

ಬೆಂಗಳೂರು: ನಗರದಲ್ಲಿ ಈಗಾಗಲೇ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಆರಂಭವಾಗಿದ್ದು, ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ.
ದೀಪಾವಳಿ ಅಂದಮೇಲೆ ದೀಪಗಳದ್ದೇ ಕಾರುಭಾರು. ಹೀಗಾಗಿ ಮಾರುಕಟ್ಟೆಗಳಲ್ಲಿ ಬಣ್ಣ ಬಣ್ಣದ ಆಕರ್ಷಕ ವಿನ್ಯಾಸದ ಮಣ್ಣಿನ ದೀಪಗಳನ್ನು ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ. ಜತೆಗೆ ವಿವಿಧ ವಿನ್ಯಾಸದ ಸಾಂಪ್ರದಾಯಿಕ ಹಣತೆಗಳಿಗೂ ಬೇಡಿಕೆ ಹೆಚ್ಚಿದೆ. ಪೂಜೆಗೆ ಬಳಸುವ ಸಾಂಪ್ರದಾಯಿಕ ಹಿತ್ತಾಳೆ ಹಾಗೂ ಆಭರಣ ಮಳಿಗೆಗಳಲ್ಲಿ ಬೆಳ್ಳಿ ದೀಪಗಳ ಖರೀದಿಯೂ ಸಾಗಿದೆ.
ದೀಪದ ಎಣ್ಣೆ ದರ ಹೆಚ್ಚಳವಾಗಿರುವ ಹಿನ್ನೆಲೆ ಮಾಸಾದ್ಯಂತ ನಿತ್ಯ ದೀಪಗಳನ್ನು ಹೆಚ್ಚಬೇಕಿರುವುದರಿಂದ ಕಡಿಮೆ ವಿದ್ಯುತ್ ಬಳಸುವ ಎಲ್ಇಡಿ ದೀಪಮಾಲೆಗಳು ಹಾಗೂ ನೀರಿನಿಂದ ಉರಿಯುವ ವಾಟರ್ ಸೆನ್ಸರ್ ದೀಪಗಳತ್ತ ಜನರು ಆಸಕ್ತಿ ತೋರುತ್ತಿದ್ದು, ಅವುಗಳ ಮಾರಾಟವೂ ಭರದಿಂದ ಸಾಗಿದೆ.
ಆಕಾಶಬುಟ್ಟಿಗಳು:
ದೀಪಾವಳಿಯಲ್ಲಿ ಸಂಜೆಯಾಗುತ್ತಿದ್ದಂತೆ ಮನೆಯ ಮುಂಬಾಗಿಲಿನಲ್ಲಿ ದೀಪಗಳನ್ನು ಹಚ್ಚಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಹಬ್ಬದ ಸಂದರ್ಭದಲ್ಲಿ ಮನೆಗಳ ಮುಂಬಾಗಿಲಲ್ಲಿ ಆಕರ್ಷಕ ಬಣ್ಣದ ಆಕಾಶ ಬುಟ್ಟಿಗಳನ್ನು ನೇತು ಹಾಕಲಾಗುತ್ತದೆ. ಹಾಗಾಗಿ ನೂರರಿಂದ ಸಾವಿರ ರೂ.ಗಳ ಬೆಲೆಯ ಬುಟ್ಟಿಗಳನ್ನು ಜನರು ಕೊಳ್ಳುತ್ತಿದ್ದಾರೆ.
ವಿಶಿಷ್ಟ ಮಣ್ಣಿನ ಹಣತೆಗಳು
ಕೆ.ಆರ್. ಮಾರುಕಟ್ಟೆ ಸೇರಿ ನಗರದ ಎಲ್ಲ ಮಾರುಕಟ್ಟೆಗಳಲ್ಲಿ ಮಣ್ಣಿನ ಹಣತೆಗಳು ಲಭ್ಯವಿವೆ. ಆದಾಗ್ಯೂ ಕೆಲ ಪ್ರದೇಶಗಳು ದೀಪಗಳ ಮಾರಾಟದಲ್ಲಿ ತನ್ನದೇ ಆದ ವಿಶೇಷತೆ ಹೊಂದಿವೆ. ನಗರದ ಪಾಟರಿ ಟೌನ್ ಮಣ್ಣಿನ ಹಣತೆಗಳ ತಯಾರಿಕೆ ಮತ್ತು ಮಾರಾಟಕ್ಕೆ ಪ್ರಸಿದ್ಧಿ ಪಡೆದುಕೊಂಡಿದೆ. ಗಾಂಧಿ ಬಜಾರ್ ಸಾಂಪ್ರದಾಯಿಕ ಹಾಗೂ ಅಲಂಕಾರಿಕ ದೀಪಗಳು, ಮಲ್ಲೇಶ್ವರ ಹಣತೆಗಳು ಮತ್ತು ಹಬ್ಬದ ಅಲಂಕಾರಿಕ ವಸ್ತುಗಳು, ಜಯನಗರದಲ್ಲಿ ತರಹೇವಾರಿ ದೀಪಗಳು ದೊರೆಯಲಿವೆ.