ರಸ್ತೆ ಸಮಸ್ಯೆ ಪತ್ತೆಗೆ ಎಐ ತಂತ್ರಜ್ಞಾನ ಬಳಕೆ

road-problems
road-problems
Published on

ಪ್ರಮುಖ ಮುಖ್ಯಾಂಶಗಳು

  • ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್‌ರಿಂದ ಪ್ರಾತ್ಯಕ್ಷಿಕೆ
  • ಫುಟ್‌ಪಾತ್ ಒತ್ತುವರಿ, ತ್ಯಾಜ್ಯ ಸಮಸ್ಯೆ ಪರಿಹಾರ ಬಳಕೆಗೂ ಚಿಂತನೆ
ಬೆಂಗಳೂರು: ರಸ್ತೆಗಳಲ್ಲಿ ಕಂಡುಬರುವ ವಿವಿಧ ಸಾರ್ವಜನಿಕ ಸಮಸ್ಯೆಗಳನ್ನು ತ್ವರಿತವಾಗಿ ಗುರುತಿಸಿ ಬಗೆಹರಿಸಲು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಅತ್ಯಾಧುನಿಕ ವಾಹನ ತಪಾಸಣಾ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ ಎಂದು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ತಿಳಿಸಿದರು.
ದಕ್ಷಿಣ ಪಾಲಿಕೆ ವ್ಯಾಪ್ತಿಯ ಒಟ್ಟು 311 ರಸ್ತೆ ಜಾಲದ ಪೈಕಿ ಪ್ರಾಯೋಗಿಕ ಅಧ್ಯಯನಕ್ಕಾಗಿ 75 ಕಿ.ಮೀ. ಉದ್ದದ ರಸ್ತೆಯನ್ನು ಆಯ್ಕೆ ಮಾಡಿಕೊಂಡು ಸಮೀಕ್ಷೆ ನಡೆಸಲಾಗುತ್ತಿದೆ. ಈ ಯೋಜನೆಯು ನಿರೀಕ್ಷಿತ ಫಲಿತಾಂಶ ನೀಡಿದಲ್ಲಿ, ಮುಂಬರುವ ದಿನಗಳಲ್ಲಿ ಪಾಲಿಕೆಯ ಎಲ್ಲ ಪ್ರದೇಶಗಳಿಗೂ ವಿಸ್ತರಿಸಲಾಗುವುದು. ಜತೆಗೆ ಆಸ್ತಿ ತೆರಿಗೆ ಪರಿಷ್ಕರಣೆ ಮತ್ತು ಕಟ್ಟಡ ನಿಯಮಗಳ ಉಲ್ಲಂಘನೆ ಪತ್ತೆಗೂ ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಆಯುಕ್ತರು ಮಂಗಳವಾರ ತಿಳಿಸಿದರು.

ಎಐ ತಂತ್ರಜ್ಞಾನದ ಕಾರ್ಯವೈಖರಿ ಹೇಗೆ?:

ಎಐ ಕ್ಯಾಮರಾ ಹಾಗೂ ಜಿಪಿಎಸ್ ಉಪಕರಣಗಳನ್ನು ಅಳವಡಿಸಲಾದ ವಾಹನವು ರಸ್ತೆಗಳಲ್ಲಿ ಸಂಚರಿಸುವಾಗ ವಿಡಿಯೋ ಹಾಗೂ ಛಾಯಾಚಿತ್ರಗಳನ್ನು ಸೆರೆಹಿಡಿಯುತ್ತದೆ. ಈ ದೃಶ್ಯಾವಳಿ ವಿಶ್ಲೇಷಿಸುವ ಎಐ ತಂತ್ರಜ್ಞಾನವು ರಸ್ತೆಯಲ್ಲಿನ ಗುಂಡಿಗಳು, ಫುಟ್‌ಪಾತ್ ಒತ್ತುವರಿ, ಕಟ್ಟಡ ತ್ಯಾಜ್ಯ, ಅಪಾಯಕಾರಿಯಾಗಿ ನೇತಾಡುವ ತಂತಿಗಳು ಹಾಗೂ ಒಡೆದ ಮ್ಯಾನ್‌ಹೋಲ್ ಸಮಸ್ಯೆಗಳನ್ನು ಗುರುತಿಸಿ ವರ್ಗೀಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ನೇರವಾಗಿ ಮಾಹಿತಿ ಒದಗಿಸಲಾಗುತ್ತದೆ.

ಬೇಸ್‌ಮೆಂಟ್ ದುರುಪಯೋಗ, ಒತ್ತುವರಿ ಪತ್ತೆಗೆ ಬಳಕೆ:

ಕಟ್ಟಡಗಳ ಬೇಸ್‌ಮೆಂಟ್‌ಗಳನ್ನು ಕಡ್ಡಾಯವಾಗಿ ವಾಹನಗಳ ಪಾರ್ಕಿಂಗ್‌ಗೆ ಮಾತ್ರ ಬಳಸಬೇಕಾಗಿದೆ. ಆದರೆ, ಹಲವೆಡೆ ನಿಯಮಬಾಹಿರವಾಗಿ ವಾಣಿಜ್ಯ ಮಳಿಗೆಗಳನ್ನಾಗಿ ಪರಿವರ್ತಿಸಿರುವುದನ್ನು ಈ ಎಐ ಕ್ಯಾಮರಾಗಳು ಸ್ಪಷ್ಟವಾಗಿ ಸೆರೆಹಿಡಿಯಲಿವೆ. ಇದಲ್ಲದೆ ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿಕೊಂಡಿರುವ ಅನಧಿಕೃತ ಅಂಗಡಿಗಳು, ಜಾಹೀರಾತು ಫಲಕ ಹಾಗೂ ಬೆಸ್ಕಾಂ ಕಂಬಗಳನ್ನು ಗುರುತಿಸಿ ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ ಎಂದು ಆಯುಕ್ತ ರಮೇಶ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net