

ಬೆಂಗಳೂರು: ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಕೊನೆಗೂ ಸ್ವಂತ ಕಟ್ಟಡ ಕಲ್ಪಿಸುವ ಯೋಜನೆಗೆ ಚಾಲನೆ ದೊರೆತಿದೆ.
ಜಯನಗರ ಜಿಲ್ಲಾ ನೋಂದಣಾಧಿಕಾರಿ ಕಚೇರಿ ಮತ್ತು ಜೆ.ಪಿ.ನಗರ ಉಪ ನೋಂದಣಾಧಿಕಾರಿ ಕಚೇರಿ ಒಳಗೊಂಡ ನೂತನ ಕಟ್ಟಡ ನಿರ್ಮಾಣಕ್ಕೆ 6.30 ಕೋಟಿ ರೂ. ಹಾಗೂ ಕೆಂಗೇರಿ ಸಬ್ ರಿಜಿಸ್ಟ್ರಾರ್ ಕಚೇರಿ ಒಳಾಂಗಣ ವಿನ್ಯಾಸ ಮತ್ತು ನವೀಕರಣ ಕಾಮಗಾರಿಗೆ 1 ಕೋಟಿ ರೂ. ಅನ್ನು ಸರ್ಕಾರ ಬಿಡುಗಡೆ ಮಾಡಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ 259 ಉಪ ನೋಂದಣಿ ಕಚೇರಿಗಳು, 35 ಜಿಲ್ಲಾ ನೋಂದಣಿ ಕಚೇರಿ ಮತ್ತು 1 ಐಜಿಆರ್ ಆಫೀಸ್ ಸೇರಿ 295 ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.
259 ಉಪನೋಂದಣಿ ಕಚೇರಿಗಳ ಪೈಕಿ ಕೇವಲ 21 ಕಚೇರಿಗಳಿಗೆ ಮಾತ್ರ ಸ್ವಂತ ಕಟ್ಟಡಗಳು ಇದ್ದು, ಬೆಂಗಳೂರು ವ್ಯಾಪ್ತಿಯಲ್ಲಿ ಇರುವ 43 ಉಪ ನೋಂದಣಿ ಕಚೇರಿಗಳಲ್ಲಿ ಎರಡಕ್ಕೆ ಮಾತ್ರ ಸ್ವಂತ ಕಟ್ಟಡ ಇವೆ. ಉಳಿದ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಜೆ.ಪಿ.ನಗರ ಕಚೇರಿಗೆ 9 ಗುಂಟೆ ಜಾಗ : ಬೆಂಗಳೂರು ದಕ್ಷಿಣ ತಾಲೂಕು ಉತ್ತರಹಳ್ಳಿ ಹೋಬಳಿಯ ವಾಜರಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಸುಪರ್ದಿಯಲ್ಲಿದ್ದ 11 ಗುಂಟೆ ಜಾಗದಲ್ಲಿ 9 ಗುಂಟೆ ಜಮೀನನ್ನು ಜಯನಗರ ಜಿಲ್ಲಾ ನೋಂದಣಾಧಿಕಾರಿ ಕಚೇರಿ ಮತ್ತು ಜೆ.ಪಿ.ನಗರ ಉಪನೋಂದಣಿ ಕಚೇರಿ ನಿರ್ಮಾಣಕ್ಕೆ ಮಂಜೂರು ಆಗಿದ್ದು, ಕಟ್ಟಡ ನಿರ್ಮಾಣಕ್ಕೆ 6.30 ಕೋಟಿ ರೂ. ವೆಚ್ಚ ಅಂದಾಜು ಮಾಡಿ ಸರ್ಕಾರ ಅನುಮೋದನೆ ನೀಡಿದೆ ಎಂದು ಜೆ.ಪಿ.ನಗರ ಉಪ ನೋಂದಣಿ ಕಚೇರಿಯ ಹಿರಿಯ ಸಬ್ ರಿಜಿಸ್ಟ್ರಾರ್ ಬಿ. ದೇವರಾಜ್ ತಿಳಿಸಿದ್ದಾರೆ. ಅದೇ ರೀತಿಯಾಗಿ ಕೆಂಗೇರಿ ಉಪನೋಂದಣಿ ಕಚೇರಿಯ ಒಳಾಂಗಣ ವಿನ್ಯಾಸ ಮತ್ತು ನವೀಕರಣ ಕಾಮಗಾರಿಗಾಗಿ 1 ಕೋಟಿ ರೂ. ಬಿಡುಗಡೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಉಳಿದ 162 ಕಚೇರಿಗಳು ಸರ್ಕಾರಿ ಕಟ್ಟಡ ಮತ್ತು 76 ಬಾಡಿಗೆ ಕಟ್ಟಡಗಳಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಗಳು ನಡೆಯುತ್ತಿವೆ. ಬೆಂಗಳೂರು ನಗರದಲ್ಲಿ 34 ಕಚೇರಿಗಳಿಗೆ ಪ್ರತಿ ತಿಂಗಳು ಕೋಟ್ಯಂತರ ರೂಪಾಯಿ ಬಾಡಿಗೆ ಪಾವತಿ ಮಾಡಲಾಗುತ್ತಿದೆ.
ಕೆಲವೊಂದು ಕಚೇರಿಗಳಲ್ಲಿ ಜನರಿಗೆ ಮೂಲಸೌಕರ್ಯದ ಕೊರತೆ ಕಾಡುತ್ತಿವೆ. ಇದನ್ನು ಮನಗೊಂಡ ಕಂದಾಯ ಇಲಾಖೆ 2025ರ ಏಪ್ರಿಲ್ನಲ್ಲಿ ಉಪ ನೋಂದಣಿ ಕಚೇರಿಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆಂದು 76 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಜವಾಬ್ದಾರಿಯನ್ನು ಕರ್ನಾಟಕ ಗೃಹ ಮಂಡಳಿಗೆ ವಹಿಸಿದೆ.
ಜತೆಗೆ ಬೆಂಗಳೂರು ನಗರದಲ್ಲಿ ಬಾಡಿಗೆ ಕಟ್ಟಡದಲ್ಲಿ ಇರುವ ಉಪನೋಂದಣಿ ಕಚೇರಿಗಳಿಗೆ ಸ್ವಂತ ಕಟ್ಟಡಕ್ಕಾಗಿ 26 ಸ್ವತ್ತುಗಳನ್ನು ಗುರುತಿಸಲಾಗಿದೆ. ಈ ಪೈಕಿ 12 ಸ್ವತ್ತುಗಳು ಜಿಬಿಎ ಪ್ರಾಧಿಕಾರದಿಂದ ಮತ್ತು 8 ಸ್ವತ್ತುಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಡೆಯಿಂದ ಹಾಗೂ 6 ಸ್ವತ್ತುಗಳನ್ನು ಬಿಡಿಎಯಿಂದ ಪಡೆಯಲು ಕಂದಾಯ ಇಲಾಖೆ ಮುಂದಾಗಿದೆ.ಗುರುತಿಸಿರುವ ಸ್ವತ್ತುಗಳ ಪೋಟೋ, ನಕ್ಷೆ, ಜಿಯೋ ಲೋಕೇಷನ್ ಮತ್ತು ಭೌಗೋಳಿಕ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ಕಂದಾಯ ಇಲಾಖೆ ಸಚಿವರು ಸೂಚಿಸಿದ್ದಾರೆ.
ಷರತ್ತಿನ ಮೇಲೆ ಸ್ವತ್ತು ವರ್ಗಾವಣೆ -ಜಮೀನು ಕಾಯ್ದಿರಿಸಿರುವ ಉದ್ದೇಶಕ್ಕೆ ಮಾತ್ರ ಬಳಸಬೇಕು -ಸ್ವತ್ತಿನ ಮಾಲೀಕತ್ವವು ಸರ್ಕಾರದ್ದೆ ಆಗಿರುತ್ತದೆ -ಒತ್ತುವರಿ ಆಗದಂತೆ ತಂತಿಬೇಲಿ ಹಾಕಿ ಸಂರಕ್ಷಿಸುವ ಜವಾಬ್ದಾರಿ ಪ್ರಾಧಿಕಾರದು -ಜಮೀನು ನ್ಯಾಯಾಲಯದ ಆದೇಶಗಳಿಗೆ ಒಳಪಟ್ಟು ಮಂಜೂರು -ಖಾಸಗಿ ಸಂಸ್ಥೆ ಅಥವಾ ಇತರೆ ಇಲಾಖೆಗಳ ಬಳಕೆಗೆ ಹಸ್ತಾಂತರ, ಗುತ್ತಿಗೆ ಬಾಡಿಗೆಗೆ ಇಲ್ಲ