ಹೈ ಟೆನ್ಶನ್ ವಿದ್ಯುತ್ ತಂತಿ ತಗುಲು ಇಬ್ಬರು ಮಕ್ಕಳು ಗಂಭೀರ ಗಾಯ

high-tension electric wire
high-tension electric wire
Published on: 

ಬೆಂಗಳೂರು: ಮನೆ ಮೇಲ್ಛಾವಣಿ ಮೇಲೆ ಹಾದು ಹೋಗಿದ್ದ ಹೈಟೆನ್ಶನ್ ವಿದ್ಯುತ್ ತಂತಿ ಅಕ್ಕ-ತಮ್ಮ ಇಬ್ಬರು ಗಂಭೀರವಾಗಿ ಗಾಯಗೊಂಡಿರುವುದು ರಾಜಾನುಕುಂಟೆ ಸಮೀಪದ ಅದ್ದೇವಿಶ್ವನಾಥಪುರದಲ್ಲಿ ನಡೆದಿದೆ.

ಅದ್ದೇವಿಶ್ವನಾಥಪುರ ನಿವಾಸಿ ಕೊಟ್ರೇಶಿ ಮತ್ತು ಸುಧಾ ದಂಪತಿ ಪುತ್ರಿ ಸಾನ್ವಿ(13) ಮತ್ತು ಆಕೆಯ ಸಹೋದರ ಅಯಾನ್(5) ಗಾಯಗೊಂಡಿದ್ದಾರೆ. ಇಬ್ಬರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗೆ ಮನೆ ಮಾಲೀಕರು ಮತ್ತು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಮಕ್ಕಳ ಪೋಷಕರು ದೂರು ನೀಡಿದ ಮೇರೆಗೆ ರಾಜಾನುಕುಂಟೆ ಪೊಲೀಸ್ ಪ್ರಕರಣ ದಾಖಲಾಗಿದೆ.

ಕೊಟ್ರೇಶ್ ಮತ್ತು ಸುಧಾ ದಂಪತಿ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ದಂಪತಿಗೆ ಸಾನ್ವಿ ಮತ್ತು ಅಯಾನ್ ಎಂಬ ಮಕ್ಕಳು ಇದ್ದಾರೆ. ದಂಪತಿ ಅದ್ದೇವಿಶ್ವನಾಥಪುರದಲ್ಲಿ 2ನೇ ಮಹಡಿಯಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಕಳೆದ ತಿಂಗಳು ಅಕ್ಕ-ತಮ್ಮ ಮನೆ ಮುಂಭಾಗ ಆಟವಾಡುತ್ತಿದ್ದರು. ಕಟ್ಟಡ ನಿರ್ಮಾಣಕ್ಕೆ ಬಳಸುವ ಲೋಹದ ಅಳತೆ ಟೇಪ್‌ನ್ನು ಅಯಾನ್ ಹೈಟೆನ್ಶನ್ ವೈಯರ್ ಮೇಲೆ ಎಸೆದಿದ್ದಾನೆ. ಪರಿಣಾಮ ವಿದ್ಯುತ್ ಪ್ರವಹಿಸಿ, ಆತ ಕೆಳಗೆ ಬಿದ್ದಿದ್ದಾನೆ. ಆತನನ್ನು ಎತ್ತಲು ಹೋದ ಸಾನ್ವಿಗೂ ವಿದ್ಯುತ್ ಶಾಕ್ ಹೊಡೆದು ಬಲಗೈಗೆ ಗಂಭೀರ ಗಾಯವಾಗಿದೆ.

ಮತ್ತೊಂದೆಡೆ ಅದೇ ವೇಳೆ ಅವರ ತಾಯಿ ಸುಧಾ ಮನೆ ಮುಂದೆ ದ್ವಿಚಕ್ರ ವಾಹನ ಪಾರ್ಕ್ ಮಾಡುವಾಗಲೇ ಘಟನೆ ನಡೆದಿದೆ. ಆಕೆ ಕೂಡಲೇ ಮಕ್ಕಳ ನೆರವಿಗೆ ಬರುವಷ್ಟರಲ್ಲಿ ಘಟನೆ ನಡೆದಿದೆ. ಇಬ್ಬರನ್ನು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ಕೊಟ್ರೇಶ್ ದಂಪತಿ ಎರಡೂವರೆ ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದು ಅದ್ದೇವಿಶ್ವನಾಥಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮನೆ ಮುಂಭಾಗ ಹೈಟೆನ್ಶನ್ ವೈಯರ್ ಹಾದು ಹೋಗಿರುವ ಬಗ್ಗೆ ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದು, ವೈಯರ್‌ಗೆ ಪ್ಲಾಸ್ಟಿಕ್ ಹೊದಿಕೆ ಹಾಕುವಂತೆ ಮನವಿ ಮಾಡಿದ್ದರು. ಜತೆಗೆ ಬೆಸ್ಕಾಂ ಅಧಿಕಾರಿಗಳಿಗೂ ದೂರು ನೀಡಿದ್ದರು. ಆದರೆ, ಇಬ್ಬರು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಸಂಬಂಧ ಇಬ್ಬರ ವಿರುದ್ಧ ಕೊಟ್ರೇಶಿ ದೂರು ನೀಡಿದ್ದಾರೆ. ಜತೆಗೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಸಂಬಂಧ ಸೂಕ್ತ ಪರಿಹಾರ ನೀಡುವಂತೆಯೂ ಕೋರಿದ್ದಾರೆ. ಘಟನೆ ಸಂಬಂಧ ರಾಜಾನುಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net