

ಬೆಂಗಳೂರು: ಸಿಬಿಎಸ್ಇ ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ 2026ರಲ್ಲಿ ಸೌಂದರ್ಯ ಸೆಂಟ್ರಲ್ ಶಾಲೆಯ ವಿದ್ಯಾರ್ಥಿನಿಯರು ಅಮೋಘ ಸಾಧನೆ ಮಾಡಿದ್ದಾರೆ. ಮಧ್ಯಪ್ರದೇಶದ ಭೋಪಾಲ್ನ ಪ್ರಕಾಶ್ ತರುಣ್ ಸ್ವಿಮ್ಮಿಂಗ್ ಪೂಲ್ನಲ್ಲಿ ಅಕ್ಟೋಬರ್ 25ರಿಂದ 29ರವರೆಗೆ ನಡೆದ ಈ ಚಾಂಪಿಯನ್ಷಿಪ್ನಲ್ಲಿ ಶಾಲೆಯ 11 ವಯೋಮಿತಿ ಬಾಲಕಿಯರ ತಂಡವು ಒಟ್ಟು ಎರಡು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆಲ್ಲುವುದರೊಂದಿಗೆ ತಂಡ ಚಾಂಪಿಯನ್ಷಿಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಸ್ಪರ್ಧೆಯನ್ನು ದಿ ಓರಿಯಂಟಲ್ ಸ್ಕೂಲ್ ಆಯೋಜಿಸಿತ್ತು.
ವೈಯಕ್ತಿಕ ವಿಭಾಗದಲ್ಲಿ ಸೌಂದರ್ಯ ಸೆಂಟ್ರಲ್ ಶಾಲೆಯ ವಿದ್ಯಾರ್ಥಿನಿ ಪಾವನಿ ಎಸ್. ಅತ್ಯುತ್ತಮ ಪ್ರದರ್ಶನ ನೀಡಿ 200 ಮೀಟರ್ ವೈಯಕ್ತಿಕ ಮೆಡ್ಲೆ ವಿಭಾಗದಲ್ಲಿ ಚಿನ್ನದ ಪದಕ ಹಾಗೂ 50 ಮೀಟರ್ ಬ್ಯಾಕ್ಸ್ಟ್ರೋಕ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಇನ್ನು ತಂಡ ವಿಭಾಗದಲ್ಲಿ 4 × 50 ಮೀಟರ್ ಫ್ರೀಸ್ಟೈಲ್ ರಿಲೇ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಇದೇ ವೇಳೆ 4 × 50 ಮೀಟರ್ ಮೆಡ್ಲೆ ರಿಲೇ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪದಕ ವಿಜೇತ ತಂಡದಲ್ಲಿ ಪಾವನಿ ಎಸ್., ಮೆಲಿನಾ ಎಂ., ತ್ರಿಶಿಕಾ ಗೌಡ ಹಾಗೂ ಯೋಗನ ಪ್ರಸಾದ್ ರೆಂಜಾಲ ಅವರು ಭಾಗವಹಿಸಿದ್ದರು.
ವಿದ್ಯಾರ್ಥಿನಿಯರ ಕಠಿಣ ಪರಿಶ್ರಮ, ನಿರಂತರ ಅಭ್ಯಾಸ, ಶಿಸ್ತು ಮತ್ತು ತಂಡದ ಒಗ್ಗಟ್ಟಿನ ಮನೋಭಾವ ಈ ಗಮನಾರ್ಹ ಸಾಧನೆಗೆ ಕಾರಣವಾಗಿದೆ. ವಿದ್ಯಾರ್ಥಿನಿಯರ ಈ ಯಶಸ್ಸಿಗೆ ಶಾಲೆಯ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.