ವಿವಾಹಿತ ಮಹಿಳೆಯೊಂದಿಗೆ ಸಂಬಂಧ, ಪ್ರೀತಿ ನಿರಾಕರಿಸಿದ್ದಕ್ಕೆ ಬೇಸರ; ನಡುರಸ್ತೆಯಲ್ಲೇ ಬೆಂಕಿ ಹಚ್ಚಿಕೊಂಡ ಯುವಕ..Bengaluru

ವಿವಾಹಿತ ಮಹಿಳೆಯೊಂದಿಗೆ ಸಂಬಂಧ, ಪ್ರೀತಿ ನಿರಾಕರಿಸಿದ್ದಕ್ಕೆ ಬೇಸರ; ನಡುರಸ್ತೆಯಲ್ಲೇ ಬೆಂಕಿ ಹಚ್ಚಿಕೊಂಡ ಯುವಕ..Bengaluru
Published on: 
  • ಪ್ರೀತಿ ನಿರಾಕರಿಸಿದ್ದಕ್ಕೆ ಬೇಸರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ.

  • ಮಾದನಾಯಕನ ಹಳ್ಳಿಯಲ್ಲಿ 28 ವರ್ಷದ ಪವನ್​ ಎಂಬ ಹೆಸರಿನ ಯುವಕ ಮೃತ.

  • ಗಿರಿನಗರದ ವೀರಭದ್ರನಗರದಲ್ಲಿ ಗುಜರಿ ವ್ಯಾಪಾರಿ ಕೊಲೆಗೆ ಯತ್ನ

ಬೆಂಗಳೂರು: ನಗರದ ಎರಡು ಪ್ರದೇಶದಲ್ಲಿ ಅಘಾತಕಾರಿ ಘಟನೆಗಳು ಬೆಳಕಿಗೆ ಬಂದಿದೆ. ಪ್ರೇಮ ವೈಫಲ್ಯದಿಂದ ನೊಂದ ಯುವಕನೊಬ್ಬ ಬಪೆಟ್ರೋಲ್ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮತ್ತೊಂದು ಘಟನೆಯಲ್ಲಿ ಗುಜರಿ ಅಂಗಡಿಯ ವ್ಯಾಪಾರಿಯೊಬ್ಬ ಹಿಗ್ಗಾಮುಗ್ಗ ದೌರ್ಜನ್ಯಕ್ಕೆ ಒಳಗಾದ ಪ್ರಕರಣ ದಾಖಲಾಗಿದೆ.

ಪ್ರೀತಿಸದಿದ್ದಕ್ಕೆ ನೊಂದು ಆತ್ಮಹತ್ಯೆ

ಮಾದನಾಯಕನಹಳ್ಳಿ ಸಮೀಪವಿರುವ ಹನುಮಂತೇಗೌಡನಪಾಳ್ಯದಲ್ಲಿ 28 ವರ್ಷದ ಯುವಕನೊಬ್ಬ ರಸ್ತೆಯಲ್ಲೇ ತನ್ನ ಮೇಲೆಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವಕನನ್ನು ಹಿಂದೂಪುರ ಮೂಲದ ಪವನ್ ಎಂದು ಗುರುತಿಸಲಾಗಿದೆ. ಆತ ವಿವಾಹಿತ ಮಹಿಳೆಯೊಂದಿಗೆ ನಂಟು ಬೆಳೆಸಿಕೊಂಡಿದ್ದ. ಆಕೆ ಇತ್ತೀಚೆಗೆ ಪತಿಯಿಂದ ದೂರವಾಗಿ ಪ್ರತ್ಯೇಕ ಮನೆ ಮಾಡಿಕೊಂಡು ವಾಸವಾಗಿದ್ದರು ಎಂದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.

ಎಲ್ಲವೂ ಚೆನ್ನಾಗಿದೆ ಎನ್ನುವಾಗ ಮಹಿಳೆ ಪವನ್​​​ ಜೊತೆ ಮಾತನಾಡೋದನ್ನೇ ನಿಲ್ಲಿಸಿದ್ದಾಳೆ. ಇದರಿಂದ ಬೇಸರಗೊಂಡ ಆತ ಮನನೊಂದು ರಸ್ತೆಯಲ್ಲೇ ತನ್ನ ಮೇಲೆ ಪೆಟ್ರೋಲ್​​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ತೀವ್ರವಾಗಿ ಸುಟ್ಟುಹೋಗಿದ್ದ ಆತನನ್ನು ರಕ್ಷಿಸಲು ಯತ್ನಿಸಿದರೂ, ಗಾಯಗಳು ಗಂಭೀರವಾಗಿದ್ದರಿಂದ ಆತ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ.

ಗಿರಿನಗರದಲ್ಲಿ ಅಘಾತಕಾರಿ ಘಟನೆ

ದಕ್ಷಿಣ ಬೆಂಗಳೂರಿನ ಗಿರಿನಗರದ ವೀರಭದ್ರನಗರದಲ್ಲಿ ಗುಜರಿ ವ್ಯಾಪಾರಿ ಮೊಹಮ್ಮದ್ ಎಂಬಾತ ಮೇಲೆ ಆತನ ಸಹೋದ್ಯೋಗಿಗಳು ಕೈ-ಕಾಲುಗಳನ್ನು ಕಟ್ಟಿಹಾಕಿ ಜೀವಂತವಾಗಿ ಸುಟ್ಟು ಹಾಕಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.

ಹಲ್ಲೆಕೋರರು ಮೊಹಮ್ಮದ್ ಅವರ ಕೈ ಹಾಗೂ ಕಾಲುಗಳನ್ನು ಹಗ್ಗದಿಂದ ಕಟ್ಟಿಹಾಕಿ, ನಂತರ ಅವರ ಮೇಲೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಮೊಹಮ್ಮದ್ ಗಂಭೀರ ಸ್ವರೂಪದ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಬರ್ನ್ಸ್ ವಾರ್ಡ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ, (ಏಜೆನ್ಸೀಸ್).