

ಬೆಂಗಳೂರು: ಒಂದು ಸಾವಿರ ಕೋಟಿ ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಸೈಬರ್ ಕಮಾಂಡ್ ಅಧಿಕಾರಿಗಳ ತಂಡ ತಮಿಳುನಾಡಿನ ಎರಡು ಕಡೆ ದಾಳಿ ನಡೆಸಿ 10 ಇ-ಸಿಮ್ ಬಾಕ್ಸ್ ಸೇರಿ ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ.
ದೂರ ಸಂಪರ್ಕ ಇಲಾಖೆಯೊಂದಿಗೆ ಜಂಟಿ ಕಾರ್ಯಚರಣೆಗೆ ಮುಂದಾಗಿರುವ ಅಧಿಕಾರಿಗಳು, ತಮಿಳುನಾಡಿನ ತಿರುಚ್ಚಿರಾಪಳ್ಳಿ ಮತ್ತು ತಂಜಾವೂರು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎರಡು ಹೆಚ್ಚುವರಿ ಸಿಮ್ ಫಾರ್ಮ್ ಕೇಂದ್ರಗಳನ್ನು ಪತ್ತೆಹಚ್ಚಿದ್ದಾರೆ. ಈ ಕೇಂದ್ರಗಳಿಂದ ಒಟ್ಟು 10 ಇ-ಸಿಮ್ ಡಿವೈಸಸ್, ಸಿಮ್ ಬಾಕ್ಸೃ್ ಸಾಧನ, ವಂಚನೆಗೆ ಬಳಕೆ ಮಾಡುತ್ತಿದ್ದ ಇತರೆ ತಂತ್ರಜ್ಞಾನ ಆಧಾರಿತ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇಲ್ಲಿಂದಲೂ ನೂರಾರು ಕೋಟಿ ರೂ. ವಂಚನೆಯಾಗಿರುವ ಸಾಧ್ಯತೆ ಇದೆ ಎಂದು ಸೈಬರ್ ಕಮಾಂಡ್ ಘಟಕದ ಡಿಜಿಪಿ ಡಾ.ಪ್ರಣವ್ ಮೊಹಾಂತಿ ತಿಳಿಸಿದ್ದಾರೆ.
ನಗರದ ವೈಟ್‌ಫೀಲ್ಡ್ ವ್ಯಾಪ್ತಿಯ ಪಟ್ಟಂದೂರು ಅಗ್ರಹಾರ, ಕಾಡುಗೋಡಿ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ಅ.22 ರಂದು ನಡೆದ ದಾವಳಿ ವೇಳೆ 320ಕ್ಕೂ ಹೆಚ್ಚು ನಕಲಿ ಸಿಮ್, ಇ-ಡಿವೈಸಿಸ್‌ಗಳನ್ನು ವಶಕ್ಕೆ ಪಡೆದು, ಮಹಾರಾಷ್ಟ್ರ ಮೂಲದ ನಾಲ್ವರು ಸೈಬರ್ ವಂಚಕರನ್ನು ಬಂಧಿಸಿದ್ದರು. ದೇಶ ಸೇರಿ ವಿದೇದಲ್ಲಿನ ಜನಸಾಮಾನ್ಯರಿಗೆ ಡಿಜಿಟಲ್ ಅರೆಸ್ಟ್ ಹಾಗೂ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಆಮಿಷವೊಡ್ಡಿ 1 ಸಾವಿರ ಕೋಟಿಗೂ ಹೆಚ್ಚು ವಂಚನೆ ಮಾಡಿದ್ದರು. ಅದೇ ಪ್ರಕರಣದ ಜಾಡು ಹಿಡಿದು ದೇಶದ ವಿವಿಧ ರಾಜ್ಯಗಳಲ್ಲಿ ಪರಿಶೀಲನೆ ನಡೆಸುತ್ತಿರುವ ಸೈಬರ್ ಕಮಾಂಡ್ ಘಟಕದ ಅಧಿಕಾರಿಗಳು ತಮೀಳುನಾಡಿನ ಎರಡು ಕೇಂದ್ರಗಳಲ್ಲಿ ಅಪಾರ ಪ್ರಮಾಣದ ತಾಂತ್ರಿಕ ವಸ್ತುಗಳನ್ನು ಪತ್ತೆ ಹಚ್ಚಿದ್ದಾರೆ.
ಬೆಂಗಳೂರಿನಲ್ಲಿ ಪತ್ತೆಯಾದ ಜಾಲಕ್ಕೂ ತಮಿಳುನಾಡಿನ ಕೇಂದ್ರಗಳಿಗೂ ಇರುವ ಸಂಪರ್ಕ, ವಂಚನೆಯ ಹಿಂದಿರುವ ಆರೋಪಿಗಳ ಪತ್ತೆ ಕುರಿತು ತನಿಖೆ ಕೈಗೊಂಡಿದ್ದಾರೆ. ಈ ಜಾಲವು ದೇಶದ ವಿವಿಧ ರಾಜ್ಯಗಳಲ್ಲೂ ಹರಡಿರುವ ಸಾಧ್ಯತೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಲ ವಿಸ್ತರಣೆ
ಕರ್ನಾಟಕ, ತಮಿಳುನಾಡು ಅಷ್ಟೇ ಅಲ್ಲದೇ ಈ ಜಾಲವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಿದೆ. ಆದ್ದರಿಂದ ಸೈಬರ್ ವಂಚಕರ ಹೆಸರು, ವಿಳಾಸ ಹಾಗೂ ಡಿಜಿಟಲ್ ವಂಚನೆಯ ಯಾವ ರೀತಿ ಮಾಡುತ್ತಿದ್ದರು ಎಂಬ ಇತ್ಯಾದಿ ವಿಷಯಗಳನ್ನು ಅಧಿಕಾರಿಗಳು ಬಹಿರಂಗ ಪಡಿಸಿಲ್ಲ. ನೂರಾರು ನಕಲಿ ಸಿಮ್‌ಗಳು ಕಾರ್ಯನಿರ್ವಹಿಸುವಂತೆ ಸಿಮ್ ಬಾಕ್‌ಗಳು ಕಾರ್ಯನಿರ್ವಹಿಸುತ್ತಿರುವುದು ಮತ್ತು ಇ-ಸಿಮ್ ಪ್ರೊಫೈಲ್‌ಗಳನ್ನು ಹೇಗೆ ಬಳಸಲಾಗುತ್ತಿತ್ತು ಎಂಬುದರ ಕುರಿತು ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.