ಆರ್‌ಎಂಪಿ ರಸ್ತೆ ನಿರ್ಮಿಸಲು ಕ್ರಮ ವಹಿಸಿ

rmp road
rmp road
Published on

ಪ್ರಮುಖ ಮುಖ್ಯಾಂಶಗಳು

  • ಉತ್ತರ ನಗರ ಪಾಲಿಕೆ ಆಯುಕ್ತರಿಂದ ಅಧಿಕಾರಿಗಳಿಗೆ ಸೂಚನೆ
  • ಜಕ್ಕೂರು ಕೆರೆ ಕೋಡಿ ಬಳಿ ಸ್ಥಳ ವೀಕ್ಷಿಸಿದ ಸುನೀಲ್ ಕುಮಾರ್
ಬೆಂಗಳೂರು: ಯಲಹಂಕದ ಕೋಗಿಲುನಿಂದ ಸಂಪಿಗೇಹಳ್ಳಿ ಮಾರ್ಗವಾಗಿ ಜಕ್ಕೂರು ಕರೆ ಕೋಡಿ ವರೆಗೆ ಪರಿಷ್ಕೃತ ಮಹಾಯೋಜನೆ (ಆರ್‌ಎಂಪಿ) 2015ರ ಅನ್ವಯ ಹೊಸದಾಗಿ ರಸ್ತೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಉತ್ತರ ನಗರ ಪಾಲಿಕೆಯ ಆಯುಕ್ತ ಪಿ.ಸುನೀಲ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬುಧವಾರ ಜಕ್ಕೂರು ಕೆರೆ ಕೋಡಿ ಪ್ರದೇಶದಲ್ಲಿ ಸ್ಥಳ ವೀಕ್ಷಣೆ ನಡೆಸಿ, ರಸ್ತೆ ಕಾಮಗಾರಿಗೆ ಸಂಬಂಧಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ ಆಯುಕ್ತರು, 18 ಮೀ. (60 ಅಡಿ) ಅಗಲದ ರಸ್ತೆ ಯೋಜನೆಯು ಕೋಗಿಲು ರಸ್ತೆಯಿಂದ ಪ್ರಾರಂಭವಾಗಿ ಸಂಪಿಗೆಹಳ್ಳಿ, ಜಕ್ಕೂರು ಹಾಗೂ ಗಸ್ತಿ ಕೆಂಪನಹಳ್ಳಿ ಮೂಲಕ ಜಕ್ಕೂರು ಕೆರೆ ಕೋಡಿ ಮುಂಭಾಗದಿಂದ ರೈಲ್ವೆ ಸಮಾನಾಂತರ ರಸ್ತೆಯವರೆಗೆ ಸಂಪರ್ಕ ಕಲ್ಪಿಸುವ ಸುಮಾರು 3,365 ಮೀ. ಉದ್ದದ ಹೊಸ ರಸ್ತೆ ಸಾರ್ವಜನಿಕರ ಬಳಕೆಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ಈ ಯೋಜನೆಗೆ ಸಂಬಂಧಿಸಿ ಈಗಾಗಲೇ ಆರ್‌ಎಂಪಿ-2015 ಅನ್ವಯ ಭೂಸ್ವಾಧೀನ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಲಾಗಿದೆ. ಆರ್‌ಎಂಪಿ ಅಲೈನ್‌ಮೆಂಟ್‌ನಂತೆ ರಸ್ತೆ ನಿರ್ಮಿಸುವ ಪ್ರದೇಶದಲ್ಲಿ ಹಲವು ಮನೆಗಳು ನಿರ್ಮಾಣಗೊಂಡಿರುವ ಹಿನ್ನೆಲೆಯಲ್ಲಿ, ಅಲೈನ್‌ಮೆಂಟ್ ಪರಿಷ್ಕರಣೆ ಅಗತ್ಯವಾಗಿದೆ ಎಂದು ತಿಳಿಸಿದರು.

ಪರಿಷ್ಕೃತ ಅಲೈನ್‌ಮೆಂಟ್‌ಗೆ ಅನುಮೋದನೆ:

ಪ್ರಸ್ತುತ ಬಳಕೆಯಲ್ಲಿರುವ 15 ಮೀ. ಅಗಲದ ರಸ್ತೆಗೆ ಸೇರುವಂತೆ ಹೊಸ ಆರ್‌ಎಂಪಿ ರಸ್ತೆ ನಿರ್ಮಿಸುವ ಜತೆಗೆ, ಜಕ್ಕೂರು ಕೆರೆಯ ಬಫರ್ ಪ್ರದೇಶದ ಅಂಚಿನಲ್ಲಿ ಪರಿಷ್ಕೃತ ಅಲೈನ್‌ಮೆಂಟ್‌ಗೆ ಅನುಮೋದನೆ ಪಡೆದುಕೊಳ್ಳಬೇಕು. ಅದಕ್ಕಾಗಿ ಪಾಲಿಕೆ ಆಡಳಿತಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲು ಬಿ-ಸ್ಮೈಲ್ ಅಭಿಯಂತರರಿಂದ ಅಲೈನ್ಮೆಂಟ್ ನಕ್ಷೆ ಹಾಗೂ ಕಡತವನ್ನು ಪಡೆದು ಆಯುಕ್ತರಿಗೆ ಸಲ್ಲಿಸುವಂತೆ ಮುಖ್ಯ ಅಭಿಯಂತರರಿಗೆ ಸೂಚಿಸಲಾಯಿತು.
ಸ್ಥಳಪರಿಶೀಲನೆ ವೇಳೆ ಉತ್ತರ ಪಾಲಿಕೆಯ ಜಂಟಿ ಆಯುಕ್ತ ಮೊಹಮ್ಮದ್ ನಯೀಮ್ ಮೊಮಿನ್, ಮುಖ್ಯ ಅಭಿಯಂತರ ರಾಘವೇಂದ್ರ ಪ್ರಸಾದ್, ಹಿರಿಯ ಅಧಿಕಾರಿಗಳಾದ ಪ್ರಕಾಶ್, ಸಚಿನ್ ಹಾಜರಿದ್ದರು.

ಬಜೆಟ್‌ನಲ್ಲಿ ಅನುದಾನ ನಿಗದಿ:

2024-25ನೇ ಸಾಲಿನ ಪಾಲಿಕೆಯ ಆಯವ್ಯದಲ್ಲಿ 5 ಕೋಟಿ ರೂ. ಅನುದಾನ ನಿಗದಿ ಮಾಡಿದ್ದು, ಬಿ-ಸ್ಮೈಲ್ ವತಿಯಿಂದ ಕಾರ್ಯದೇಶ ನೀಡಲಾಗಿದೆ. ರೈಲ್ವೆ ಸಮಾನಾಂತರ ರಸ್ತೆಯಿಂದ ಭೂಮಾಲೀಕರು ಪರಿಷ್ಕೃತ ಅಲೈನ್ಮೆಂಟ್‌ನಂತೆ ರಸ್ತೆ ನಿರ್ಮಿಸಲು ಸಹಮತಿ ವ್ಯಕ್ತಪಡಿಸಿದ ಭಾಗಗಳಲ್ಲಿ ಹಾಗೂ ಈ ರಸ್ತೆ ಮಳೆನೀರು ಕಾಲುವೆ ದಾಟುವ ಸ್ಥಳದಲ್ಲಿ ರಸ್ತೆ ಸೇತುವೆ ನಿರ್ಮಾಣ ಕಾರ್ಯವನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಪರಿಷ್ಕೃತ ಅಲೈನ್‌ಮೆಂಟ್ ನಕ್ಷೆಗೆ ಅನುಮೋದನೆ ದೊರೆತ ನಂತರ ಹಾಗೂ ಟಿಡಿಆರ್ ಪರಿಹಾರ ವಿತರಿಸಿದ ಬಳಿಕ, ಉಳಿದ ಭಾಗಗಳಲ್ಲಿ ಆರ್‌ಎಂಪಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಈ ಉಪಕ್ರಮದಿಂದ ಸ್ಥಳೀಯ ರಸ್ತೆಗಳ ಮೇಲಿನ ಸಂಚಾರ ಒತ್ತಡ ಕಡಿಮೆಯಾಗಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net