ರೆಜಿಮ್ ಚೇಂಜ್ ಕಾಂಗ್ರೆಸ್ ನಲ್ಲಾಗಬೇಕಿದೆ....

* ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದೆ. * ರಾಮನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ
DR CN Manjunath
ಡಾ.ಸಿ.ಎನ್. ಮಂಜುನಾಥ್.
Published on: 

ರಾಮನಗರ: ರೆಜಿಮ್ ಬದಲಾವಣೆ ಎನ್ನುವುದು ಕಾಂಗ್ರೆಸ್‌ನಲ್ಲಿ ಆಗಬೇಕಿದೆಯೇ ಹೊರತು ಕೇಂದ್ರ ಸರ್ಕಾರದಲ್ಲಿ ಅಲ್ಲ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.

ರಾಮನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದಲೂ ದೇಶದ ನಾನಾ ಭಾಗದಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್, ಕೇಂದ್ರದಲ್ಲಿ ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕು ಎನ್ನುವ ನಿಟ್ಟಿನಲ್ಲಿ ಸುಳ್ಳನ್ನು ಪದೇ ಪದೇ ಹೇಳುವ ಮೂಲಕ ದೇಶದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಆದರೆ ಕಾಂಗ್ರೆಸ್‌ನ ನಾಯಕತ್ವದ ಕೊರತೆ ಕಾರಣದಿಂದಾಗಿಯೇ ಅದು ಅಧಿಕಾರ ಕಳೆದುಕೊಂಡಿದೆ ಎನ್ನುವುದನ್ನು ಮರೆತಂತಿದ್ದು, ರೆಜಿಮ್ ಬದಲಾವಣೆ ಎನ್ನುವುದು ಕಾಂಗ್ರೆಸ್‌ನಲ್ಲಿಯೇ ಆಗಬೇಕು. ರಾಹುಲ್ ಗಾಂಧಿ ಬದಲಾವಣೆ ಆಗಬೇಕಿದೆ ಎಂದು ವ್ಯಂಗವಾಡಿದರು.

ಮತ ಪಟ್ಟಿ ಪರಿಷ್ಕರಣೆ ಎನ್ನುವುದು ಇದು ಬಿಜೆಪಿ ಕಾಲದ ಅವಧಿಯಲ್ಲಿ ನಡೆಯುತ್ತಿರುವ ಪ್ರಕ್ರಿಯೆಯಲ್ಲ. ಹಿಂದಿನಿಂದಲೂ ಕಾಲ ಕಾಲಕ್ಕೆ ನಡೆದುಕೊಂಡು ಬಂದಿದೆ. ಕಾಂಗ್ರೆಸ್ ಅವಧಿಯಲ್ಲಿಯೂ ಸಹ ಮತ ಪಟ್ಟಿ ಪರಿಷ್ಕರಣೆ ಆಗಿದೆ.  ಆದರೆ ಎಸ್‌ಐಆರ್ ಮೂಲಕವೇ   ಎನ್‌ಡಿಎ ಅಧಿಕಾರ ಹಿಡಿಯುತ್ತಿದೆ ಎನ್ನುವ ಸುಳ್ಳು ಮಾಹಿತಿಯನ್ನು ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಹರಡಿಸುತ್ತಾ ಬಂದಿವೆ. ಆದರೆ ವಾಸ್ತವದಲ್ಲಿ ಈ ಮಾಹಿತಿಯೇ ಸುಳ್ಳು ಎಂದರು.
ಎಸ್‌ಐ ಆರ್ ಪ್ರಕ್ರಿಯೆಯನ್ನು ದೇಶದ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಸರ್ವಾಧಿಕಾರಿ ನಡೆದುಕೊಂಡು, ಏಕಪಕ್ಷೀಯವಾಗಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಆದರೆ ಇದು ಒಮ್ಮತದ ನಿರ್ಧಾರ ಎನ್ನುವ ಪ್ರಮಾಣ ಪತ್ರವನ್ನು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ ಎಂದು ಮಂಜುನಾಥ್ ಹೇಳಿದರು.