ಕಾರವಾರ/ಸಿದ್ದಾಪುರ: ನಿರ್ಮಾಪಕ ಎಂದು ಹೇಳಿಕೊಂಡು ಬೆಂಗಳೂರಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ವ್ಯಕ್ತಿಯೊಬ್ಬ ಸಿದ್ದಾಪುರದಲ್ಲಿ ಮನೆ ಕಳ್ಳತನದ ಆರೋಪಿ ಎಂಬ ಅಂಶ ಬೆಳಕಿಗೆ ಬಂದಿದೆ.
ಹಾಸನ ಮೂಲದ ಹರ್ಷವಧ ವೆಂಕಟೇಶ ಎಂಬ 29 ವರ್ಷದ ವ್ಯಕ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಠಾಣೆಯ ಪೊಲೀಸರು ಡಿಸೆಂಬರ್ 12 ರಂದು ಕೋರ್ಟ್ ವಾರಂಟ್ ಆಧಾರದ ಮೇಲೆ ಬಂಧಿಸಿದ್ದರು. ಆತ ಬೆಂಗಳೂರಿನಲ್ಲಿ `ವರ್ಧನ್ ಸಿನಿಮಾಸ್ ಕಂಪನಿ' ಮಾಲೀಕ ಹರ್ಷವರ್ಧನ ಎಂಬುದು ಖಚಿತವಾಗಿದೆ.
2017 ರಲ್ಲಿ ಸಿದ್ದಾಪುರ ಹಲಗೇರಿ ಸಮೀಪ ಕುಂಬಾರಕುಳಿ ಎಂಬ ಮನೆಯ ಬಾಗಿಲಿನ ಬೀಗ ಮುರಿದು ಬಂಗಾರವನ್ನು ಕಳ್ಳತನ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಸಿದಂತೆ ಮಂಜುನಾಥ ಗುಂಡ್ಲಪೇಟೆ ಹಾಗೂ ಹರ್ಷವರ್ಧನ ಎಂಬ ಇಬ್ಬರನ್ನು ಸಿದ್ದಾಪುರ ಠಾಣೆ ಪೊಲೀಸರು 2019 ರಲ್ಲಿ ಬಂಧಿಸಿದ್ದರು. ಆಗ ಜಾಮೀನು ಪಡೆದು ಹೋದ ಹರ್ಷವರ್ಧನ ಮತ್ತೆ ವಿಚಾರಣೆಗೆ ಮರಳಿರಲಿಲ್ಲ ಎನ್ನಲಾಗಿದೆ.
ಸಿದ್ದಾಪುರ ಜೆಎಂಎಫ್‌ಸಿ ನ್ಯಾಯಾಲಯದಿಂದ 10 ಬಾರಿ ವಾರಂಟ್ ಜಾರಿ ಮಾಡಲಾಗಿತ್ತು. ಆದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಆತನನ್ನು ಹುಡುಕಿ ತರುವಂತೆ ನ್ಯಾಯಾಲಯ ಆದೇಶಿಸಿತ್ತು. ಪೊಲೀಸರು ವಿಶೇಷ ತಂಡ ರಚಿಸಿ ಹರ್ಷವರ್ಧನ್‌ನನ್ನು ಹುಡುಕಾಟ ನಡೆಸಿದ್ದರು. ಇನ್ಸ್ಪೆಕ್ಟರ್ ಸೀತಾರಾಮ ಜೆ.ಪಿ ಹಾಗೂ ಪಿಎಸ್‌ಐ ಶಾಂತಿನಾಥ ಪಾಸಾನೆ ಅವರ ತಂಡವು ಹರ್ಷವರ್ಧನ್‌ನನ್ನು ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿತ್ತು.
ಹರ್ಷವರ್ಧನ ವಿರುದ್ಧ ಮೈಸೂರು, ಉಡುಪಿ ಸೇರಿ ರಾಜ್ಯದ ಇನ್ನೂ ಹಲವೆಡೆ ವಾರಂಟ್ ಜಾರಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಿದ್ದಾಪುರ ನ್ಯಾಯಾಲಯ ಹರ್ಷವರ್ಧನ್‌ಗೆ ಜಾಮೀನು ನೀಡಿದ್ದು, ಇಲ್ಲಿಂದ ಹೋದ ಹರ್ಷವರ್ಧನ ಬೆಂಗಳೂರಿನಲ್ಲಿ ಕಿಡ್ನಾಪ್ ಪ್ರಕರಣವೊಂದರಲ್ಲಿ ಸಿಕ್ಕಿಕೊಂಡಿದ್ದಾನೆ.
ಪತ್ನಿ ಅಪಹರಣ ಪ್ರಕರಣ
ಹರ್ಷವರ್ಧನ `ನಿನ್ನಲ್ಲೇನೋ ಹೇಳಬೇಕು' ಎಂಬ ಚಿತ್ರ ನಿರ್ಮಾಣ ಮಾಡಿದ್ದ.ಅದೇ ಚಿತ್ರದಲ್ಲಿ ನಟಿಸಿದ್ದ ಚೈತ್ರಾ ಎಂಬ ನಟಿಯನ್ನು ಪ್ರೀತಿಸಿ ವಿವಾಹವಾಗಿದ್ದ. ಚೀತ್ರಾ ಕಿರುತೆರೆಯ ವಿವಿಧ ಧಾರಾವಾಹಿಗಳಲ್ಲೂ ನಟಿಸಿದ್ದಳು ಎನ್ನಲಾಗಿದೆ. ದಂಪತಿಗೆ ಒಬ್ಬ ಮಗಳೂ ಇದ್ದಳು. ಪತಿ-ಪತ್ನಿಯ ನಡುವೆ ವಿರಸ ಬಂದಿತ್ತು. ಇದರಿಂದ ಚೈತ್ರಾ ಕೆಲ ತಿಂಗಳ ಹಿಂದೆ ಹರ್ಷವರ್ಧನನಿಂದ ಬೇರಾಗಿದ್ದಳು. ಮಗಳನ್ನು ತನ್ನ ಜೊತೆ ಕರೆದುಕೊಂಡು ಹೋಗಿದ್ದಳು. ಮಗಳನ್ನು ನೋಡಲು ಪತ್ನಿ ಅವಕಾಶ ನೀಡುವುದಿಲ್ಲ ಎಂಬ ಕಾರಣಕ್ಕೆ ಹರ್ಷವರ್ಧನ ತನ್ನ ಪತ್ನಿಯನ್ನೇ ಸ್ನೇಹಿತನ ಜೊತೆ ಸೇರಿ ಕಿಡ್ನಾಪ್ ಮಾಡಿದ್ದ. ಮತ್ತು ಚೈತ್ರಾಳ ತಾಯಿಗೆ ಕರೆ ಮಾಡಿ `ನಿನ್ನ ಮಗಳು ಬೇಕಿದ್ದರೆ ನನ್ನ ಮಗಳನ್ನು ತಂದು ಒಪ್ಪಿಸು' ಎಂದು ಬೆದರಿಕೆ ಹಾಕಿದ್ದ. ಚೈತ್ರಾಳ ಸಹೋದರಿ ಲೀಲಾ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.