

ಬೆಂಗಳೂರು: ನಗರದ ನೈಸ್ ರಸ್ತೆ ಹಾಗೂ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಪ್ರತ್ಯೆಕ ಅಪಘಾತಗಳಲ್ಲಿ ಚಾಲಕ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.
ನೈಸ್ ರಸ್ತೆಯ ಬನ್ನೆರುಘಟ್ಟ ಟೋಲ್ ಬಳಿ ಅಪರಿಚಿತ ವಾಹನಕ್ಕೆ ಸರಕು ಸಾಗಣೆ ವಾಹನ ಡಿಕ್ಕಿಯಾಗಿ ಎಲೆಕ್ಟ್ರಾನಿಕ್ಸ್‌ಸಿಟಿಯ ಗಣೇಶ್‌ಕುಮಾರ್ (19) ಎಂಬುವರು ಸಾವನ್ನಪ್ಪಿದ್ದಾರೆ.
ಗಣೇಶ್ ಸರಕು ಸಾಗಣೆ ವಾಹನದ ಚಾಲಕರಾಗಿದ್ದರು. ಸರಕು ತುಂಬಿಕೊಂಡು ಹೆಬ್ಬಗೋಡಿ ಕಡೆಗೆ ಹೋಗುತ್ತಿದ್ದ ಅವರು ನಿಯಂತ್ರಣ ತಪ್ಪಿ ಮತ್ತೊಂದು ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ. ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಅವರು, ಚಿಕಿತ್ಸೆ ಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು, ಈ ಸಂಬಂಧ ತಲಘಟ್ಟಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಚ್‌ಎಸ್‌ಆರ್ ಲೇಔಟ್ 14ನೇ ಮುಖ್ಯ ರಸ್ತೆಯಲ್ಲಿ ಆಟೊಗೆ ಬೈಕ್ ಡಿಕ್ಕಿಯಾಗಿ ಆಟೊದಲ್ಲಿ ಪ್ರಯಾಣಿಸುತ್ತಿದ್ದ ಬಿಹಾರದ ಸಾಹಿತ್ಯರಾಜ್ (26) ಎಂಬುವರು ಮೃತಪಟ್ಟಿದ್ದಾರೆ.
ನಗರದ ದೊಮ್ಮಲೂರಿನಲ್ಲಿ ವಾಸವಾಗಿದ್ದ ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಪಾನಮತ್ತರಾಗಿದ್ದ ಸಾಹಿತ್ಯರಾಜ್, ಅಗ್ರಿಗೇಟರ್ ಕಂಪನಿಯ ಆ್ಯಪ್‌ನಲ್ಲಿ ಬಾಡಿಗೆಗೆ ಆಟೊ ಬುಕ್ಕಿಂಗ್ ಮಾಡಿಕೊಂಡು ಮನೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಅವರು ಮದ್ಯದ ನಶೆಯಲ್ಲಿ ಆಟೊದಿಂದ ಹೊರಗೆ ಕತ್ತು ಹಾಕಿದ್ದರು. ಅದೇ ವೇಳೆಗೆ ಎದುರುಗಡೆಯಿಂದ ವೇಗವಾಗಿ ಬಂದ ಬೈಕ್, ಅವರ ಕತ್ತಿನ ಭಾಗಕ್ಕೆ ಡಿಕ್ಕಿಯಾಗಿದೆ. ನಂತರ ಆಟೋಗೂ ಬೈಕ್ ತಾಗಿದೆ.
ಘಟನೆಯಲ್ಲಿ ಅವರ ಕುತ್ತಿಗೆ ಭಾಗಕ್ಕೆ ತೀವ್ರ ಗಾಯವಾಗಿ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಆಟೊ ಚಾಲಕ ಹಾಗೂ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆಟೊ ಮತ್ತು ಬೈಕ್ ಜಖಂಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಎಚ್‌ಎಸ್‌ಆರ್ ಲೇಔಟ್ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.