ಕಾಮಗಾರಿ ಸ್ಥಳದಲ್ಲಿ ಇಂಜಿನಿಯರ್ ಹಾಜರಾತಿ ಕಡ್ಡಾಯ: ಅಭಿವೃದ್ಧಿ ಅಪರ ಆಯುಕ್ತ ವೆಂಕಟಾಚಲಪತಿ ಸೂಚನೆ

ಕಾಮಗಾರಿಗಳ ಮೇಲ್ವಿಚಾರಣೆಯಲ್ಲಿ ಯಾವುದೇ ಲೋಪವಾಗದಂತೆ ನಿಯಮಿತವಾಗಿ ಸ್ಥಳ ಪರಿಶೀಲಿಸಿ ನಿಗದಿತ ಮಾನದಂಡ ಹಾಗೂ ಸಮಯಮಿತಿಯಂತೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತ ಆರ್.ವೆಂಕಟಾಚಲಪತಿ ಸೂಚಿಸಿದರು.
ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತ ಆರ್.ವೆಂಕಟಾಚಲಪತಿ ಅವರು ಅಧಿಕಾರಿಗಳ ಸಭೆ ನಡೆಸಿದರು.
ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತ ಆರ್.ವೆಂಕಟಾಚಲಪತಿ ಅವರು ಅಧಿಕಾರಿಗಳ ಸಭೆ ನಡೆಸಿದರು.
Published on: 

ಬೆಂಗಳೂರು: ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಲ್ಲ ಬಗೆಯ ಕಾಮಗಾರಿ ನಡೆಯುವ ಸ್ಥಳದಲ್ಲಿ ಸಂಬಂಧಪಟ್ಟ ಅಭಿಯಂತರರು ಕಡ್ಡಾಯವಾಗಿ ಹಾಜರಿದ್ದು, ಅಭಿವೃಧ್ಧಿ ಕೆಲಸದ ಪ್ರಗತಿ, ಗುಣಮಟ್ಟ ಹಾಗೂ ಅನುಷ್ಠಾನ ಕಾರ್ಯವನ್ನು ಪರಿಶೀಲಿಸಬೇಕು ಎಂದು ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತ ಆರ್.ವೆಂಕಟಾಚಲಪತಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೇಂದ್ರ ಪಾಲಿಕೆ ವ್ಯಾಪ್ತಿಯ ಚಿಕ್ಕಪೇಟೆ ವಿಭಾಗದ ಅಭಿವೃದ್ಧಿ ಕಾಮಗಾರಿ, ಫುಟ್‌ಪಾತ್ ಸ್ವಚ್ಛತೆ, ತ್ಯಾಜ್ಯ ಸಂಗ್ರಹದ ಬ್ಲ್ಯಾಕ್ ಸ್ಪಾಟ್ ಸೇರಿ ಇತರ ವಿಷಯಗಳ ಬಗ್ಗೆ ಸೋಮವಾರ ಹಿರಿಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸಭೆಯಲ್ಲಿ ಅವರು ಈ ನಿದೇರ್ಶವನ್ನು ನೀಡಿದರು.

ಕಾಮಗಾರಿ ವೇಳೆ ಇಂಜಿನಿಯರ್‌ಗಳ ಸ್ಥಳೀಯ ಹಾಜರಾತಿ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಭಿಯಂತರರು ತಮ್ಮ ಲೈವ್ ಲೊಕೇಶನ್ ಅನ್ನು ನಿರ್ದಿಷ್ಟ ವಾಟ್ಸ್‌ಅಪ್ ಗ್ರೂಪ್‌ನಲ್ಲಿ ಹಂಚಿಕೊಳ್ಳಬೇಕು. ಕಾಮಗಾರಿಗಳ ಮೇಲ್ವಿಚಾರಣೆಯಲ್ಲಿ ಯಾವುದೇ ಲೋಪವಾಗದಂತೆ ನಿಯಮಿತವಾಗಿ ಸ್ಥಳ ಪರಿಶೀಲಿಸಿ ನಿಗದಿತ ಮಾನದಂಡ ಹಾಗೂ ಸಮಯಮಿತಿಯಂತೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಖಡಕ್ ಎಚ್ಚರಿಕೆ ರವಾನಿಸಿದರು.

ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿ:

ಗುಣಮಟ್ಟ ನಿಯಂತ್ರಣ ವಿಭಾಗದ ಅಧಿಕಾರಿಗಳು ಕಾಮಗಾರಿ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ, ಬಳಸುತ್ತಿರುವ ಸಾಮಾಗ್ರಿಗಳು ಹಾಗೂ ನಿಗದಿತ ಮಾನದಂಡಗಳ ಪಾಲನೆಯನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕು. ಪ್ರತಿ ಕಾಮಗಾರಿಗೆ ಸಂಬಂಧಿಸಿ ಆ ಕೆಲಸ ಆರಂಭಕ್ಕೂ ಮುನ್ನ ಪ್ರಗತಿಯಲ್ಲಿರುವ ಹಾಗೂ ಕಾಮಗಾರಿ ಪೂರ್ಣಗೊಂಡ ಬಳಿಕದ ಛಾಯಾಚಿತ್ರಗಳನ್ನು ಸಂಬಂಧಪಟ್ಟ ಅಭಿಯಂತರರು ಹಾಗೂ ಗುತ್ತಿಗೆದಾರರು ಕಡ್ಡಾಯವಾಗಿ ದಾಖಲಿಸಿ ಸಲ್ಲಿಸುವಂತೆ ಅವರು ಸೂಚಿಸಿದರು.

ಈ ವೇಳೆ ಕೇಂದ್ರ ಪಾಲಿಕೆಯ ಮುಖ್ಯ ಅಭಿಯಂತರ ವಿಜಯಕುಮಾರ್ ಹರಿದಾಸ್, ಅಧೀಕ್ಷಕ ಅಭಿಯಂತರ ಚಂದ್ರಶೇಖರ್, ಕಾರ್ಯಪಾಲಕ ಅಭಿಯಂತರ ಪ್ರದೀಪ್ ಉಪಸ್ಥಿತರಿದ್ದರು.

ಪಾದಚಾರಿಸ್ನೇಹಿ ಫುಟ್‌ಪಾತ್ ನಿರ್ಮಿಸಿ:

ಪಾಲಿಕೆ ವ್ಯಾಪ್ತಿಯಲ್ಲಿ ಪಾದಚಾರಿಸ್ನೇಹಿ ಫುಟ್‌ಪಾತ್ ನಿರ್ಮಾಣಕ್ಕೆ ಕ್ರಮ ವಹಿಸಬೇಕು. ತ್ಯಾಜ್ಯ ಸಂಗ್ರಹವಾಗುವ ಬ್ಲಾಕ್‌ಸ್ಪಾಟ್‌ಗಳ ನಿರ್ಮೂಲನೆ, ರಸ್ತೆ ಬದಿಯಲ್ಲಿ ಅನಾಥವಾಗಿ ನಿಲ್ಲಿಸಿರುವ ವಾಹನಗಳ ತೆರವು ಹಾಗೂ ಖಾಲಿ ಸೈಟ್‌ಗಳ ಸ್ವಚ್ಛತೆ ಸೇರಿ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಮುಖ್ಯವಾಗಿ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಚಿಕ್ಕಪೇಟೆ ವಿಭಾಗದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ವೆಂಕಟಾಚಲಪತಿ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net