

ಬೆಂಗಳೂರು: ರಾಜ್ಯಾದ್ಯಂತ ಕುಡಿಯುವ ನೀರಿನ ಬಾಟಲಿಗಳ (ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್) ತಯಾರಿಕಾ ಘಟಕಗಳಲ್ಲಿ ಪರಿಶೀಲನೆ ಸಂಬಂಧ ಎರಡು ದಿನಗಳ ವಿಶೇಷ ಕಾರ್ಯಾಚರಣೆ ಆರಂಭಿಸಿರುವ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ 24 ಘಟಕಗಳಿಗೆ ನೋಟಿಸ್ ಜಾರಿ ಮಾಡಿದೆ.
ಗುರುವಾರ ಕೈಗೊಂಡ ವಿಶೇಷ ಕಾರ್ಯಾಚರಣೆ ವೇಳೆ ಹಲವು ಘಟಕಗಳಲ್ಲಿ ನೈರ್ಮಲ್ಯದ ಕೊರತೆ, ಸಿಬ್ಬಂದಿಗೆ ವೈದ್ಯಕೀಯ ಪ್ರಮಾಣಪತ್ರ ಇಲ್ಲದಿರುವುದು, ತಪ್ಪು ಲೇಬಲ್ ಮತ್ತು ಕೀಟ ನಿಯಂತ್ರಣ ಪ್ರಮಾಣಪತ್ರ ಇಲ್ಲದಿರುವುದು ಪತ್ತೆಯಾಗಿದೆ.
ಮೈಸೂರು ಮತ್ತು ದಾವಣಗೆರೆಯ 3 ಘಟಕಗಳಲ್ಲಿ ತಪ್ಪು ಲೇಬಲ್ ಇರುವ ನೀರಿನ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳದ ಘಟಕವನ್ನು ಮುಚ್ಚಿಸಲಾಗಿದೆ. ನಿಯಮ ಪಾಲಿಸದ ಘಟಕಗಳಿಗೆ ನೋಟಿಸ್ ನೀಡಲಾಗಿದೆ. ಇದೇ ವೇಳೆ 32 ನೀರಿನ ಮಾದರಿಗಳನ್ನು ಸಂಗ್ರಹಿಸಿ, ಗುಣಮಟ್ಟ ಪರೀಕ್ಷೆಗಾಗಿ ಸರ್ಕಾರಿ ಆಹಾರ ಪ್ರಯೋಗಾಲಯಗಳಿಗೆ ಪರೀಕ್ಷೆಗೆ ಕಳುಹಿಸಲಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅನ್ವಯ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ನಿಗದಿತ ಮಾನದಂಡಗಳನ್ನು ಉಲ್ಲಂಘಿಸುವ ಯಾವುದೇ ಕುಡಿಯುವ ನೀರಿನ ಬಾಟಲಿಗಳ ತಯಾರಿಕಾ ಘಟಕಗಳ ವಿರುದ್ಧ ನಿರಂತರ ತಪಾಸಣೆ ನಡೆಸಲಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ತಂಡ ರಚನೆ:
ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ನಿರ್ದೇಶನದ ಮೇರೆಗೆ ಇಲಾಖೆ ರಾಜ್ಯಾದ್ಯಂತ ಕುಡಿಯುವ ನೀರಿನ ಬಾಟಲಿಗಳ (ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್) ತಯಾರಿಕಾ ಘಟಕಗಳಲ್ಲಿ ಗುರುವಾರ ಮತ್ತು ಶುಕ್ರವಾರ ವಿಶೇಷ ತಪಾಸಣಾ ಕಾರ್ಯಾಚರಣೆಯನ್ನು ಕೈಗೊಂಡಿದೆ. ಇದಕ್ಕಾಗಿ ಇಲಾಖೆಯ 23 ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಿ ವಿವಿಧ ಜಿಲ್ಲೆಗಳಿಗೆ ನಿಯೋಜಿಸಲಾಗಿದೆ.
ಕುಡಿಯುವ ನೀರಿನ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಜನರ ಆರೋಗ್ಯದ ಜೊತೆ ಆಟವಾಡುವವರು ಎಷ್ಟೇ ದೊಡ್ಡವರಾಗಿರಲಿ,ಯಾರೇ ಆಗಿರಲಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಇಂತಹ ತಪಾಸಣೆಗಳು ಮುಂದೆಯೂ ನಿರಂತರವಾಗಿ ನಡೆಯಲಿವೆ. ಸಾರ್ವಜನಿಕರು ಬಾಟಲಿ ನೀರು ಖರೀದಿಸುವಾಗ ಅದರ ಮೇಲೆ ಎ್ಎಸ್ಎಸ್ಎಐ ಪರವಾನಗಿ ಸಂಖ್ಯೆ, ಐಎಸ್ಐ ಗುರುತು, ತಯಾರಿಕೆ ದಿನಾಂಕ ಮತ್ತು ಸೀಲ್ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಸಂಶಯ ಬಂದರೆ ಆಹಾರ ಸುರಕ್ಷತೆ ಇಲಾಖೆಗೆ ತಿಳಿಸಬೇಕು. - ಆರೋಗ್ಯ ಸಚಿವ ಯು.ಟಿ. ಖಾದರ್