

ಬೆಂಗಳೂರು: ಕೌಶಲಾಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವ ಸಲುವಾಗಿ 2ನೇ ಆವೃತ್ತಿಯ ಕೌಶಲ ಶೃಂಗಸಭೆ-2026 ಅನ್ನು ನ.3ರಿಂದ 5ರವರೆಗೆ ಆಯೋಜಿಸಲಾಗಿದೆ ಎಂದು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಪಾಟೀಲ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಯುವಕರಲ್ಲಿ ಕೌಶಲ ಹೆಚ್ಚಿಸುವುದು ಮತ್ತು ಉತ್ತಮ ಭವಿಷ್ಯ ರೂಪಿಸುವ ಉದ್ದೇಶದೊಂದಿಗೆ ಶೃಂಗಸಭೆ ಆಯೋಜಿಸಲಾಗಿದೆ. ಲಲಿತ್ ಅಶೋಕ ಹೋಟೆಲ್‌ನಲ್ಲಿ 3 ದಿನಗಳ ಕಾಲ ನಡೆಯಲಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶೃಂಗಸಭೆಗೆ ಚಾಲನೆ ನೀಡಲಿದ್ದಾರೆ ಎಂದರು.
ಈ ಬಾರಿಯ ಶೃಂಗಸಭೆಯು ಕಾರ್ಯಪಡೆ 2030: ವ್ಯಾಪ್ತಿ, ವ್ಯವಸ್ಥೆಗಳು, ಸಹಯೋಗ ಘೋಷವಾಕ್ಯದೊಂದಿಗೆ ನಡೆಯಲಿದೆ. ಜತೆಗೆ ಕೃತಕ ಬುದ್ಧಿಮತ್ತೆ, ಇಂಡಸ್ಟ್ರಿ 4.0, ಡೀಪ್‌ಟೆಕ್, ಗ್ರೀನ್ ಜಾಬ್ಸ್‌ನಂತಹ ಉದಯೋನ್ಮುಖ ತಂತ್ರಜ್ಞಾನ, ಏರೋಸ್ಪೇಸ್, ಜೈವಿಕ ತಂತ್ರಜ್ಞಾನ, ಕೃಷಿ, ಆಟೋ ಮೊಬೈಲ್, ಆರೋಗ್ಯ, ಸೆಮಿಕಂಡಕ್ಟರ್ ವಲಯಗಳ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಯುವ ಜನರಿಗೆ ಜಾಗತಿಕ ಮಟ್ಟದಲ್ಲಿ ಉದ್ಯೋಗ ಪಡೆಯಲು ಅಗತ್ಯ ಕೌಶಲ ನೀಡುವ ಕುರಿತಂತೆ ಸಂವಾದ, ಚರ್ಚೆಗಳು ನಡೆಯಲಿವೆ. ವಿವಿಧ ಸಂಸ್ಥೆಗಳ ಪ್ರತಿನಿಧಿಗಳು, ವಿಷಯ ತಜ್ಞರು ಸೇರಿದಂತೆ 150ಕ್ಕೂ ಹೆಚ್ಚಿನ ಭಾಷಣಕಾರರು ಶೃಂಗಸಭೆಯಲ್ಲಿ ಪಾಲ್ಗೊಂಡು ವಿಷಯ ಮಂಡಿಸಲಿದ್ದಾರೆ. 6,500ಕ್ಕೂ ಹೆಚ್ಚಿನ ಪ್ರತಿನಿಧಿಗಳು, 50ಕ್ಕೂ ಹೆಚ್ಚಿನ ಪ್ರದರ್ಶಕರು, 100ಕ್ಕೂ ಹೆಚ್ಚಿನ ಪಾಲುದಾರರು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಿಯೋಗಗಳು ಶೃಂಗಸಭೆಯ ಭಾಗವಾಗಲಿದ್ದಾರೆ. ಅದರೊಂದಿಗೆ ಕಾರ್ಮಿಕ ಮಾರುಕಟ್ಟೆ ಮಾಹಿತಿ ಕುರಿತಾದ ರಾಷ್ಟ್ರೀಯ ಆಲೋಚನಾ ಸ್ಪರ್ಧೆ ಸ್ಕಿಲ್ಲಥಾನ್ 2026 ಹಾಗೂ ಕಾರ್ಮಿಕ ಮತ್ತು ಕೌಶಲಾಭಿವೃದ್ಧಿಗೆ ಸಂಬಂಧಿಸಿದ ಸಂಸ್ಥೆಗಳಿಗೆ ಕೌಶಲ ಕರ್ನಾಟಕ ಪ್ರಶಸ್ತಿ ನೀಡಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.