2ನೇ ಏರ್‌ಪೋರ್ಟ್ ವಿರೋಧಿಸಿ ಸಹಿ ಸಂಗ್ರಹ

second-airport
second-airport
Published on

ಪ್ರಮುಖ ಮುಖ್ಯಾಂಶಗಳು

  • ಕನಕಪುರ ರಸ್ತೆಯ ಸುತ್ತಲಿನ ಗ್ರಾಮಗಳಲ್ಲಿ ಭೂಸ್ವಾಧೀನಕ್ಕೆ ಆಕ್ಷೇಪ
  • ಹೋರಾಟಕ್ಕೆ ಸಜ್ಜಾಗುತ್ತಿರುವ ರೈತರು ಹಾಗೂ ಸ್ಥಳೀಯರು

ಬೆಂಗಳೂರು: ಕನಕಪುರ ಸಮೀಪ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ವಿರೋಧಿಸಿ ನಾಗನಾಯಕನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಏರ್‌ಪೋರ್ಟ್ ನಿರ್ಮಾಣಕ್ಕೆ ಭೂಮಿ ಕೊಡಲು ನಿರಾಕರಿಸಿರುವ ರೈತರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ರೈತ ಹಿತರಕ್ಷ ಣಾ ಸಂಘದ ನೇತೃತ್ವದಲ್ಲಿ ಹೋರಾಟವನ್ನು ಕೈಗೊಂಡಿದ್ದಾರೆ.
ಉದ್ದೇಶಿತ ವಿಮಾನ ನಿಲ್ದಾಣಕ್ಕೆ ಚೂಡಹಳ್ಳಿ, ನಾಗನಾಯಕನಹಳ್ಳಿ, ಗುಡಿಪಾಳ್ಯ, ವಡ್ಡರಪಾಳ್ಯ, ಮಲ್ಲಿಪಾಳ್ಯ, ನಾರಾಯಣಪುರ, ಸೀಗೆಹಳ್ಳಿ, ಉತ್ತರಿ, ನೆಲಗುಳಿ, ಚಿನ್ನಕುರ್ಚಿ, ಕರೇನಹಳ್ಳಿ, ಕೊಡಿಯಾಲ ಕರೇನಹಳ್ಳಿ, ಚಿಕ್ಕಕುಂಟನಹಳ್ಳಿ, ದೊಡ್ಡಕುಂಟನಹಳ್ಳಿ ಸೇರಿ 15 ಗ್ರಾಮಗಳ ರೈತರ ಕೃಷಿ ಜಮೀನು ಸ್ವಾಧಿನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಸರ್ಕಾರದ ಏಕಾಏಕಿ ಕ್ರಮಕ್ಕೆ ವಿರೋಧ:

ಏರ್‌ಪೋರ್ಟ್ ನಿರ್ಮಾಣಕ್ಕೆ ಪೂರಕವಾಗಿ ಭೂಮಿ ಗುರುತಿಸುವ ಹಾಗೂ ಮಣ್ಣಿನ ಪರೀಕ್ಷೆ ಕಾರ್ಯವನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಈ ಭಾಗದ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಅಭಿಪ್ರಾಯ ಕೇಳದೆಯೇ ರಾಜ್ಯ ಸರ್ಕಾರ ಏಕಾಏಕಿ ಇಂತಹ ಕ್ರಮಕ್ಕೆ ಮುಂದಾಗಿರುವುದು ರೈತ ವಿರೋಧಿ ಧೋರಣೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ಗ್ರಾಮದಲ್ಲಿ ಸಭೆ ಆಯೋಜನೆ:

ವಿಮಾನ ನಿಲ್ದಾಣಕ್ಕೆ ಜಮೀನು ನೀಡಬೇಕೇ ಅಥವಾ ಬೇಡವೆ ಎಂಬ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲು ಪ್ರತಿ ಗ್ರಾಮದಲ್ಲಿ ಸಭೆ ನಡೆಸಲಾಗುತ್ತಿದೆ. ಏರ್‌ಪೋರ್ಟ್ ನಿರ್ಮಾಣವಾದರೆ ರೈತರು, ಮಹಿಳೆಯರು ಕೃಷಿ ಜಮೀನು, ಮನೆ ಕಳೆದುಕೊಂಡು ನಿರಾಶ್ರಿತರಾಗಲಿದ್ದಾರೆ. ಇದರಿಂದ ಯಾವ ಹಳ್ಳಿಗಳೂ ಉಳಿಯುವುದಿಲ್ಲ. ಯಾವುದೇ ಕಾರಣಕ್ಕೂ ಜಮೀನು ಬಿಟ್ಟುಕೊಡಬಾರದು ಎಂದು ಪ್ರತಿಭಟನಾಕಾರರು ಸ್ವಯಂ ನಿರ್ಧಾರ ಕೈಗೊಂಡಿದ್ದಾರೆ.
ಪ್ರತಿಭಟನೆಯಲ್ಲಿ ರಾಜ್ಯ ರೈತ ಹಿತರಕ್ಷಣಾ ಸಂಘದ ಅಧ್ಯಕ್ಷ ನದೀಮ್ ಪಾಷಾ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ರೈತ ಮುಖಂಡರಾದ ಕುಮಾರಸ್ವಾಮಿ, ವೆಂಕಟೇಶ್, ಕೆಂಚಯ್ಯ, ಸೀನಪ್ಪ, ರಾಮಯ್ಯ, ನರಸಿಂಹಯ್ಯ ಹಾಗೂ ಮತ್ತಿತರರಿದ್ದರು.
"

ವಿಮಾನ ನಿಲ್ದಾಣಕ್ಕೆ ಭೂಸ್ವಾಧಿನ ವಿರೋಧಿಸಿ ಎಲ್ಲ ಗ್ರಾಮಗಳಲ್ಲಿ ಸಭೆ ಮಾಡಿ ಸಹಿ ಸಂಗ್ರಹಿಸಿದ ನಂತರ ಸಮಿತಿ ರಚಿಸುತ್ತೇವೆ. ನಂತರ ಸಮಿತಿಯಿಂದ ಯೋಜನೆ ವಿರೋಧಿಸಿ ಸರಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತೇವೆ. ಬಳಿಕ ಸೂಕ್ತ ಜಾಗದಲ್ಲಿ ಅನಿರ್ದಿಷ್ಟಾವಧಿ ಧರಣಿ ಕೈಗೊಳ್ಳಲಾಗುವುದು.

- ಪ್ರಶಾಂತ್, ರಾಜ್ಯ ರೈತ ಹಿತರಕ್ಷಣಾ ಸಂಘದ ಪ್ರಧಾನ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net