ಇ.ವಿ. ವಾಹನಗಳ ಮೇಲೂ ತೆರಿಗೆ ಭಾರ | EV

ಇವಿ ವಾಹನಗಳು
ಇವಿ ವಾಹನಗಳು
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯಸರ್ಕಾರದಿಂದ ಮಸೂದೆ ಮಂಡನೆ, ಶ್ರೀ ಅನುಷ್ಠಾನ
  • ದೇಶಾದ್ಯಂತ ವಿದ್ಯುತ್​ಚಾಲಿತ ವಾಹನಗಳಿಗೆ ಹೆಚ್ಚಿದ ಬೇಡಿಕೆ
  • ಹೊಸ ತಂತ್ರಜ್ಞಾನಕ್ಕೆ ಪ್ರೋತ್ಸಾಹ ನೀಡಲು ತಜ್ಞರ ಸಲಹೆ
ಪವನ್​ ಆಚಾರ್ಯ ನೀರ್ಚಾಲು ಬೆಂಗಳೂರು 
ದೇಶಾದ್ಯಂತ ವಿದ್ಯುತ್​ಚಾಲಿತ ವಾಹನಗಳಿಗೆ (ಇ.ವಿ.) ಬೇಡಿಕೆ ಹೆಚ್ಚಾದ ಬೆನ್ನಲ್ಲೇ ರಾಜ್ಯ ಸರ್ಕಾರ ಇ.ವಿ. ವಾಹನಗಳ ಮೇಲೆ ರಸ್ತೆ ತೆರಿಗೆ ವಿಧಿಸಲು ತೀರ್ಮಾನಿಸಿದೆ. ಇ.ವಿ. ವಾಹನಗಳಿಗೆ ಇರುವ ತೆರಿಗೆ ವಿನಾಯಿತಿಯನ್ನು ಕಡಿತಗೊಳಿಸಿ ಜೀವಿತಾವಧಿ ರಸ್ತೆ ತೆರಿಗೆ ವಿಧಿಸುವ ಮಸೂದೆಯನ್ನು ಅಧಿವೇಶನದಲ್ಲಿ ಮಂಡನೆಯಾಗಿದ್ದು, ಶ್ರೀವೇ ಅನುಷ್ಠಾನಕ್ಕೆ ಬರಲಿದೆ. 
ರಾಜ್ಯದಲ್ಲಿ 3.36 ಕೋಟಿ ವಾಹನಗಳಿದ್ದು, ಅದರಲ್ಲಿ 4 ಲಕ್ಷಕ್ಕೂ ಅಧಿಕ ಇ.ವಿ. ವಾಹನಗಳಿವೆ. ಉಳಿದ ವಾಹನಗಳಿಂದ ಅಂದಾಜು 10 ಕೋಟಿ ರೂ.ಗೂ ಅಧಿಕ ರಸ್ತೆ ತೆರಿಗೆ ಸಂಗ್ರಹವಾಗುತ್ತಿದ್ದು, ಇ.ವಿ. ವಾಹನಗಳಿಗೆ ತೆರಿಗೆ ಸಂಪೂರ್ಣ ವಿನಾಯಿತಿ ಮಾಡಲಾಗಿದೆ. ಮಸೂದೆ ಜಾರಿಗೆ ಬಂದಲ್ಲಿ ರಾಜ್ಯದಲ್ಲಿ ಇ.ವಿ. ವಾಹನಗಳ ಬಳಕೆ ವೇಗವಾಗಿ ಕುಂಠಿತವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ತಂತ್ರಜ್ಞಾನ ಇನ್ನೂ ಅಭಿವೃದ್ಧಿ ಹಂತದಲ್ಲಿರುವುದರಿಂದ ಸರ್ಕಾರದಿಂದ ಪ್ರೋತ್ಸಾಹ ಕ್ರಮಗಳ ಅಗತ್ಯವಿದೆ. ಇಲ್ಲದಿದ್ದರೆ ಇ.ವಿ. ವಾಹನಗಳನ್ನು ಖರೀದಿ ಮಾಡಲು ಜನ ಹಿಂದೇಟು ಹಾಕಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇ.ವಿ. ಮಾರಾಟದಲ್ಲಿ ಶೇ.30 ಏರಿಕೆ:  ಮಧ್ಯಪ್ರಾಚ್ಯದಲ್ಲಿನ ಯುದ್ಧ ಕೆಲವು ಕ್ಷೇತ್ರಗಳಿಗೆ ದೊಡ್ಡ ಹೊಡೆತ ತಂದುಕೊಟ್ಟರೆ, ಇನ್ನೂ ಕೆಲವು ಕ್ಷೇತ್ರಗಳಿಗೆ ಅದೇ ಅವಕಾಶವಾಗಿ ಪರಿಣಮಿಸಿದೆ. ಭಾರತಕ್ಕೆ ಪೂರೈಕೆಯಾಗುವ ಇಂಧನದಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಇಂಧನ ಕೊರತೆ ಸಮಸ್ಯೆ ದಟ್ಟವಾಗಿದೆ. ಪ್ರೀಮಿಯಂ ಪೆಟ್ರೋಲ್​ ಬೆಲೆ ಈಗಾಗಲೇ ಏರಿಕೆಯಾಗಿದೆ.  ಮುಂದಿನ ದಿನಗಳಲ್ಲಿ ಸಾಮಾನ್ಯ ಪೆಟ್ರೋಲ್​ ಹಾಗೂ ಡೀಸೆಲ್​ ದರಗಳು ಅಧಿಕವಾಗುವ ಆತಂಕ ಜನರಲ್ಲಿ ಮೂಡಿದೆ. ಈ ಹಿನ್ನೆಲೆ ಬಹುತೇಕ ಜನರು ಭವಿಷ್ಯದಲ್ಲಿ ಇಂಧನ ಸಮಸ್ಯೆಯಿಂದ ದೂರವಿರಲು ಎಲೆಕ್ಟ್ರಿಕ್​ ವಾಹನಗಳನ್ನು ಖರೀದಿಸಲು ಮನಸ್ಸು ಮಾಡುತ್ತಿದ್ದಾರೆ. ಏಪ್ರಿಲ್​ನಿಂದ ಜಾರಿಗೆ ಬಂದಿರುವ ಹೊಸ ರಸ್ತೆ ತೆರಿಗೆ ನೀತಿಯ ಪರಿಣಾಮವೂ ಮಾರ್ಚ್​ನಲ್ಲಿ ಎಲೆಕ್ಟ್ರಿಕ್​ ವಾಹನಗಳನ್ನು ಖರೀದಿಸಲು ಜನರಿಗೆ ಉತ್ತೇಜನೆ ನೀಡಿದೆ. ಜನವರಿ ಮತ್ತು ಫೆಬ್ರವರಿಗೆ ಹೋಲಿಸಿದರೆ ಮಾರ್ಚ್​ ಅಂತ್ಯಕ್ಕೆ ಇ.ವಿ. ಬೈಕ್​, ಆಟೋ ಹಾಗೂ ಕಾರುಗಳ ಮಾರಾಟದಲ್ಲಿ ಶೇ.30 ಏರಿಕೆ ಕಂಡುಬಂದಿದೆ.
ಪರಿಸರ ಕಾಳಜಿಯೂ ಮುಖ್ಯ
ಭಾರತದಲ್ಲಿ ಇ.ವಿ. ವಾಹನಗಳ ಬೇಡಿಕೆ ಕಳೆದ ಒಂದು ವರ್ಷದಲ್ಲಿ ಗಮನಾರ್ಹವಾಗಿ ಹೆಚ್ಚಾಗಿದೆ. ಕೇಂದ್ರ ಸರ್ಕಾರದ ಉತ್ತೇಜನಾ ಯೋಜನೆಗಳು, ರಾಜ್ಯಮಟ್ಟದ ಸಬ್ಸಿಡಿಗಳು ಹಾಗೂ ಇಂಧನ ವೆಚ್ಚದ ಉಳಿತಾಯ ಸೇರಿ ಗ್ರಾಹಕರನ್ನು ಇ.ವಿ. ಖರೀದಿಯತ್ತ ಆಕರ್ಷಿಸುತ್ತಿವೆ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ದಿನನಿತ್ಯ ಪ್ರಯಾಣ ಮಾಡುವ ಮಧ್ಯಮ ವರ್ಗದ ಜನರು ಈ ವಾಹನಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇನ್ನು ಪರಿಸರ ಸಂರಕ್ಷಣೆಯ ಕುರಿತಾಗಿ ಹೆಚ್ಚುತ್ತಿರುವ ಜಾಗೃತಿ ಹಾಗೂ ಕಾರ್ಬನ್​ ಪರಿಣಾಮಗಳ ಕಡಿತಗೊಳಿಸುವ ಅಗತ್ಯವೂ ಈ ಬದಲಾವಣೆಗೆ ಉತ್ತೇಜನ ನೀಡುತ್ತಿದೆ. ಒಟ್ಟಾರೆ, ಯುದ್ಧದ ಪರಿಣಾಮದಿಂದ ಉಂಟಾದ ಇಂಧನ ಸಂಕಷ್ಟ, ಸರ್ಕಾರದ ಬೆಂಬಲ ಹಾಗೂ ಪರಿಸರ ಕಾಳಜಿ ಸೇರಿ ಭಾರತದಲ್ಲಿ ಎಲೆಕ್ಟ್ರಿಕ್​ ವಾಹನಗಳ ಮಾರಾಟವನ್ನು ವೇಗವಾಗಿ ಹೆಚ್ಚಿಸುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಚಾರ್ಜಿಂಗ್​ ಸ್ಟೇಷನ್​ಗಳ ಹೆಚ್ಚಳ
ನಗರದಲ್ಲಿ ಒಂದೇ ದಿನ (ಮಾ. 31) ಸುಮಾರು 13 ಸಾವಿರ ಎಲೆಕ್ಟ್ರಿಕ್​ ವಾಹನಗಳು ನೋಂದಣಿಯಾಗಿರುವುದು ದಾಖಲೆಯಾಗಿದೆ.  ಚಾರ್ಜಿಂಗ್​ ಮೂಲಸೌಕರ್ಯದ ಅಭಿವೃದ್ಧಿ ಕೂಡ ಇ.ವಿ. ವಿಸ್ತರಣೆಗೆ ಮುಖ್ತಯ ಕಾರಣ. ವಾಹನ ತಯಾರಿಕಾ ಕಂಪನಿಗಳೂ ಹೊಸ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಸ್ಪರ್ಧೆಯನ್ನು ಹೆಚ್ಚಿಸುತ್ತಿವೆ.

ಇ.ವಿ. ವಾಹನಗಳನ್ನು ಖರೀದಿಸುವುದರಿಂದ ಲಾಭವೇ ಹೆಚ್ಚು. ಪೆಟ್ರೋಲ್​ ವಾಹನಗಳು ಕಡಿಮೆ ಮೈಲೇಜ್​ ನೀಡುತ್ತಿರುವುದು ಮಾತ್ರವಲ್ಲದೆ, ಇಂಧನ ಬೆಲೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ನಿರ್ವಹಣೆ ಕಷ್ಟ ಎನಿಸಿದೆ. ಬದಲಾಗಿ ಇ.ವಿ. ವಾಹನಗಳಿಗೆ ಒಮ್ಮೆ ಚಾರ್ಜಿಂಗ್​ ಮಾಡಿದರೆ ನೂರಾರು ಕಿಮೀ ಆರಾಮವಾಗಿ ಓಡಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net