ಕೆ-100 ಜಲಮಾರ್ಗದಲ್ಲಿ ಕೊಳಚೆ ಹರಿವು

k-100 waterway
k-100 waterway
Published on

ಪ್ರಮುಖ ಮುಖ್ಯಾಂಶಗಳು

  • 5 ವರ್ಷದಿಂದ ಕುಂಟುತ್ತಾ ಸಾಗಿರುವ ಕಾಮಗಾರಿ
  • ತ್ಯಾಜ್ಯನೀರಿಗೆ ತಡೆ ಹಾಕುವಲ್ಲಿ ಜಲಮಂಡಳಿ ವೈಫಲ್ಯ
ಬೆಂಗಳೂರು: ಇಂಗ್ಲೆಂಡ್‌ನ ಥೇಮ್ಸ್ ನದಿ ಮಾದರಿಯಲ್ಲಿ ನಗರದ ಪ್ರಮುಖ ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸಲು ರೂಪಿಸಿರುವ ಕೆ-100 ನಾಗರಿಕ ಜಲಮಾರ್ಗದ ಕಾಮಗಾರಿ ಕುಂಟುತ್ತಾ ಸಾಗಿದೆ. ಐದು ವರ್ಷದ ಹಿಂದೆ ಕೈಗೆತ್ತಿಕೊಂಡಿರುವ ಈ ಕಾಮಗಾರಿ ಅಪೂರ್ಣಗೊಂಡಿದ್ದು, ಆಗಿರುವ ಕೆಲಸದ ಮಧ್ಯೆಯೂ ನೀರುಗಾಲುವೆಯಲ್ಲಿ ಕೊಳಚೆನೀರು ಹರಿಯುತ್ತಿದೆ.
ರಾಜಕಾಲುವೆಯಲ್ಲಿ ವಳೆನೀರು ಮಾತ್ರ ಹರಿಯಬೇಕು. ಅಂತಹ ವ್ಯವಸ್ಥೆ ಮಾಡಿ ಅಲ್ಲಿ ಬೋಟಿಂಗ್, ನಾಗರಿಕರಿಗೆ ವಿಹಾರ ತಾಣ, ಕಿರು ಉದ್ಯಾನ ಸಹಿತ ಸೌಂದರ್ಯಿಕರಣಗೊಳಿಸುವ ಪರಿಕಲ್ಪನೆಯೊಂದಿಗೆ ಕೆ-100 ಪ್ರಾಜೆಕ್ಟ್ ರೂಪಿಸಲಾಗಿತ್ತು. ಇದಕ್ಕಾಗಿ ಬೃಹತ್ ವೆಚ್ಚ ಮಾಡಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಆದರೀಗ ಈ ಪ್ರಾಜೆಕ್ಟ್ ಸೂಕ್ತ ನಿರ್ವಹಣೆ ಇಲ್ಲದೆ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ತ್ಯಾಜ್ಯ ಗುಂಡಿ ಆಗಿ ಪರಿವರ್ತನೆ ಆಗಿರುವುದು ತೆರಿಗೆದಾರರ ಹಣ ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದಂತಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ಕೊಳಚೆನೀರಿನಲ್ಲಿ ಅಭಿವೃದ್ಧಿ ಲೀನ?:

ಕೆ.ಆರ್. ಮಾರುಕಟ್ಟೆ ಬಳಿಯಿರುವ ಕುಂಬಾರಗುಂಡಿಯಿಂದ ಆರಂಭಗೊಂಡು ಬೆಳ್ಳಂದೂರು ಕೆರೆ ಸೇರುವ 9.2 ಕಿ.ಮೀ. ಉದ್ದಕ್ಕೂ ಇರುವ ರಾಜಕಾಲುವೆಯನ್ನು ಮೇಲ್ದರ್ಜೆಗೆ ಏರಿಸಲು 141 ಕೋಟಿ ರೂ. ಮೊತ್ತದ ಟೆಂಡರ್ ಆಹ್ವಾನಿಸಲಾಗಿತ್ತು. ಕಾರ್ಯಾದೇಶ ನೀಡುವ ವೇಳೆಗೆ 28 ಕೋಟಿ ರೂ. ಹೆಚ್ಚು ಮಾಡಿ 169 ಕೋಟಿ ರೂ.ಗೆ ಏರಿಸಲಾಯಿತು. ಈ ಮೊತ್ತದಲ್ಲಿ ನೀರುಗಾಲುವೆಯಲ್ಲಿ ಹೂಳೆತ್ತುವಿಕೆ, ತಡೆಗೋಡೆ / ಕಿರು ಸೇತುವೆ ನಿರ್ಮಾಣ, ಅಲ್ಲಲ್ಲಿ ಸಾರ್ವಜನಿಕರಿಗೆ ವಿಹಾರ ತಾಣ, ಕಿರು ಉದ್ಯಾನ ನಿರ್ಮಿಸಲು ಸೂಚಿಸಲಾಗಿತ್ತು. ಜತೆಗೆ ರಾಜಕಾಲುವೆ ಒಳಗೆ ಕೊಳಚೆಮುಕ್ತ ನೀರು ಮಾತ್ರ ಹರಿದು ಅಲ್ಪಸ್ವಲ್ಪ ಸೀವೇಜ್ ವಾಟರ್ ಹೀರಿಸಿಕೊಳ್ಳುವ ವಿಶೇಷ ಪ್ರಭೇದದ ಸಸ್ಯಗಳನ್ನು ಬೆಳೆಸಿ ಮಳೆನೀರು ಮಾತ್ರ ಹರಿಯುವಂತೆ ಮಾಡಬೇಕಿತ್ತು. ಆದರೆ, ಕಾರ್ಯಾದೇಶದ ಪ್ರಕಾರ ಯಾವ ಕಾಮಗಾರಿಯನ್ನೂ ಪೂರ್ಣ ಪ್ರಮಾಣದಲ್ಲಿ ಕೈಗೊಂಡಿಲ್ಲ. ಐದು ವರ್ಷದಲ್ಲಿ ತೆಗೆದ ಹೂಳು ಈಗ ಮತ್ತೆ ಅಲ್ಲಲ್ಲಿ ಆವರಿಸಿ ಹಿಂದಿನಂತೆ ದುರ್ವಾಸನೆ ಬೀರುತ್ತಿದೆ. ಜತೆಗೆ ಸಮೀಪದ ನಾಗರಿಕರ ಕಸ ಎಸೆಯುವಿಕೆಗೆ ತಡೆಬಿದ್ದಿಲ್ಲ. ಹಾಗಾಗಿ ಇಡೀ ಯೋಜನೆ ನಿಷ್ಪ ನಿಷ್ಪ್ರಯೋಜಕವಾಗಿ ಮಾರ್ಪಟ್ಟಿದೆ.
ಸದ್ಯ ಶೇ.80 ಕಾಮಗಾರಿ ಪೂರ್ಣಗೊಂಡಿದೆ. ಎಸ್‌ಟಿಪಿ ಸ್ಥಾಪನೆ ಕಾರ್ಯ ಪೂರ್ಣಗೊಂಡಿದೆ. 300 ಮೀ. ಮಾತ್ರ ಕಾಮಗಾರಿ ಕೈಗೊಳ್ಳುವುದು ಬಾಕಿ ಇದೆ. ಇದಕ್ಕೆ ಜಾಗದ ತಗಾದೆ ಇದ್ದು, 2 ದಿನದ ಹಿಂದೆಯಷ್ಟೇ ಅನುಮತಿ ದೊರೆತಿದೆ. ಮುಂದಿನ ಜುಲೈ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಗಡುವು ವಿಧಿಸಿ ಸೂಚಿಸಲಾಗಿದೆ. ಆದರೆ, ಜಲಮಂಡಳಿಯು ರಾಜಕಾಲುವೆಯ ಅಲ್ಲಲ್ಲಿ ತ್ಯಾಜ್ಯನೀರು ಹರಿಯುವುದನ್ನು ಪೂರ್ಣವಾಗಿ ತಡೆಯದ ಕಾರಣ ಕೆ-100 ಜಲಮಾರ್ಗದಲ್ಲಿ ಮತ್ತೆ ಕೊಳಚೆನೀರು ಸೇರಿಕೊಂಡಿದೆ. ಇದನ್ನು ನಿವಾರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಜಿಬಿಎ ಮಳೆನೀರು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಕಾಮಗಾರಿ ಪೂರ್ಣಕ್ಕೆ ಮುನ್ನ ಬಿಲ್ ಪಾವತಿ:

ಸರ್ಕಾರದ ನಿಯಮಗಳ ಪ್ರಕಾರ ಟೆಂಡರ್ ಪಡೆದ ಗುತ್ತಿಗೆದಾರನಿಗೆ ಕಾಮಗಾರಿ ಪೂರ್ಣಗೊಳಿಸಿದ ಬಳಿಕ ತಪಾಸಣೆ ನಡೆಸಿ ಬಿಲ್ ಪಾವತಿಸಬೇಕು. ಆದರೆ, ಕೆ-100 ಯೋಜನೆಯ ಗುತ್ತಿಗೆ ಪಡೆದಿರುವ ಕಂಪನಿಗೆ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಬಿಲ್ ಪಾವತಿಸಲಾಗಿದೆ. ಬರೋಬರಿ 169 ಕೋಟಿ ರೂ. ಪಾವತಿಸಿರುವ ಬಗ್ಗೆ ಜಿಬಿಎ ಮುಖ್ಯಸ್ಥರಿಗೆ ದೂರು ನೀಡಿದ್ದರೂ, ಈವರೆಗೂ ಕ್ರಮ ಕೈಗೊಂಡಿಲ್ಲ. ಸೌಂದರ್ಯಿಕರಣದ ಹೆಸರಿನಲ್ಲಿ ಅನಗತ್ಯ ವೆಚ್ಚ ಮಾಡಿದ್ದು, ದುಬಾರಿ ಬೆಲೆಯ ಗ್ರಾನೈಟ್ ಕಲ್ಲುಗಳನ್ನು ಬಳಸಲಾಗಿದೆ. ಕಾಮಗಾರಿ ಪೂರ್ಣವಾಗದೆ ಹಣ ಬಿಡುಗಡೆ ಮಾಡಿದ್ದು ಸರಿಯೆ ಎಂಬ ಜನಪ್ರತಿನಿಧಿಗಳ ಪ್ರಶ್ನೆಗೆ ಅಧಿಕಾರಿಗಳು ನಿರುತ್ತರರಾಗಿದ್ದಾರೆ.

ಸಿಎಸ್ ಮೇಲ್ವಿಚಾರಣೆ ವಹಿಸಿದ್ದ ಪ್ರಾಜೆಕ್ಟ್:

ಬಿ.ಎಸ್. ಯಡಿಯೂಪ್ಪ ಕೊನೆಯ ಅವಧಿಯ ಸಿಎಂ ಆಗಿದ್ದಾಗ ಕೆ-100 ಜಲಮಾರ್ಗ ಯೋಜನೆಗೆ ಅನುಮೋದನೆ ನೀಡಲಾಯಿತು. ನಂತರ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಈಗ ಸಿದ್ದರಾಮಯ್ಯ ಸಿಎಂ ಆಗಿರುವಾಗಲೂ ಕಾಮಗಾರಿ ಪೂರ್ಣಗೊಂಡಿಲ್ಲ. ವಿಶೇಷವೆಂದರೆ, ಸರ್ಕಾರದ ಮುಖ್ಯ ಕಾರ್ಯದರ್ಶಿಯು ಈ ಹಿಂದೆ ಅಭಿವೃದ್ಧಿ ಆಯುಕ್ತರು ಹುದ್ದೆಯಲ್ಲಿದ್ದಾಗ ವೇಳೆ ಕೆ-100 ಪ್ರಾಜೆಕ್ಟ್‌ನ ಕಾಮಗಾರಿಯನ್ನು 2-3 ಬಾರಿ ಸ್ಥಳಪರಿಶೀಲನೆ ನಡೆಸಿ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸೂಚಿಸಿದ್ದರು. ಅವರು ಸಿಎಸ್ ಆದ ಮೇಲೂ ಪಾಲಿಕೆಗೆ ತಾಕೀತು ಮಾಡಿದ್ದರೂ, ಮಹತ್ವಾಕಾಂಕ್ಷಿ ಯೋಜನೆ ಪೂರ್ಣಗೊಳಿಸಲು ಅಧಿಕಾರಿಗಳು ತಿಣುಕಾಡುತ್ತಿದ್ದಾರೆ ಎಂಬ ಆಕ್ಷೇಪ ಕೇಳಿಬಂದಿದೆ.

ಯೋಜನೆಗೆ ಸಹಕರಿಸದ ಜಲಮಂಡಳಿ:

ಕೆ-100 ಯೋಜನೆಯನ್ನು ಸಾಕಾರಗೊಳಿಸಬೇಕಾದರೆ ರಾಜಕಾಲುವೆಯಲ್ಲಿ ಹರಿಯುವ ತ್ಯಾಜ್ಯನೀರನ್ನು ಶೇ.100 ತಡೆ ಹಿಡಿಯುವಂತೆ ಸರ್ಕಾರ ಸೂಚಿಸಿತ್ತು. ಇದಕ್ಕಾಗಿ ಬಿಬಿಎಂಪಿ ಹಾಗೂ ಜಲಮಂಡಲಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಒಳಗೊಂಡ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಮೇಲುಸ್ತುವಾರಿ ವಹಿಸಿದ್ದರೂ, ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ. ಜತೆಗೆ ನೀರುಗಾಲುವೆ ಮಾರ್ಗದುದ್ದಕ್ಕೂ, ಏಳೆಂಟು ಕಡೆಗಳಲ್ಲಿ ಕೊಳಚೆನೀರು ಹರಿಸದಿರಲು ಪ್ರತ್ಯೇಕ ಕೊಳವೆ ಅಳವಡಿಸಲು ಹೇಳಿದ್ದರೂ, ಈವರೆಗೂ ಆ ಕಾರ್ಯವನ್ನು ಪೂರ್ಣಗೊಳಿಸಿಲ್ಲ. ಈ ಒಂದು ಕಾರಣದಿಂದಾಗಿ ಇಡೀ ಯೋಜನೆ ವೈಫಲ್ಯ ಕಂಡಂತಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net