

ಬೆಂಗಳೂರು: ಪಟ್ಟಂದೂರು ಅಗ್ರಹಾರ ನಿವಾಸಿ ವಕೀಲ ಮಂಜುನಾಥ್ ಅವರನ್ನು ಬಿಹಾರಿ ಗ್ಯಾಂಗ್ ಗುಂಡಿಕ್ಕಿ ಹತ್ಯೆಗೈದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳ ಗುರುತು ಪತ್ತೆ ಮಾಡಿರುವ ವೈಟ್ಫೀಲ್ಡ್ ವಿಭಾಗದ ಪೊಲೀಸರು ಹೊರ ರಾಜ್ಯಕ್ಕೆ 8 ವಿಶೇಷ ತಂಡಗಳನ್ನು ಕಳುಹಿಸಿ ಶೋಧಕಾರ್ಯ ಮುಂದುವರೆಸಿದ್ದಾರೆ.
ಮಂಜುನಾಥ್ ಅವರನ್ನು ಅ.18ರಂದು ಆರೋಪಿಗಳು ಮನೆ ಬಾಡಿಗೆ ನೀಡುವಂತೆ ಮನಗೆ ಆಗಮಿಸಿ ಅವರ ಹಣೆಗೆ ಗುಂಡಿಟ್ಟು ಹತ್ಯೆ ಮಾಡಿದ್ದರು. ಕೊಲೆ ಆರೋಪಿಗಳಿಬ್ಬರು ಬಿಹಾರ ರಾಜ್ಯದವರು ಎಂಬುದು ಪತ್ತೆಯಾಗಿದೆ. ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ಡೆಲಿವರಿ ಬಾಯ್ಗಳಾಗಿ ಕೆಲಸ ಮಾಡಿಕೊಂಡಿದ್ದರು. ಮಂಜುನಾಥ್ ಅವರನ್ನು ಶೂಟೌಟ್ ಮಾಡಿದ ಬಳಿಕ ಓರ್ವ ರೈಲಿನ ಮೂಲಕ ಚೆನ್ನೈಗೆ ತೆರಳಿದ್ದಾನೆ. ಮತ್ತೊಬ್ಬ ದ್ವಿಚಕ್ರ ವಾಹನದಲ್ಲಿ ಹೈದರಾಬಾದ್ಗೆ ತೆರಳಿದ್ದಾನೆ ಎಂದು ವೈಟ್ಫೀಲ್ಡ್ ವಿಭಾಗದ ಡಿಸಿಪಿ ಸೈದುಲ್ಲಾ ಅಡಾವತ್ ಅವರು ತಿಳಿಸಿದ್ದಾರೆ.
ಆರೋಪಿಗಳ ಪತ್ತಗೆ ದೆಹಲಿ, ಕೋಲ್ಕತ್ತಾ, ಬಿಹಾರ, ಚೆನ್ನೈ ಮತ್ತು ಹೈದರಾಬಾದ್ ಸೇರಿ ಹಲವು ರಾಜ್ಯಗಳಲ್ಲಿ ಒಟ್ಟು ಎಂಟು ತಂಡ ತನಿಖೆ ಕೈಗೊಂಡಿವೆ. ತನಿಖೆಗೆ ಸಿಸಿಬಿ ಪೊಲೀಸರ ತಾಂತ್ರಿಕ ನೆರವು ಪಡೆಯಲಾಗಿದೆ.ಬೆಂಗಳೂರು ನರದಲ್ಲಿ 5ಕ್ಕೂ ಹೆಚ್ಚು ತಂಡಗಳು ತನಿಖೆ ಕೈಗೊಂಡಿವೆ.
ಪಟ್ಟಂದೂರು ಅಗ್ರಹಾರದಲ್ಲಿ 2ರಿಂದ 3 ಎಕರೆ ಖಾಲಿ ಜಮೀನು ಹೊಂದಿದ್ದ ಮಂಜುನಾಥ್ ಅವರು ಖಾಲಿ ಜಾಗದಲ್ಲಿ ಶೆಡ್ಗಳನ್ನು ನಿರ್ಮಿಸಿ, ಬಿಹಾರ, ಒಡಿಶಾ, ಅಸ್ಸಾಂ, ಯುಪಿ ಸೇರಿ ವಿವಿಧ ರಾಜ್ಯದ ಕಾರ್ಮಿಕರಿಗೆ ಬಾಡಿಗೆ ನೀಡಿದ್ದರು. ಅದೇ ರೀತಿ ಆರೋಪಿಗಳಾದ ಬಿಹಾರದ ಅಂಕಿತ್, ಪವನ್ ಸೇರಿ ನಾಲ್ವರು ಒಂದು ಶೆಡ್ನ್ನು ಬಾಡಿಗೆಗೆ ನೀಡಲಾಗಿತ್ತು.
ಕೆಲ ತಿಂಗಳ ಬಾಡಿಗೆ ನೀಡಿರಲಿಲ್ಲ. ಇದೇ ವಿಚಾರವಾಗಿ ಮಂಜುನಾಥ್ ಹಾಗೂ ಆರೋಪಿಗಳ ನಡುವೆ ಕೆಲ ದಿನಗಳ ಹಿಂದೆ ಜಗಳ ನಡೆದಿತ್ತು. ಅ.18ರ ರಾತ್ರಿ ಮಂಜುನಾಥ್ ಆರೋಪಿಗಳ ಮನೆ ಬಳಿ ಬಂದು ಬಾಡಿಗೆ ವಿಚಾರವಾಗಿ ಜಗಳ ಮಾಡಿದ್ದರು. ಇದೇ ದ್ವೇಷದಿಂದ ಅಂದು ತಡರಾತ್ರಿ ಬಾಡಿಗೆ ಕೊಡುವ ವಿಚಾರಕ್ಕೆ ಮನೆಗೆ ಬಂದು ಕಂಟ್ರಿಮೆಡ್ ಪಿಸ್ತೂಲ್ನಿಂದ ಶೂಟೌಟ್ ಮಾಡಿ ಪರಾರಿಯಾಗಿದ್ದರು.