ರಾಜ್ಯದಲ್ಲಿದ್ದಾರೆ 10,365 ಲಿಂಗತ್ವ ಅಲ್ಪಸಂಖ್ಯಾತರು

ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ
ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ
Published on
ಬೆಂಗಳೂರು: ರಾಜ್ಯದ 31 ಜಿಲ್ಲೆಗಳಲ್ಲಿ 10,365 ಲಿಂಗತ್ವ ಅಲ್ಪಸಂಖ್ಯಾತರು ಇರುವುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಮೀಕ್ಷೆಯಿಂದ (Gender Minority Survey )ಬೆಳಕಿಗೆ ಬಂದಿದೆ.
2025-26ನೇ ಸಾಲಿನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ (ಟ್ರಾನ್ಸ್ ಜೆಂಡರ್) ಸ್ಥಿತಿಗತಿಗಳನ್ನು ಅರಿಯಲು 2025ರ ಸೆಪ್ಟೆಂಬರ್ 15ರಂದು ಸಮೀಕ್ಷೆಯನ್ನು ನಡೆಸಿದ್ದು, 18 ವರ್ಷ ಮೇಲ್ಪಟ್ಟ 10,250 ಲಿಂಗತ್ವ ಅಲ್ಪಸಂಖ್ಯಾತರು ಮತ್ತು 18 ವರ್ಷದೊಳಗಿನ 115 ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳು ಸೇರಿ ಒಟ್ಟಾರೆ 10365 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅತಿ ಹೆಚ್ಚು ಲಿಂಗತ್ವ ಅಲ್ಪಸಂಖ್ಯಾತರನ್ನು ಹೊಂದಿರುವ ಮೊದಲ 5 ಜಿಲ್ಲೆಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ 1428, ಚಿಕ್ಕಬಳ್ಳಾಪುರದಲ್ಲಿ 1252, ಬೆಂಗಳೂರು ನಗರದಲ್ಲಿ 757, ಕೋಲಾರದಲ್ಲಿ 638 ಮತ್ತು ಬೆಳಗಾವಿಯಲ್ಲಿ 618 ಜನರು ಇದ್ದಾರೆ. ಒಟ್ಟಾರೆ ಸಂಖ್ಯೆಯಲ್ಲಿ 6214 (ಶೇ.60.62) ಜನರು ಕುಟುಂಬದಿಂದ ಸ್ವೀಕರಿಸಲ್ಪಟ್ಟವರಾಗಿದ್ದಾರೆ. 4036 ಮಂದಿ (ಶೇ.39.38) ಕುಟುಂಬದಿಂದ ದೂರ ಆಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿತವಾಗಿದೆ.
2025-26ನೇ ಸಾಲಿನ ಲಿಂಗತ್ವ ಅಲ್ಪಸಂಖ್ಯಾತರ (ಟ್ರಾನ್ಸ್ ಜೆಂಡರ್) ಮೂಲ ಹಂತದ ಸಮೀಕ್ಷಾ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಪ್ರಸ್ತುತ ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಾಗೂ ಹಕ್ಕುಗಳ ರಕ್ಷಣೆಗೆ ಇರುವ ಕಾರ್ಯಕ್ರಮಗಳು, ಪುನರ್ ವಸತಿಗಾಗಿ ಮಾಡಬೇಕಿರುವ ಕೆಲಸಗಳ ಕುರಿತು ಶಿಫಾರಸುಗಳು ಸಮೀಕ್ಷಾ ವರದಿಯಲ್ಲಿವೆ.
ವಸತಿ ನಿಲಯಗಳಲ್ಲಿ ಆದ್ಯತೆ ಮೇರೆಗೆ ಲಿಂಗತ್ವ ಅಲ್ಪಸಂಖ್ಯಾತರನ್ನು ದಾಖಲಾತಿ ಮಾಡಿಕೊಳ್ಳಲು ಕ್ರಮವಹಿಸುವುದು. ವಿದ್ಯಾರ್ಥಿ ವೇತನ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಕೋಚಿಂಗ್, ಆರೋಗ್ಯ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ತರಬೇತಿ, ವಸತಿ ಮತ್ತು ಮೂಲಭೂತ ಸೌಕರ್ಯ, ಕ್ಷೇಮಾಭಿವೃದ್ದಿ ಬೋರ್ಡ್ ಸ್ಥಾಪಿಸುವುದು, ಸಾಮಾಜಿಕ ವಿಷಯಗಳಿಗೆ ಹಾಗೂ ಹಾಲಿ ಸರ್ಕಾರಿ ಸೌಲಭ್ಯಗಳನ್ನು ಆದ್ಯತೆಯ ಮೇರೆಗೆ ವಿಸ್ತರಿಸಲು ಸಮೀಕ್ಷಾ ವರದಿಯಲ್ಲಿ ಶಿಫಾರಸು ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಮೀಕ್ಷೆಯಲ್ಲಿ ಸಾಮಾಜಿಕ ಸ್ಥಿತಿಗತಿ, ಶೈಕ್ಷಣಿಕ ಮಾಹಿತಿ, ವಾಸ ಸ್ಥಳ ಹಾಗೂ ವಲಸೆ ಮಾಹಿತಿ, ಕುಟುಂಬದವರಿಂದ ಸ್ವೀಕಾರ ಹಾಗೂ ಕುಟುಂಬದ ಮೇಲಿನ ಅವಲಂಬನೆ ಮಾಹಿತಿ, ಉದ್ಯೋಗ ಮತ್ತು ಆದಾಯ, ಸರ್ಕಾರಿ ಸೌಲಭ್ಯ ಪಡೆದಿರುವ, ಮನೆ, ನಿವೇಶನ ಹಾಗೂ ಕೃಷಿ ಭೂಮಿ, ಅವರ ದೃಢೀಕರಣಕ್ಕಾಗಿ ಶಸ್ತ್ರ ಚಿಕಿತ್ಸೆಗೊಳಗಾದ ಮಾಹಿತಿ, ಆರೋಗ್ಯದ ಸ್ಥಿತಿಗತಿ, ಕೌಶ್ಯಲ ತರಬೇತಿ, ವಾಸದ ಮನೆಗಳು ಹಾಗೂ ಮೂಲಭೂತ ಸೌಕರ್ಯಗಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ.
"

ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ನಡೆಸಿದ್ದು, ಇದರಿಂದ ಪುನರ್ವಸತಿ ಕಲ್ಪಿಸಲು ಮತ್ತು ಸರ್ಕಾರದ ಸೌಲಭ್ಯ ಒದಗಿಸಲು ಅನುಕೂಲವಾಗಿದೆ.

ಪುರುಷರಾಗಿ ಹುಟ್ಟಿದವರೇ ಹೆಚ್ಚು
ಲಿಂಗತ್ವ ಅಲ್ಪಸಂಖ್ಯಾತರಲ್ಲಿ 7,998 ಪುರುಷರಾಗಿ ಮತ್ತು 2123 ಜನರು ಮಹಿಳೆಯರಾಗಿ ಹಾಗೂ 129 ಅಂತರ್ ಲಿಂಗಿಗಳಾಗಿ ಜನಿಸಿರುವುದು ತಿಳಿದುಬಂದಿದೆ. ಇದರಲ್ಲಿ 3736 ಜನ ಪುರುಷರೆಂದು ಮತ್ತು 517 ಜನ ಮಹಿಳೆಯರೆಂದು ಮತ್ತು 5699 ಜನ ಟ್ರಾನ್ಸ್ ಜೆಂಡರ್ ಎಂದು ಆಯ್ಕೆ ಮಾಡಿಕೊಂಡಿದ್ದಾರೆ. ಈ ಪೈಕಿ 19 ರಿಂದ 30ರ ವಯಸ್ಸಿನ 2931 ಜನ, 31 ರಿಂದ 45ರ ಒಳಗೆ 4619, 46-60ರ ವಯಸ್ಸಿನ 2132 ಲಿಂಗತ್ವ ಅಲ್ಪಸಂಖ್ಯಾತರು ಇರುವುದು ಗೊತ್ತಾಗಿದೆ. 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು 568 ಮಂದಿ ಇರುವುದು ಗುರುತಿಸಲಾಗಿದೆ.

ಪಿಎಸ್‌ಡಿ, ಮೆಡಿಕಲ್, ಬಿಇ ಪದವಿ

ಐವರು ವೈದ್ಯಕೀಯ ಪದವಿ, ಏಳು ಮಂದಿ ಕಾನೂನು ಪದವಿ, 34 ಮಂದಿ ತಾಂತ್ರಿಕ ಪದವಿ ಪಡೆದಿದ್ದಾರೆ. 1123 ಎಸ್‌ಎಸ್‌ಎಲ್‌ಸಿ, 1142 ಪಿಯುಸಿ/ಡಿಪ್ಲೋಮಾ, ಬಿಎ, ಬಿಕಾಂ, ಬಿಎಸ್‌ಸಿಯನ್ನು 357 ಜನರು ಓದಿದ್ದರೆ 120 ಸ್ನಾತಕೋತ್ತರ ಪದವಿ ಮತ್ತು ಮೂವರು ಪಿಎಚ್.ಡಿ ಹಾಗೂ 1290 ಮಂದಿ ವಿವಿಧ ಕೋರ್ಸ್ ವ್ಯಾಸಂಗ ಮುಗಿಸಿದ್ದಾರೆ. ಶಿಕ್ಷಣ ಪಡೆಯುವಾಗ 3382 ಮಂದಿ ದೌರ್ಜನ್ಯಕ್ಕೆ ಒಳಗಾಗಿದ್ದರೆ, 3730 ಮಂದಿ ಶಿಕ್ಷಣ ಸಂಸ್ಥೆಗಳ ತಾರತಮ್ಯಕ್ಕೆ ಒಳಗಾಗಿದ್ದಾರೆ. 2589 ಮಂದಿ ಶಿಕ್ಷಣ ಸಂಸ್ಥೆಗಳಿಂದ ವ್ಯಾಸಂಗ ಮೊಟಕುಗೊಳಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
* 8817 ಹಿಂದೂ, 1217 ಮುಸ್ಲಿಂ, 66 ಕ್ರಿಶ್ಚಿಯನ್, 49 ಇತರೆ ಧರ್ಮ
* ಎಸ್‌ಸಿ 3497, ಎಸ್‌ಟಿ 1369, ಹಿಂದುಳಿದ 3585, ಇತರೆ 1289, 510 ಜಾತಿ ವಿವರ ನೀಡಿಲ್ಲ
* 4735 ಜನ ವಿವಾಹಿತರು, 5444 ಅವಿವಾಹಿತರು, 71 ಮಾಹಿತಿ ನೀಡಿಲ್ಲ (ಶೇ.46.20 ವಿವಾಹಿತರು)
* 136 ಜನರ ಬಳಿ ಮನೆ, ವಾಣಿಜ್ಯ ಸೈಟ್, 1743 ಮಂದಿಗೆ ಸ್ವಂತ ಮನೆ, 6201 ಜನ ಬಾಡಿಗೆ ಮನೆಯಲ್ಲಿ ವಾಸ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net