ಉದ್ಯಮಿ ಹತ್ಯೆಗೆ 30 ಲಕ್ಷ ರೂ. ಸುಪಾರಿ ಐವರ ಬಂಧನ

ಹತ್ಯೆ ಬಳಿಕ ಆರೋಪಿಗಳು ಧರ್ಮಸ್ಥಳ ದೇವರ ದರ್ಶನ
Murder
Murder
Published on: 

ಬೆಂಗಳೂರು:ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಚರಣ್ ಗೌಡ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ. ಆದರೆ, ಉದ್ಯಮಿ ಹತ್ಯೆಗೆ 30 ಲಕ್ಷ ರೂ. ಸುಪಾರಿ ಪಡೆದಿದ್ದರುವ ವಿಚಾರ ಬೆಳಕಿಗೆ ಬಂದಿದೆ.

ಸುಪಾರಿ ನೀಡಿರುವ ಪ್ರಮುಖ ಆರೋಪಿ ಕಿರಣ್‌ಗೌಡ (24), ಆಕಾಶ್ (19), ಕಿರಣ್ ಕುಮಾರ್ (40), ಎ.ಲೋಕೇಶ್ ಅಲಿಯಾಸ್ ಲೋಕಿ (47), ಎಂ.ವಿ.ರುದ್ರೇಶ್ (39) ಬಂಧಿತ ಆರೋಪಿಗಳು.

ಮೃತ ಚರಣ್ ಗೌಡ ಹಾಗೂ ಆರೋಪಿ ಕಿರಣ್‌ಗೌಡ ಹಲವು ವರ್ಷಗಳಿಂದ ಪರಿಚಯಸ್ಥರು. ಇಬ್ಬರೂ ಆರಂಭದಲ್ಲಿ ಒಂದೇ ಕಡೆ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಬಳಿಕ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಇಳಿದಿದ್ದರು. ಒಟ್ಟಿಗೆ ವ್ಯವಹಾರ ನಡೆಸುತ್ತಿದ್ದ ಇಬ್ಬರ ನಡುವೆ ಕೆಲ ತಿಂಗಳುಗಳಿಂದ ಹಣಕಾಸಿನ ವಿಚಾರರಕ್ಕೆ ಭಿನ್ನಾಭಿಪ್ರಾಯ ಬಂದಿದೆ. ಚರಣ್ ಗೌಡ ತನಗೆ ವ್ಯವಹಾರದಲ್ಲಿ ಮೋಸ ಮಾಡಿದ್ದಾನೆ ಎಂದು ತಿಳಿದಿದ್ದ ಕಿರಣ್.

ಇದರಿಂದ ಕೋಪಗೊಂಡಿದ್ದ ಕಿರಣ್, ಚರಣ್ ಗೌಡನನ್ನ ಹತ್ಯೆ ಮಾಡಲು ನಿರ್ಧರಿಸಿದ್ದ. ತನಿಗೆ ಆಪ್ತನಾಗಿದ್ದ ಎಂ.ವಿ.ರುದ್ರೇಶ್ ಎಂಬಾತನಿಗೆ 30 ಲಕ್ಷ ಸುಪಾರಿ ಡೀಲ್ ಮಾತುಕತೆ ನಡೆಸಿ, 15 ಲಕ್ಷ ರೂ. ಅಡ್ವಾನ್ಸ್ ನೀಡಿದ್ದ. ಆದರೆ ಸುಪಾರಿ ಪಡೆದಿದ್ದ ರುದ್ರೇಶ್ ಒಂದೂವರೆ ವರ್ಷ ಕಳೆದರೂ ಹತ್ಯೆ ಮಾಡಿರಲಿಲ್ಲ. ಮತ್ತೊಂದೆಡೆ, ಚರಣ್ ಗೌಡ ಹತ್ಯೆಗೆ ಸುಪಾರಿ ನೀಡಿರುವ ವಿಚಾರ ಪರಿಚಿತರ ವಲಯದಲ್ಲಿ ಹರಿದಾಡತೊಡಗಿತ್ತು. ಇದರಿಂದ ಆತಂಕಗೊಂಡ ಕಿರಣ್, ತನ್ನ ಹೆಸರು ಹೊರಬರುತ್ತಿದೆ ಎಂದು ಹೇಳಿ ಸುಪಾರಿ ಡೀಲ್ಗೆ ಒಪ್ಪಿರಲಿಲ್ಲ.

ಅಡ್ವಾನ್ಸ್ ರೂಪದಲ್ಲಿ 15 ಲಕ್ಷವನ್ನು ವಾಪಸ್ ನೀಡಲು ರುದ್ರೇಶ್‌ಗೆ ಮನಸ್ಸಿರಲಿಲ್ಲ. ಹೀಗಾಗಿ ಹತ್ಯೆಗೈದು ಮುಗಿಸಿದರೆ ಉಳಿದ ಹಣವನ್ನೂ ಪಡೆಯಬಹುದು ಎಂದು ಯೋಚಿಸಿದ ರುದ್ರೇಶ್, ತನ್ನ ಸ್ನೇಹಿತ ಲೋಕೇಶ್‌ನನ್ನು ಈ ಸಂಚಿನಲ್ಲಿ ಸೇರಿಸಿಕೊಂಡಿದ್ದ. ಸ್ವಲ್ಪ ಹಣದ ಆಸೆ ತೋರಿಸಿ ಕೃತ್ಯದ ಜವಾಬ್ದಾರಿಯನ್ನ ಲೋಕೇಶ್‌ಗೆ ವಹಿಸಿದ್ದ ಎಂಬುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಸುಪಾರಿ ಪಡೆದ ಮೂರನೇ ಆರೋಪಿ ಲೋಕೇಶ್ ಅಲಿಯಾಸ್ ಲೋಕಿ, ತನ್ನ 20 ವರ್ಷದ ಮಗ ಕಿರಣ್‌ನನ್ನು ಚರಣ್ ಗೌಡನ ಹತ್ಯೆಗೆ ಪ್ರಚೋದಿಸಿದ್ದ ಎನ್ನಲಾಗಿದೆ. ಹತ್ಯೆ ಮಾಡಿದರೆ ದೊಡ್ಡ ಮೊತ್ತದ ಹಣ ಸಿಗುತ್ತದೆ, ನಿನ್ನ ಜೀವನವೇ ಬದಲಾಗುತ್ತದೆ ಎಂದು ಮಗನ ಮನವೊಲಿಸಿದ್ದ. ತಂದೆಯ ಮಾತು ನಂಬಿ ಹಣದ ಆಸೆಗೆ ಬಿದ್ದ ಮಗ ಕಿರಣ್, ತನ್ನ ಸ್ನೇಹಿತ ಆಕಾಶ್‌ನೊಂದಿಗೆ ಸೇರಿಕೊಂಡು ಉದ್ಯಮಿ ಚರಣ್‌ಗೌಡನನ್ನು ನ.13ರಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಹತ್ಯೆಯ ಬಳಿಕ ಆರೋಪಿಗಳು ಧರ್ಮಸ್ಥಳಕ್ಕೆ ತೆರಳಿ ದೇವರ ದರ್ಶನ ಪಡೆದಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಬಂಧಿತ ಐವರು ಆರೋಪಿಗಳಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ, ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಜಿ.ಕೆ ಮಿಥುನ್ ಕುಮಾರ್ ತಿಳಿಸಿದ್ದಾರೆ.