರು ದೇವಸ್ಥಾನದ ಬಳಿ ಜಮಾಯಿಸಿ ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಹಿಂದೂ ಸಂಪ್ರದಾಯದಂತೆ ದೇವಾಲಯ ಉದ್ಘಾಟನೆ ದೇವರ ಪ್ರತಿಷ್ಠಾಪನೆ ಮಾಡುವಾಗ ಮಧ್ಯದಲ್ಲಿ ಬಾಗಿಲು ಹಾಕುವುದು ಹಿಂದೂ ಧರ್ಮಕ್ಕೆ ಅಪಮಾನ ಮಾಡಿದಂತಾಗಿದ್ದು, ಇದು ಅಪಶಕುನವಾಗಿದ್ದು, ಕಿಡಿಗೇಡಿಗಳಿಂದ ಗ್ರಾಮಕ್ಕೆ ಕೇಡುಗಾಲ ಬರುತ್ತದೆ ಎಂದು ಜನರು ಭಯಭೀತರಾಗಿದ್ದಾರೆ.
ಶಾಸಕ ಇಕ್ಬಾಲ್ ಹುಸೇನ್ ಖಂಡನೆ: ನಿಖಿಲ್ ಕುಮಾರಸ್ವಾಮಿ ಅವರಿಗೆ ದೇವಸ್ಥಾನದ ಬಾಗಿಲು ಬಂದ್ ಮಾಡಿದ್ದನ್ನು ಶಾಸಕ ಇಕ್ಬಾಲ್ ಹುಸೇನ್ ತೀವ್ರವಾಗಿ ಖಂಡಿಸಿದರು. ದೇವಸ್ಥಾನದ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಜನರ ಧಾರ್ಮಿಕ ಭಾವನೆಗಳಿಗೆ ಅವಮಾನ ಮಾಡಿದ ಇಂತಹ ಘಟನೆಯನ್ನು ಸಹಿಸುವುದಿಲ್ಲ. ದೇವಸ್ಥಾನವೆಂದರೆ ಪಕ್ಷಾತೀತವಾಗಿ ಇರುವಂಥದ್ದು. ಇಂತಹ ಘಟನೆಗಳಿಗೆ ನಾವು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಹಾರೋಹಳ್ಳಿ ಪೊಲೀಸರು ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಭದ್ರತೆಗಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಇನ್ಸ್ಪೆಕ್ಟರ್ ಮಲ್ಲೇಶ್ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಹಾಗೂ ಅಲ್ಲಿಯೇ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿದ್ದಾರೆ.
ಜೆಡಿಎಸ್ ತಾಲೂಕು ಅಧ್ಯಕ್ಷರಾದ ಕೆ.ಎನ್. ರಾಮು, ಸಬಕೆರೆ ಶಿವಲಿಂಗಪ್ಪ, ಮುಖಂಡರಾದ ಬನ್ನಿಕುಪ್ಪೆರಾಜು, ರವಿಕುಮಾರ್, ಮಲ್ಲಪ್ಪ, ಮರಿಯಪ್ಪ, ರಮ್ಯಾ, ವಸಂತಮ್ಮ, ಚಿಕ್ಕಮಾರಮ್ಮ, ಸಿದ್ದಪ್ಪ, ನಾಗರಾಜು, ತಿಮ್ಮಪ್ಪ, ಚೆನ್ನಣ್ಣ, ಸುರೇಶ್, ಮಹದೇವ್, ಶ್ರೀನಿವಾಸ್, ಸಂದೀಪ್, ಮೂರ್ತಿ, ಚೇತನ್, ಗಿರಿಗೌಡ, ಪಾರ್ವತಮ್ಮ, ಕೃಷ್ಣಮೂರ್ತಿ, ರವೀಶ್ ಇತರರು ಇದ್ದರು.
ಬಿಸಿಲು ಮಾರಮ್ಮ ದೇವಾಲಯ.