

ಬೆಂಗಳೂರು: ಜಾನಪದ ಹಾಡುಗಳನ್ನು ಆಧುನಿಕ ಸಂಗೀತದೊಂದಿಗೆ ಮೇಳೈಸುವಾಗ ಅವುಗಳ ಮೂಲ ರಾಗ, ತಾಳ ಹಾಗೂ ಸಾಹಿತ್ಯಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ಜಾನಪದ ಕಲೆಯ ಮೂಲ ಜಾಡು ಮತ್ತು ಸೊಗಡನ್ನು ಉಳಿಸಿಕೊಳ್ಳುವುದು ಅತ್ಯಗತ್ಯ ಎಂದು ಹಿರಿಯ ಜಾನಪದ ವಿದ್ವಾಂಸ ಡಾ. ಪಿ.ಕೆ. ರಾಜಶೇಖರ್ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕನ್ನಡ ಭವನದಲ್ಲಿರುವ ನಯನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ 252ನೇ ತಿಂಗಳ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮನಬಿಚ್ಚಿ ಮಾತನಾಡಿದರು.
ಹಿಂದಿನ ಜಾನಪದ ಕಲಾವಿದರು ಅನಕ್ಷರಸ್ಥರಾಗಿದ್ದರೂ ಮೂಲ ಸಂಪ್ರದಾಯ ಹಾಗೂ ಹಾಡಿನ ಮಟ್ಟುಗಳಿಗೆ ಬದ್ಧರಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ಮೂಲ ಜಾಡನ್ನು ಬಿಟ್ಟು ವಿಭಿನ್ನ ರೀತಿಯಲ್ಲಿ ಹಾಡುತ್ತಿದ್ದಾರೆ. ಇದರಿಂದ ಜಾನಪದದ ಮೂಲ ಸ್ವರೂಪವೇ ನಶಿಸುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಶತಮಾನಗಳಿಂದ ಮೌಖಿಕವಾಗಿ ಉಳಿದುಬಂದಿರುವ ಜಾನಪದ ಕಲೆಯ ಮೂಲಕ್ಕೆ ಕಲಾವಿದರು ಬದ್ಧರಾಗಿರಬೇಕು. ಆಧುನಿಕತೆ ಬಂದಿದೆ ಎಂಬ ಕಾರಣಕ್ಕೆ ಜಾನಪದದ ಮೂಲವನ್ನು ಬದಲಾಯಿಸಬಾರದು. ಕಾಲಕ್ಕೆ ತಕ್ಕಂತೆ ಕೆಲವು ಬದಲಾವಣೆಗಳು ಅನಿವಾರ್ಯವಾದರೂ ಮೂಲ ಸೊಗಡನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಯಬೇಕು ಎಂದರು.
ಶಾಸ್ತ್ರೀಯ ಸಂಗೀತದಲ್ಲಿ ಸ್ವರಗಳಿಗೆ ಹೆಚ್ಚಿನ ಪ್ರಾಮುಖ್ಯವಿದ್ದರೆ, ಜಾನಪದದಲ್ಲಿ ಪದಗಳೇ ಹಾಡಿನ ಜೀವಾಳ. ಒಬ್ಬರನ್ನೊಬ್ಬರು ಅನುಸರಿಸುತ್ತ ಜೊತೆಯಾಗಿ ಹಾಡುವ ಮೂಲಕ ಕಲಾವಿದರು ಅನುಭವದಿಂದಲೇ ಕಲೆಯನ್ನು ರೂಢಿಸಿಕೊಳ್ಳುತ್ತಾರೆ. ಇದಕ್ಕೆ ಪ್ರತ್ಯೇಕ ಪಾಠಶಾಲೆಯ ಅಗತ್ಯವಿಲ್ಲ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ವಸುಂಧರಾ, ಜಂಟಿ ನಿರ್ದೇಶಕಿ ಬನಶಂಕರಿ ವಿ. ಅಂಗಡಿ ಇದ್ದರು.
ಜಾನಪದ ಗೀತೆ ಮತ್ತು ಸಾಹಿತ್ಯವನ್ನು ಉಳಿಸಿಕೊಳ್ಳಲು ಕಲಾವಿದರು ಬೇಡಿಯೇ ಬದುಕಬೇಕಾದ ಅನಿವಾರ್ಯತೆ ಇಲ್ಲ. ಹಿಂದೆ ಹಾಡು ಹೇಳಿ ಭಿಕ್ಷೆ ಪಡೆಯುವ ಮೂಲಕ ಜೀವನ ಸಾಗಿಸುತ್ತಿದ್ದ ಕಲಾವಿದರಿದ್ದರು. ಆದರೆ ಇಂದು ಅವರ ಮಕ್ಕಳು ವಿದ್ಯಾವಂತರಾಗಿದ್ದಾರೆ. ಆಧುನಿಕತೆ ಬೆಳೆದಿದೆ ಎಂಬ ಕಾರಣಕ್ಕೆ ತಲೆಮಾರುಗಳಿಂದ ಬಂದಿರುವ ಜನಪದ ಪರಂಪರೆಯನ್ನು ಅಳಿಸಿಹಾಕಬಾರದು ಎಂದು ಪಿಕೆಆರ್ ಅಭಿಪ್ರಾಯಪಟ್ಟರು.
ತಮ್ಮ ಜಾನಪದ ಆಸಕ್ತಿಯ ಹಿಂದಿನ ಬಾಲ್ಯದ ನೆನಪುಗಳನ್ನು ಹಂಚಿಕೊಂಡ ಡಾ.ರಾಜಶೇಖರ್, ಅಜ್ಜಿ ಮನೆಯಲ್ಲಿ ಹಾಡುತ್ತಿದ್ದ ’ಬೆಳಗಾಗೆದ್ದು ನಾ ಯಾರ್ಯಾರ ನೋಡಲಿ...’ ಎಂಬ ಹಾಡು, ರಾಗಿ ಬೀಸುವಾಗ, ಭತ್ತ ಕುಟ್ಟುವಾಗ ಹಾಡುತ್ತಿದ್ದ ಹಾಡುಗಳು, ಜೋಗಿ ಹಾಡುಗಳು ಹಾಗೂ ಸೋಬಾನೆ ಪದಗಳು ಬಾಲ್ಯದಲ್ಲಿಯೇ ಜಾನಪದದ ಒಲವನ್ನು ಬೆಳೆಸಿದವು ಎಂದು ಸ್ಮರಿಸಿದರು. ಬಿ.ಎ. ಪದವಿ ಬಳಿಕ ಎಂ.ಎ. ವ್ಯಾಸಂಗಕ್ಕೆ ಸೇರಿದ ಸಂದರ್ಭದಲ್ಲಿ ವಿಶ್ವವಿದ್ಯಾಲಯದಲ್ಲಿ ಹೊಸದಾಗಿ ಜಾನಪದ ವಿಭಾಗ ಆರಂಭವಾಗಿತ್ತು. ಉಪನ್ಯಾಸಕರ ಸಲಹೆಯಂತೆ ಐಚ್ಛಿಕ ವಿಷಯವಾಗಿ ಜಾನಪದವನ್ನು ಆಯ್ಕೆ ಮಾಡಿಕೊಂಡೆ. ನಂತರ ಈ ಕ್ಷೇತ್ರದಲ್ಲಿ ನಡೆಸಿದ ಸಂಶೋಧನೆ, ಮಾಹಿತಿ ಸಂಗ್ರಹ ಹಾಗೂ ಮಲೆಮಹದೇಶ್ವರ ಕಾವ್ಯ ಸೇರಿ ವಿವಿಧ ಕಾವ್ಯಗಳ ಪ್ರಕಟಣೆ ಮೂಲಕ ವಿದ್ವತ್ಯಾನ ಬೆಳೆದ ಬಗೆಯನ್ನು ವಿವರಿಸಿದರು. ಈ ಹಾದಿಯಲ್ಲಿ ಸ್ನೇಹಿತರು ಮತ್ತು ಜನಪದ ಕಲಾವಿದರು ನೀಡಿದ ಸಹಕಾರವನ್ನೂ ನೆನೆದರು.
ಜಾನಪದ ಕಲಾವಿದರು ಉಳಿದರೆ ಮಾತ್ರ ಜಾನಪದ ಕಲೆ ಉಳಿಯಲು ಸಾಧ್ಯ. ವೃತ್ತಿಪರ ಗಾಯಕರು ಹಾಡಿಗೆ ಸಂಭಾವನೆ ಪಡೆಯುತ್ತಾರೆ. ಆದರೆ ಮನೆ- ಮನೆಗೆ ತೆರಳಿ ಹಾಡುವ ಅನೇಕ ಜಾನಪದ ಕಲಾವಿದರಿಗೆ ಸೂಕ್ತ ಆದಾಯದ ವ್ಯವಸ್ಥೆಯಿಲ್ಲ. ಹೀಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಾನಪದ ಅಕಾಡೆಮಿ ಬಡ ಹಾಗೂ ಹಿರಿಯ ಕಲಾವಿದರನ್ನು ಗುರುತಿಸಿ ಗೌರವಧನ ಅಥವಾ ಮಾಸಾಶನ ನೀಡುವ ಮೂಲಕ ಅವರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸಬೇಕು ಎಂದು ಡಾ. ರಾಜಶೇಖರ್ ಒತ್ತಾಯಿಸಿದರು.