ಜೈಲುಗಳಲ್ಲಿ ಅಕ್ರಮ ತಡೆಯಲು ಆರು ಸೂತ್ರ

ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ ಎಡಿಜಿಪಿ ಆರ್. ಹಿತೇಂದ್ರ ನೇತೃತ್ವದ ಸಮಿತಿಯಿಂದ ವರದಿ ಸಲ್ಲಿಕೆ
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ ಎಡಿಜಿಪಿ ಆರ್. ಹಿತೇಂದ್ರ ನೇತೃತ್ವದ ಸಮಿತಿಯಿಂದ ವರದಿ ಸಲ್ಲಿಕೆ
Published on
ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ಮತ್ತು ಸುಧಾರಣೆಗೆ ಎಡಿಜಿಪಿ ಆರ್. ಹಿತೇಂದ್ರ ನೇತೃತ್ವದ ಉನ್ನತ ಮಟ್ಟದ ಸಮಿತಿ 6 ಸೂತ್ರಗಳನ್ನು ಶಿಫಾರಸು ಮಾಡಿದೆ. ಜೈಲಿನೊಳಗೆ (prisons) ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ, ಭದ್ರತೆ, ಆಡಳಿತಾತ್ಮಕ ಬದಲಾವಣೆ ಕುರಿತಂತೆ ಶಿಾರಸು ಮಾಡಿದೆ. ಇದರ ಅನುಷ್ಠಾನದ ಜವಾಬ್ದಾರಿಯನ್ನು ರಾಜ್ಯಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್‌ಕುಮಾರ್ ಹೆಗಲಿಗೆ ವಹಿಸಲಾಗಿದೆ.
ರಾಜ್ಯದ ವಿವಿಧ ಜೈಲುಗಳಲ್ಲಿ ಕೈದಿಗಳಿಗೆ ಅಕ್ರಮವಾಗಿ ಮೊಬೈಲ್, ಮಾದಕ ವಸ್ತುಗಳ ಪೂರೈಕೆ, ಐಷಾರಾಮಿ ಸವಲತ್ತು ವಿವಾದ ದೇಶದೆಲ್ಲೆಡೆ ಸದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ನೇತೃತ್ವದಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳು ಒಳಗೊಂಡ ಸಮಿತಿಯನ್ನು ಸರ್ಕಾರ ರಚಿಸಿತ್ತು. ಈ ಸದಸ್ಯರು ದೆಹಲಿಯ ತಿಹಾರ್ ಕಾರಾಗೃಹ, ತೆಲಂಗಾಣದ ಚಂಚಲಗೂಡು ಕೇಂದ್ರ ಕಾರಾಗೃಹಗಳಿಗೆ ಹಾಗೂ ಕರ್ನಾಟಕದ ಎಲ್ಲ ಜೈಲುಗಳಿಗೆ ಭೇಟಿ ಕೊಟ್ಟು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಪ್ರಮುಖವಾಗಿ ರಾಜ್ಯದ ಕಾರಾಗೃಹಗಳಲ್ಲಿ ಶೇ.40- 47 ಹುದ್ದೆಗಳು ಖಾಲಿ ಉಳಿದಿವೆ. ಕಾರಾಗೃಹ ಕೈಪಿಡಿ ಮಾನದಂಡದಂತೆ ಕೈದಿ- ಸಿಬ್ಬಂದಿ 1:6 ಇರಬೇಕು. ಆದರೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ 4,834 ಕೈದಿಗಳಿದ್ದು, 571 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, 388 ಹುದ್ದೆಗಳು ಖಾಲಿ ಇವೆ. ಇದೇ ರೀತಿಯಾಗಿ ರಾಜ್ಯದ ಎಲ್ಲ ಜೈಲುಗಳಲ್ಲಿ 1:8.47 ಅನುಪಾತವಿದೆ. ಸುರಕ್ಷತೆ ಮತ್ತು ಭದ್ರತೆಗೆ ತೊಂದರೆ ಉಂಟಾಗಿದ್ದು, ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಶಿಫಾರಸು ಮಾಡಿದೆ.
ಒಂದೇ ಕಡೆ ದೀರ್ಘಕಾಲ ಸೇವೆ ಸಲ್ಲಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು. ಒಂದೇ ಸ್ಥಳದಲ್ಲಿ 3 ವರ್ಷಕ್ಕಿಂತ ಹೆಚ್ಚು ಕಾಲ ಕೆಲಸ ಮಾಡಲು ಅನುಮತಿ ನೀಡಬಾರದು. ಇಲಾಖೆಯಲ್ಲಿ ಕನಿಷ್ಠ 2 ವರ್ಷಗಳ ಕಾಲ ಕೂಲಿಂಗ್ ಅವಧಿ ನಿಗದಿ ಮಾಡಲಾಗಿದೆ. ಜತೆಗೆ ಪ್ರತಿವರ್ಷ ಜೈಲು ಸಿಬ್ಬಂದಿಗೆ ಆಧುನಿಕ ಭದ್ರತೆ ಮತ್ತು ಆಡಳಿತಾತ್ಮಕ ತರಬೇತಿ ಕೊಡುವುದರ ಮೂಲಕ ಸುಧಾರಣೆ ತರಬೇಕೆಂದು ಸೂಚನೆ ನೀಡಲಾಗಿದೆ.
ಮೂಲಸೌಕರ್ಯ ಸುಧಾರಣೆಗಳ ವಿಭಾಗದಲ್ಲಿ ಕಡ್ಡಾಯವಾಗಿ ಪ್ರತಿ ಜೈಲಿನಲ್ಲಿ ಬರ್ ವಲಯ ಗುರುತಿಸಬೇಕು. ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಬೇಕು. ಬಳ್ಳಾರಿ ಮತ್ತು ಮೈಸೂರು ಸೇರಿದಂತೆ ಹಲವು ಜೈಲುಗಳಲ್ಲಿ ಬರ್ ವಲಯ ಇಲ್ಲವಾಗಿದೆ. ಜೈಲಿನೊಳಗೆ ಅಕ್ರಮ ವಸ್ತುಗಳನ್ನು ಎಸೆಯುವರಿಗೆ ದಂಡ ವಿಧಿಸಬೇಕು. ಸುತ್ತಲ ಗೋಡೆಗಳ ಎತ್ತರವನ್ನು ಕನಿಷ್ಠ 30 ಅಡಿಗಳಿಗೆ ಹೆಚ್ಚಿಸಬೇಕು. ಏಕೆಂದರೇ ಪ್ರಸ್ತುತ ಸೆಂಟ್ರಲ್ ಜೈಲುಗಳಲ್ಲಿ 20 ಅಡಿಗಿಂತ ಕಡಿಮೆ ಇದೆ. ನಿಷೇಧಿತ ವಸ್ತುಗಳನ್ನು ಜೈಲಿನ ಒಳಗೆ ಸುಲಭವಾಗಿ ಎಸೆಯಬಹುದು. ಬರ್ ವಲಯದ ಮೇಲೆ ನಿಗಾ ವಹಿಸಲು ಸಿಸಿ ಕ್ಯಾಮರಾಗಳ ಸಂಖ್ಯೆ ಹೆಚ್ಚಿಸಬೇಕೆಂದು ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ.

ಬ್ಯಾರಕ್‌ಗಳಿಗೂ ಸಿಸಿ ಕ್ಯಾಮರಾ

ತಿಹಾರ್ ಜೈಲಿನಲ್ಲಿ 16 ಸಾವಿರ ಕೈದಿಗಳಿದ್ದು, 8,600 ಸಿಸಿ ಕ್ಯಾಮರಾಗಳಿವೆ. ಕೈದಿಗಳ ಸಾಮರ್ಥ್ಯದ ಶೇ.53.75 ಒಳಗೊಂಡಿದೆ. ಪರಪ್ಪನ ಅಗ್ರಹಾರದಲ್ಲಿ 5 ಸಾವಿರ ಕೈದಿಗಳಿಗೆ 332 ಕ್ಯಾಮರಾಗಳಿದ್ದು, ತನ್ನ ಸಾಮರ್ಥ್ಯ ಶೇ. 6.64 ಒಳಗೊಂಡಿದೆ. ಜೈಲಿನ ಬ್ಯಾರಕ್‌ಗಳ ಒಳಗೆ ಸಿಸಿ ಕ್ಯಾಮರಾಗಳು ಇಲ್ಲ. ತಿಹಾರ್ ಜೈಲು ಮತ್ತು ಚಂಚಲಗುಡ ಜೈಲಿನಲ್ಲಿ ಬ್ಯಾರಕ್‌ಗಳ ಒಳಗೆ ಸಿಸಿ ಕ್ಯಾಮರಾ ಅಳವಡಿಸಿ ಮೇಲ್ವಿಚಾರಣೆ ಹಲವಾರು ವರ್ಷಗಳಿಂದ ಜಾರಿಯಲ್ಲಿದೆ. ಆದರಿಂದ ಎಲ್ಲ ಜೈಲುಗಳ ಬ್ಯಾರಕ್‌ಗಳಲ್ಲಿ ಸಿಸಿ ಕ್ಯಾಮರಾ ಮತ್ತು ಶೌಚಗೃಹ ಪ್ರದೇಶದಲ್ಲಿ ಧ್ವನಿಗ್ರಹಣ ಸಾಧನ ಅಳವಡಿಸಬಹುದು. ಕ್ಯಾಮರಾ ದುರಸ್ತಿಗೊಂಡರೆ 24 ಗಂಟೆಗಳ ಒಳಗೆ ಸರಿಪಡಿಸಬೇಕು. ದಿನದ 24 ಗಂಟೆ ಮೇಲ್ವಿಚಾರಣೆಗೆ ಕೇಂದ್ರೀಕೃತ ನಿಯಂತ್ರಣ ಕೊಠಡಿ ಸ್ಥಾಪಿಸಬೇಕೆಂದು ಶಿಫಾರಸು ಮಾಡಲಾಗಿದೆ.

ಕಾವಲು ಗೋಪುರ

ಅನೇಕ ಕಾರಾಗೃಹಗಳಲ್ಲಿ 4 ಮೂಲೆಗಳಲ್ಲಿ ಇರುವ ಕಾವಲು ಗೋಪುರದ ಎತ್ತರವು ತೀರಾ ಕಡಿಮೆ ಇದ್ದು, ಹೆಚ್ಚಿಸಬೇಕಿದೆ. ಶಿವಮೊಗ್ಗ, ಮಂಗಳೂರು, ವಿಜಯಪುರ ಮತ್ತು ಬೀದರ್‌ನಲ್ಲಿ ಹೊಸ ಬ್ಯಾರಕ್‌ಗಳ ನಿರ್ಮಾಣ ಸೇರಿದಂತೆ ಬಾಕಿ ಇರುವ ಕಾಮಗಾರಿಗಳನ್ನು ಮುಗಿಸಬೇಕು. ಹೊಸ ಜೈಲುಗಳ ನಿರ್ಮಾಣ ಮತ್ತು ಕಾರ್ಯಾರಂಭ ತ್ವರಿತಗೊಳಿಸಿ ಸಾಧ್ಯವಾದಷ್ಟು ಶೀಘ್ರವೇ ಪೂರ್ಣ ಮಾಡಬೇಕೆಂದು ಶಿಫಾರಸು ಮಾಡಲಾಗಿದೆ.

ಮೊಬೈಲ್ ಜಾಮರ್ ಅಳವಡಿಕೆ

ಅಕ್ರಮವಾಗಿ ಮೊಬೈಲ್ ಬಳಸುವುದನ್ನು ತಡೆಗಟ್ಟಲು 5ಜಿ ಸಿಗ್ನಲ್‌ಗಳನ್ನು ನಿರ್ಬಂಧಿಸುವ ಸಾಮರ್ಥ್ಯ ಹೊಂದಿರುವ ಪೋರ್ಟಬಲ್ ಜಾಮರ್‌ಗಳನ್ನು ಅಳವಡಿಸಬೇಕು. ಇದರಿಂದ ದೇಶದ ಭದ್ರತೆ ಮತ್ತು ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net